ಹುಬ್ಬಳ್ಳಿ: ಇಲ್ಲಿನ ರೈಲ್ವೆ ಗಾಲ್ಫ್ ಮೈದಾನದಲ್ಲಿ ಬೆಳಗಿನ ಜಾವ ಸಾರ್ವಜನಿಕರ ವಾಯುವಿಹಾರಕ್ಕೆ ಅನಗತ್ಯ ಅಡ್ಡಿಯುಂಟು ಮಾಡುತ್ತಿರುವ ರೈಲ್ವೆ ಇಲಾಖೆ ವರ್ತನೆ ಖಂಡಿಸಿ ಮೈದಾನದ ಎದುರು ಸೋಮವಾರ ಪ್ರತಿಭಟಿಸಲಾಯಿತು. ಮೊಂಡುತನ ಮುಂದುವರಿದರೆ ಮೈದಾನಕ್ಕೆ ರಸ್ತೆ ಹಾಗೂ ನೀರು ಸರಬರಾಜು ಸ್ಥಗಿತಕ್ಕೆ ಪಾಲಿಕೆ ಮೇಲೆ ಒತ್ತಡ ತರುವ ಎಚ್ಚರಿಕೆ ನೀಡಲಾಯಿತು.
ರೈಲ್ವೆ ಗಾಲ್ಫ್ ಮೈದಾನದಲ್ಲಿ ಅನೇಕ ವರ್ಷಗಳಿಂದ ಸಾರ್ವಜನಿಕರು ವಾಯುವಿಹಾರ ಮಾಡುತ್ತ ಬಂದಿದ್ದು, ಕೆಲ ತಿಂಗಳಿಂದ ರೈಲ್ವೆ ಇಲಾಖೆಯವರು ಅಡ್ಡಿ ಪಡಿಸುತ್ತಿದ್ದಾರೆ. ಬೆಳಗ್ಗೆ ಬರುವ ವಾಯುವಿಹಾರಿಗಳಿಗೆ ಮೂರು ತಿಂಗಳಿಗೆ 250 ರೂ. ಶುಲ್ಕ ನಿಗದಿ ಮಾಡಿದ್ದಾರೆ.
ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಎಲ್ಲ ಕಡೆಗೂ ಬೆಳಗಿನ ವಾಯುವಿಹಾರಿಗಳಿಗೆ ಉಚಿತ ಪ್ರವೇಶದ ಅವಕಾಶ ನೀಡಲಾಗಿದೆ. ಆದರೆ, ರೈಲ್ವೆ ಇಲಾಖೆಯವರು ಮಾತ್ರ ಶುಲ್ಕ ನಿಗದಿ ಮಾಡುವ ಮೂಲಕ ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎಚ್ಚರಿಕೆ: ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ವಾಯುವಿಹಾರಿಗಳಿಗೆ ತೊಂದರೆ ನೀಡುವುದು ಬೇಡ ಎಂದು ಈ ಹಿಂದೆಯೇ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೂ ಪದೇ ಪದೇ ತೊಂದರೆ ಉಂಟು ಮಾಡುವ ಕಾರ್ಯ ನಡೆಯುತ್ತಿದೆ.
ರೈಲ್ವೆ ಇಲಾಖೆ ಮೊಂಡುತನ ಇದೇ ರೀತಿ ಮುಂದುವರಿದರೆ ಮೈದಾನದ ರಸ್ತೆ ಹಾಗೂ ನೀರು ಸರಬರಾಜು ಸ್ಥಗಿತಕ್ಕೆ ಪಾಲಿಕೆಯಿಂದ ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದರು. ರೈಲ್ವೆ ಇಲಾಖೆಯ ವರ್ತನೆ ಕುರಿತಾಗಿ ಸಂಸದ ಪ್ರಹ್ಲಾದ ಜೋಶಿ ಅವರೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶೆಟ್ಟರ ಹೇಳಿದರು.
ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಮಾಜಿ ಸದಸ್ಯ ದೊರೈರಾಜ್, ಅಸೋಸಿಯೇಶನ್‌ನ ಶಿವಕುಮಾರ ಹಿರೇಮಠ, ಬಸವರಾಜ ಕುಂದಗೋಳಮಠ, ವೆಂಕಟೇಶ ಹಬೀಬ, ಜಗದೀಶ ನರೇಗಲ್ಲ ಇತರರಿದ್ದರು.