Advertisement

ಧರ್ಮ ಗುತ್ತಿಗೆ ಪಡೆದವರಿಂದ ಅಪಾಯ

12:44 PM Jan 23, 2017 | Team Udayavani |

ಕಲಬುರಗಿ: ರಾಜಕಾರಣಿಗಳ ಕುರ್ಚಿ ಗುತ್ತಿಗೆಕರಣ, ಅಧಿಕಾರಿಗಳ ಹಗರಣಗಳು, ಪುರೋಹಿತಶಾಹಿಗಳ ಧರ್ಮ ಗುತ್ತಿಗೆಯಿಂದಾಗಿ ಇವತ್ತು ಜನ ಸಾಮಾನ್ಯರು ದಿಕ್ಕು ತಪ್ಪುತ್ತಿದ್ದಾರೆ. ಇಂತಹ ವೇಳೆ ಅವರಿಗೆ ವಚನಗಳ ನೆರವು ಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಹೇಳಿದರು. 

Advertisement

ಇಲ್ಲಿನ ವಿಶ್ವೇಶ್ವರಯ್ಯ ಭವನದಲ್ಲಿ ರವಿವಾರ ಶರಣ ಸಾಹಿತಿ ಈಶ್ವರಯ್ಯ ಮಠ ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 3ನೇ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಶರಣರ ವಚನಗಳು ಅವರ, ನಡೆ-ನುಡಿ ಸಿದ್ಧಾಂತದ ಓದು ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ.

ಇದರಿಂದ ವೈಚಾರಿಕತೆ ಕಡೆಗೆ ಕೊಂಡೋಯ್ಯುವುದಲ್ಲದೆ, ಮೂಢನಂಬಿಕೆ, ಗೊಡ್ಡು ಸಂಪ್ರದಾಯದ ವಿರುದ್ಧ ನಿಲ್ಲಿಸುತ್ತದೆ. ಇಂತಹ ಚಿಂತನಗಳೇ ಜಾತಿ ವ್ಯವಸ್ಥೆಯ ವಿನಾಶದೆಡೆಗೆ ನಮ್ಮನ್ನು ಸ್ವಾವಲಂಬಿಯಾಗಿ ನಡೆಯುವ ಛಲ ಮೂಡಿಸುತ್ತದೆ ಎಂದರು. ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ನೇತೃತ್ವ ವಹಿಸಿದ್ದ ಭಾಲ್ಕಿ ಹಿರೇಮಠದ ಡಾ| ಬಸವಲಿಂಗಪಟ್ಟದ್ದೇವರು ಮಾತನಾಡಿದರು. 

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ| ಈಶ್ವರಯ್ಯ ಮಠ ಮಾತನಾಡಿ, ಜೀವನವನ್ನು ಹಸನುಗೊಳಿಸುವ, ಇರುವ ಇಹವನ್ನು ಇಷ್ಟಪಡುವ  ವಚನ ಸಾಹಿತ್ಯದ ನಿಜ ತಿರುಳು, ತತ್ವಗಳನ್ನು ಅರಿತು ಅನುಷ್ಠಾನದಲ್ಲಿ ತಂದರೆ ಬದುಕಿನಲ್ಲಿ ಅದ್ಭುತ ಬೆಳೆ ಸಾಧ್ಯ. ಆದರೆ, ನಮ್ಮೊಳಗೆ ಅಡಗಿ ಕುಳಿತಿರುವ  ಎಡಬಿಡಂಗಿಗಳಿಂದ ಇದೆಲ್ಲವೂ ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ವಚನ ಸಾಹಿತ್ಯ ಬಹುಜನ ಹಿತವನ್ನು ಬಯಸಿದ ಸಾಹಿತ್ಯ. ಅದು ಲೋಕಪ್ರಿಯವೂ ಹೌದು. ವಚನಗಳನ್ನು ಪಚನ ಮಾಡಿಕೊಂಡರೆ ಸುಖೀ ಬದುಕು ಸಾಧ್ಯ ಎಂದ ಅವರು, ವಚನಾದ್ಯಾಯಿಗಳ ಅಹಂಭಾವ, ಗುರು-ವಿರಕ್ತರ ಮೇಲಾಟಗಳಿಂದಾಗಿ ವಚನ ಸಾಹಿತ್ಯಕ್ಕೆ ಅಪಚಾರವಾಗುತ್ತಿದೆ. ಎಲ್ಲರ ಬದುಕಿಗೆ ಬೆಳಕಾಗಬಲ್ಲ ವಚನ ಸಾಹಿತ್ಯವನ್ನು ಜನರಿಗೆ ತಿಳಿ ಹೇಳುವಲ್ಲಿ ವಿಫ‌ಲರಾಗಿದ್ದೇವೆ ಎಂದರು. ಇದೇ ವೇಳೆಯಲ್ಲಿ ಸಮೃದ್ಧಿ ಸ್ಮರಣ ಸಂಚಿಕೆ ಹಾಗೂ ಅಕಾಡೆಮಿಯ ದಿನದರ್ಶಿಕೆ ಬಿಡುಗಡೆ ಗೊಳಿಸಲಾಯಿತು.

