Advertisement

Maravanthe- ತ್ರಾಸಿ ಬೀಚ್‌: ಬಂಡೆಗಳು ಜಾರುತ್ತಿದ್ದರೂ ಪ್ರವಾಸಿಗರ ಮೋಜಿನಾಟ

01:48 PM Sep 15, 2024 | Team Udayavani |

ಕುಂದಾಪುರ: ವಿಶ್ವ ವಿಖ್ಯಾತ ತ್ರಾಸಿ – ಮರವಂತೆ ಬೀಚ್‌ ಮಳೆಗಾಲದಲ್ಲಿ ಪ್ರವಾಸಿಗರನ್ನು ಹೆಚ್ಚಾಗಿಯೇ ಸೆಳೆಯುತ್ತಿದೆ. ಹೆದ್ದಾರಿಗೆ ಹೊಂದಿಕೊಂಡಿರುವ ಬೀಚ್‌ ಆಕರ್ಷಣೀಯ ಕೇಂದ್ರ ಬಿಂದು. ಆದರೆ ಈಗ ನಿರಂತರ ಮಳೆಯಿಂದಾಗಿ ತಡೆಗೋಡೆಗೆ ಹಾಕಲಾದ ಬಂಡೆಗಳಲ್ಲಿ ಪಾಚಿ ಕಟ್ಟಿದ್ದು, ಅದರಲ್ಲಿಯೇ ನಿಂತು ಪ್ರವಾಸಿಗರು ಮೋಜಿನಾಟ ಆಡುತ್ತಿರುವುದು ಆತಂಕ ಸೃಷ್ಟಿಸಿದೆ.

Advertisement

ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಇಲ್ಲಿನ ಸೌಂದರ್ಯಕ್ಕೆ ಮನಸೋತು, ವಾಹನಗಳಿಂದ ಇಳಿದು ಬರುವುದು ಸರ್ವೇ ಸಾಮಾನ್ಯ. ಆದರೆ ಈಗಂತೂ ಕೆಲವರು ಜಾರುತ್ತಿರುವ ಬಂಡೆಗಳಿಗೂ ಇಳಿದು, ಎಚ್ಚರಿಕೆಗಾಗಿ ಕಟ್ಟಿರುವ ರಿಬ್ಬನ್‌ಗಳನ್ನು ದಾಟಿ, ಮುಂದೆ ತೆರಳಿ, ಸೆಲ್ಫಿ, ಅಲೆಗಳ ಜತೆಗೆ ಹುಚ್ಚಾಟ ನಡೆಸುತ್ತಿರುವುದು ಕಂಡು ಬರುತ್ತಿದೆ. ಇನ್ನು ಕೆಲವರಂತೂ ನೀರಿಗೆ ಇಳಿದು ಆಟ ಆಟವಾಡುವ ದೃಶ್ಯವೂ ಕಾಣುತ್ತಿದೆ.

ತ್ರಾಸಿ-ಮರವಂತೆ ಬೀಚ್‌ನಲ್ಲಿ ಅಂದಾಜು 90 ಕೋ. ರೂ. ವೆಚ್ಚದಲ್ಲಿ ನಡೆದಿರುವ ‘ಟಿ’ಆಕಾರದ ತಡೆಗೋಡೆ ಮರವಂತೆ ಬೀಚ್‌ನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗಳಿಸಿದೆ. ಈ ಮಾರ್ಗವಾಗಿ ಸಂಚರಿಸುವವರು ಒಂದರೆಕ್ಷಣ ನಿಂತು, ಕಡಲ ಅಲೆಗಳ ಸೌಂದರ್ಯವನ್ನು ಆಸ್ವಾದಿಸುವುದು ಸಾಮಾನ್ಯ. ಆದರೆ ಟೆಟ್ರಾಫೈಡ್‌ನಿಂದ ನಿರ್ಮಿಸಲಾದ ತಡೆಗೋಡೆಯಲ್ಲಿ ಪಾಚಿಯಿಂದಾಗಿ ಜಾರುತ್ತಿದ್ದು, ಅಲೆ ಮತ್ತು ಕಡಲ ಸೌಂದರ್ಯ ಸವಿಯಲು ಇಲ್ಲಿ ಹೆಜ್ಜೆ ಇರಿಸುವ ಪ್ರವಾಸಿಗರು ಎಚ್ಚರ ವಹಿಸುವುದು ಅತ್ಯವಶ್ಯಕ.

