Advertisement
ನದಿಯಲ್ಲಿ ಮಣ್ಣು ಹಾಕಿ, ಒಂದು ಕಡೆಯಲ್ಲಿ ಅವೈಜ್ಞಾನಿಕವಾಗಿ ಮೂರು ಮೋರಿ ಅಳವಡಿಸಿದ್ದು, ಅದರ ಮೇಲೆ ಲಾರಿ ಹೋಗುವುದಕ್ಕೆ ರಸ್ತೆ ಮಾಡಿಕೊಂಡಿದ್ದಾರೆ. ಮೂರು ಮೋರಿಗಳ ಪೈಕಿ ಎರಡರಲ್ಲಿ ಮಾತ್ರ ನೀರು ಹರಿದು ಹೋಗುತ್ತಿದೆ. ಈ ಕಾಮಗಾರಿಯಿಂದ ನೀರಿನ ಹರಿವಿಗೂ ತಡೆ ಉಂಟಾಗಿದೆ.
ಜಿಲ್ಲಾಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಪ್ರಸನ್ನ ಪಕ್ಕಳ ಮತ್ತು ಗ್ರಾಮಕರಣಿಕ ಚಂದ್ರ ನಾಯರ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನದಿಯಲ್ಲಿ ರಸ್ತೆ ಮಾಡಲು ಅನುಮತಿ ಪಡೆದಿಲ್ಲ. ರಸ್ತೆ ನಿರ್ಮಿಸಿದರೆ ನೀರು ಹರಿವು ತಡೆದಂತಾಗುತ್ತದೆ ಹಾಗೂ ಕಲುಷಿತಗೊಳ್ಳುತ್ತದೆ ಎಂಬುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಅದಲ್ಲದೆ ಇಲ್ಲಿ ರಸ್ತೆ ನಿರ್ಮಾಣವಾದರೆ ಅದು ಮುಂದೆ ದುರುಪಯೋಗ ಆಗುವ ಸಾಧ್ಯತೆಯೂ ಇದೆ. ಈ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸುವುದಾಗಿ ಪ್ರಸನ್ನ ಪಕ್ಕಳ ತಿಳಿಸಿದ್ದರು. ಅವರ ಭೇಟಿ ಬೆನ್ನಲ್ಲೇ ಇಲ್ಲಿ ಕಾಮಗಾರಿ ಆರಂಭವಾಗಿ ಸಂಜೆಯ ಹೊತ್ತಿಗೆ ರಸ್ತೆ ನಿರ್ಮಾಣ ಮುಗಿದಿತ್ತು. ಜ. 31ರ ಮಧ್ಯಾಹ್ನದಿಂದ ನದಿಯಲ್ಲಿ ರಸ್ತೆ ನಿರ್ಮಾಣ ಆಗುತ್ತಿತ್ತು. ನದಿ ನೀರು ತಡೆಯುವುದರಿಂದಾಗಿ ಮುಂದೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಮತ್ತು ನೀರು ಕಲುಷಿತಗೊಳ್ಳುವ ಬಗ್ಗೆ ಸಾರ್ವಜನಿಕ ದೂರು ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರೂ ಮರಳು ಸಾಗಾಟಗಾರರು ಮನ್ನಣೆ ನೀಡಿಲ್ಲ.