Advertisement

ಸ್ವಾಗತ ಸಮಿತಿ ಅಧ್ಯಕ್ಷ ಅಸಗರ ಅಹ್ಮದ್‌ ಚುಲಬುಲ್‌, ಗೌರವಾಧ್ಯಕ್ಷ ಮಹಾಂತಪ್ಪ ಸಂಗಾವಿ, , ಎಸ್‌.ಎಂ. ಪಟ್ಟಣಕರ್‌, ಬಿ.ಎಂ. ಪಾಟೀಲ ಕಲ್ಲೂರ, ಕೋಶಾಧ್ಯಕ್ಷ ವಿದ್ಯಾಸಾಗರ ದೇಶಮುಖಮಾಲತಿ ರೇಶ್ಮಿ, ಶಿವರಾಜ ಅಂಡಗಿ, ರೇಣುಕಾ ಢಾಂಗೆ, ಸಿದ್ದು ಪಾಟೀಲ ಹಂಚಿನಾಳ ಮತ್ತಿತರರಿದ್ದರು. ಕೆ. ಗಿರಿಮಲ್ಲ ನಿರೂಪಿಸಿದರು. ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಕಲ್ಯಾಣಕುಮಾರ ಶೀಲವಂತ ಸ್ವಾಗತಿಸಿ, ವಂದಿಸಿದರು. 

ಶೆಟ್ಟರ್‌ ಚಾಲನೆ: ಇದಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಮೆರವಣಿಗೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಚಾಲನೆ ನೀಡಿದರು. ಶಶೀಲ್‌ ಜಿ. ನಮೋಶಿ, ಜಿಪಂ ಅಧ್ಯಕ್ಷೆ ಸುವರ್ಣಾ ಎಚ್‌. ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ ಇದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ವಿಶ್ವೇಶ್ವರಯ್ಯ ಭವನದವರೆಗೆ ನಡೆದ ಈ ಮೆರವಣಿಗೆಯಲ್ಲಿ ಉಪಳಾಂವ ಗ್ರಾಮದ ಶ್ರೀರಾಮ ಕನ್ನಡ ಕಾನ್ವೆಂಟ್‌ ಶಾಲೆ ಹಾಗೂ ಬಸವ ಗುರುಕುಲ ಶಾಲೆಯ ಮಕ್ಕಳು ಶರಣ-ಶರಣೆಯರ ವೇಷಧರಿಸಿ ಸಮ್ಮೇಳನಕ್ಕೆ ಮೆರಗು ತಂದರು.   

Advertisement

Udayavani is now on Telegram. Click here to join our channel and stay updated with the latest news.

Next