ಎಚ್ಚರಿಕೆ ವಹಿಸಿ..
ತ್ರಾಸಿ- ಮರವಂತೆಯಲ್ಲಿ ತಡೆಗೋಡೆಯ ಬಂಡೆಗಳು ಪಾಚಿಗಟ್ಟಿ, ಜಾರುತ್ತಿರುವುದರಿಂದ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಅತೀ ಅವಶ್ಯಕ. ಈ ಹಿಂದೆಯೇ ಎಚ್ಚರಿಕೆ ಫಲಕ, ರಿಬ್ಬನ್‌ಗಳನ್ನು ಕಟ್ಟಲಾಗಿದೆ. ಪ್ರವಾಸಿ ಮಿತ್ರರನ್ನು ನಿಯೋಜಿಸಿದ್ದೇವೆ. ಇನ್ನಷ್ಟು ಅಗತ್ಯ ಕ್ರಮಗಳನ್ನು ಆದಷ್ಟು ಶೀಘ್ರ ಕೈಗೊಳ್ಳಲಾಗುವುದು.
– ಕುಮಾರ ಸಿ.ಯು., ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ಉಡುಪಿ

ಎಚ್ಚರಿಕೆಗಿಲ್ಲ ಬೆಲೆ
ತ್ರಾಸಿ-ಮರವಂತೆ ಬೀಚ್‌ನುದ್ದಕ್ಕೂ ಪೊಲೀಸ್‌ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಎಚ್ಚರಿಕೆಯ ನಾಮಫಲಕ, ಕೆಲವು ಸಂಘ-ಸಂಸ್ಥೆಗಳ ವತಿಯಿಂದ ಕೆಲ ತಡೆಗೋಡೆಗಳಿಗೆ ಕೆಂಪು ರಿಬ್ಬನ್‌ಗಳನ್ನು ಅಳವಡಿಸಲಾಗಿದೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ಮಾತ್ರ ಈ ಎಚ್ಚರಿಕೆ ಫಲಕಕ್ಕೆ ಬೆಲೆಯೇ ಕೊಡುತ್ತಿಲ್ಲ. ಇದನ್ನು ತಿಳಿ ಹೇಳಲು ಅಥವಾ ಕಲ್ಲು ಬಂಡೆಗಳಿಗೆ ಇಳಿಯದಂತೆ ಎಚ್ಚರಿಸಲು ಇಲ್ಲಿ ಬೆರಳಣಿಕೆಯಷ್ಟು ಪ್ರವಾಸಿ ಮಿತ್ರರು ಮಾತ್ರವಿದ್ದಾರೆ. ಆರೇಳು ಕಿ.ಮೀ. ದೂರದ ಕಡಲ ಕಿನಾರೆಗೆ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಪ್ರವಾಸಿ ಮಿತ್ರರು, ಹೆಚ್ಚಿನ ಪ್ರವಾಸಿಗರಿರುವ ವೇಳೆ ಪೊಲೀಸರನ್ನು ನಿಯೋಜಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಕಳೆದ ವರ್ಷ ದುರಂತ…
ಜೂನ್‌ನಿಂದ ಈವರೆಗೂ ನಿರಂತರ ಮಳೆಯಾಗುತ್ತಿರುವುದರಿಂದ, ಈ ಬಾರಿ ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನ ಮಳೆಯಾಗಿದ್ದರಿಂದ ಈ ತಡೆಗೋಡೆಯ ಕಲ್ಲುಗಳು ಅಲೆಗಳ ಹೊಡೆತಕ್ಕೆ ಸಿಲುಕಿ ಹಸುರು ಪಾಚಿಗಳಿಂದ ಆವರಿಸಿಕೊಂಡಿದೆ. ಬಂಡೆಗಳಲ್ಲಿ ದಪ್ಪನಾದ ಪಾಚಿ ಕುಳಿತಿದೆ. ಕಡಲ ಸೌಂದರ್ಯ ವೀಕ್ಷಿಸಲೆಂದು ಬರುವ ಮಂದಿ ತಡೆಗೋಡೆ ಕಲ್ಲಿನ ಮೇಲೆ ಹೆಜ್ಜೆಯಿರಿಸಿ ಮೈಮರೆತರೆ ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆಯೇ ಸರಿ. ಇದಲ್ಲದೆ ಈ ಕಲ್ಲು ಬಂಡೆಗಳಿಗೆ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತವೆ. ಇಲ್ಲಿ ಸುರಕ್ಷತಾ ಕ್ರಮವಾಗಿ ಕಡಲಿಗೆ ಇಳಿಯುವುದನ್ನು ನಿರ್ಬಂಧಿಸಲಾಗಿದೆ. ಆದರೂ ದೂರದ ಊರುಗಳಿಂದ ಬರುವ ಪ್ರವಾಸಿಗರು, ಎಚ್ಚರಿಕೆಯನ್ನೂ ಲೆಕ್ಕಿಸದೇ, ನೀರಿಗಿಳಿದು, ಆಟ ಆಡುತ್ತಿರುವುದು ಆತಂಕ ಮೂಡಿಸಿದೆ. ಇಲ್ಲಿನ ಕಡಲ ತೀರದಲ್ಲಿ ನೀರಿಗಿಳಿಯುವುದು ಹೆಚ್ಚು ಅಪಾಯಕಾರಿ. ಕಳೆದ ವರ್ಷ ಇದೇ ಮರವಂತೆ ಬೀಚ್‌ನಲ್ಲಿ ಯುವಕನೊಬ್ಬ ನೀರಿಗಿಳಿದು ಮೊಬೈಲ್‌ನಲ್ಲಿ ಫೋಟೋ ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋದ ದುರಂತ ಘಟನೆಯೂ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next