ಹುಣಸೂರು: ನಾಗರಹೊಳೆ ಉದ್ಯಾನದೊಳಗಿನ ಕಲ್ಲಹಳ್ಳ ಕೆರೆಯ ಹೆಚ್ಚುವರಿ ನೀರು ಹರಿಯುವ ದೊಡ್ಡ ಮೋರಿ ಬಳಿಯ ರಸ್ತೆ ಕೊಚ್ಚಿ ಹೋಗಿದ್ದು, ಹುಣಸೂರು-ನಾಗರಹೊಳೆ-ಕೊಡಗಿನ ಕುಟ್ಟ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಉದ್ಯಾನದಲ್ಲಿ ಕಳೆದ 15 ದಿನಗಳಿಂದ ಬೀಳುತ್ತಿದ್ದ ಭಾರೀ ಮಳೆಯಿಂದ ಕಲ್ಲಹಳ್ಳ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಕೆರೆಗೆ ನಿರ್ಮಿಸಿದ್ದ ಔಟ್‌ಲೆಟ್(ಹೆಚ್ಚುವರಿ ನೀರು ಹರಿಯಲು ನಿರ್ಮಿಸಿದ್ದ ಕಟ್ಟೆ) 10 ಮೀಟರ್ ನಷ್ಟು ಒಡೆದು ರಭಸವಾಗಿ ಹರಿದ ನೀರು ಅರ್ಧ ರಸ್ತೆಯನ್ನೇ ಹೊತ್ತೂಯ್ದಿದೆ.
ಕಲ್ಲಹಳ್ಳ ವಲಯದ ರಸ್ತೆ ಬದಿಯಲ್ಲೇ ಇರುವ ಕಲ್ಲಹಳ್ಳ ದೊಡ್ಡಕೆರೆಯಲ್ಲಿ ನೀರು ಸಂಗ್ರಹಗೊಂಡು ವನ್ಯಜೀವಿಗಳಿಗೆ ವರ್ಷವಿಡೀ ನೀರಿನ ದಾಹ ಇಂಗಿಸುವ ಸಂಜೀವಿನಿ ಕೆರೆಯಾಗಿತ್ತು. ಆದರೆ, ಸತತ ಮಳೆಯಿಂದ ಎಲ್ಲಾ ಹಳ್ಳ-ಕೊಳ್ಳ, ತೋಡುಗಳಿಂದ ನೀರು ಒಮ್ಮೆಲೆ ಹರಿದು ಬಂದಿದ್ದರಿಂದ ಚಿಕ್ಕದಾಗಿರುವ ಮೋರಿಯ ಒಂದು ಪಾರ್ಶದ ರಸ್ತೆಯನ್ನು ಕೊರೆದು ಮುನ್ನುಗ್ಗಿದೆ. ಅಲ್ಲದೇ ಈ ಬಾರಿಯ ಮಹಾಮಳೆಯು ನಾಗರಹೊಳೆ ಉದ್ಯಾನದ ಎಲ್ಲಾ ವಲಯಗಳಲ್ಲೂ ಅಲ್ಲಲ್ಲಿ ಚೆಕ್ ಡ್ಯಾಂ, ಕೆರೆಏರಿ, ರಸ್ತೆಗಳಿಗೆ ಹಾನಿಯಾಗಿರುವ ಬಗ್ಗೆಯೂ ವರದಿಯಾಗಿದೆ. ಇದು ವಿರಾಜಪೇಟೆ ತಾಲೂಕು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರಲಿದೆ.
ಸಂಚಾರ ಸ್ಥಗಿತ: ರಸ್ತೆ ಹಾಳಾಗಿರುವುದರಿಂದ ಮೈಸೂರು, ಹುಣಸೂರು, ಎಚ್.ಡಿ.ಕೋಟೆ ತಾಲೂಕುಗಳಿಂದ ಕೊಡಗಿನ ಕುಟ್ಟ, ಬಿರುನಾಣಿ, ಬಾಳೆಲೆ, ಕಾರ್ಮಾಡು, ಕಾನೂರು ಮತ್ತಿತರ ಕಡೆಗೆ ತೆರಳುತ್ತಿದ್ದ ಈ ಮಾರ್ಗದ ಎಲ್ಲಾ ಬಸ್ ಸಂಚಾರ ಸ್ಥಗಿತಗೊಂಡಿದೆ. ಹುಣಸೂರು ತಾಲೂಕಿನಿಂದ ನಿತ್ಯ ಕೊಡಗಿನ ಎಸ್ಟೇಟ್‌ಗಳಿಗೆ ಸಹಸ್ರಾರು ಮಂದಿ ಕೂಲಿ ಕೆಲಸಕ್ಕೆ ತೆರಳುವವರಿಗೂ ತೊಂದರೆಯಾಗಿದ್ದು, ಶೀಘ್ರವೇ ರಸ್ತೆ ದುರಸ್ತಿ ಕಾರ್ಯ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಗರಹೊಳೆ ಹುಲಿ ಯೋಜನೆ ಸಿಎಫ್ ನಾರಾಯಣಸ್ವಾಮಿ, ನಾಗರಹೊಳೆ ಉದ್ಯಾನದೊಳಗಿನ ಈ ಮುಖ್ಯ ರಸ್ತೆಯು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಲಿದ್ದು, ರಸ್ತೆ ಹಾಳಾಗಿರುವ ಬಗ್ಗೆ ಮಾಹಿತಿ ನೀಡಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕೋರಲಾಗಿದೆ ಎಂದರು.
ಹುಣಸೂರು-ನಾಗರಹೊಳೆ-ಕೊಡಗಿನ ಕುಟ್ಟ ಮುಖ್ಯ ರಸ್ತೆ ಹಾನಿಯಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಇಂದೇ (ಮಂಗಳವಾರ) ಸ್ಥಳಕ್ಕೆ ಎಂಜಿನಿಯರ್‌ಗಳನ್ನು ಕಳುಹಿಸಿ ವರದಿ ಪಡೆದು ಶೀಘ್ರ ದುರಸ್ತಿಕಾರ್ಯ ಕೈಗೆತ್ತಿಕೊಳ್ಳಲಾಗುವುದು.
-ಸುರೇಶ್, ವಿರಾಜಪೇಟೆ ತಾ.ಲೋಕೋಪಯೋಗಿ ಇಲಾಖೆ ಎಇಇ