ಧಾರವಾಡ: ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್ಸೆಸ್) ಜಿಲ್ಲಾ ಸಮಿತಿ ವತಿಯಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ 150 ವರ್ಷಗಳ ಹಿಂದೆಯೇ ಧ್ವನಿಯೆತ್ತಿದ ಈಶ್ವರಚಂದ್ರ ವಿದ್ಯಾಸಾಗರ್ ಅವರ 125ನೇ ಸ್ಮರಣ ದಿನದ ಅಂಗವಾಗಿ ನಗರದಲ್ಲಿ ವಿದ್ಯಾರ್ಥಿನಿಯರ ರ್ಯಾಲಿ ನಡೆಯಿತು.
ಕಲಾಭವನದಿಂದ ಹೊರಟ ರ್ಯಾಲಿ ಜುಬಿಲೀ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಮತ್ತೆ ಕಲಾಭವನ ಮೈದಾನದಲ್ಲಿ ಕೊನೆಗೊಂಡಿತು. ರ್ಯಾಲಿ ಮುಗಿದ ನಂತರ ಹೆಣ್ಣು ಮಕ್ಕಳ ಶೈಕ್ಷಣಿಕ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಎಐಎಂಎಸ್ಸೆಸ್ ರಾಜ್ಯ ಉಪಾಧ್ಯಕ್ಷರಾದ ಎಂ.ಎನ್. ಮಂಜುಳಾ ಮಾತನಾಡಿ, ದೇಶಕ್ಕೆ ಸ್ವಾತಂತ್ರ ದೊರೆತು 70 ವರ್ಷ ಕಳೆದರೂ ಮಹಿಳೆ ಇಂದಿಗೂ ಶಿಕ್ಷಣದಿಂದ ವಂಚಿತಳಾಗಿದ್ದಾಳೆ.
ದುಬಾರಿ ಶಿಕ್ಷಣದಿಂದಾಗಿ ಹೆಣ್ಣು ಮಕ್ಕಳು ಶೈಕ್ಷಣಿಕ ಅವಕಾಶಗಳಿಂದ ಮತ್ತಷ್ಟು ದೂರವುಳಿಯುವಂತಾಗಿದೆ. ಮೂಲಭೂತ ಹಕ್ಕಾದ “ಶಿಕ್ಷಣದ ಹಕ್ಕನ್ನು’ ಸರ್ಕಾರಗಳು ಇಂದು ಖಾಸಗಿಯವರಿಗೆ ಒತ್ತೆಯಿಟ್ಟಿವೆ ಎಂದರು. ಮಹಿಳಾ ಶಿಕ್ಷಣದ ಮಹತ್ವ ಅರಿತಿದ್ದ ಈಶ್ವರಚಂದ್ರ ವಿದ್ಯಾಸಾಗರ ಅವರ ಶ್ರಮದ ಫಲವಾಗಿ ಇಂದು ಕೆಲ ಹೆಣ್ಣು ಮಕ್ಕಳಾದರೂ ಉನ್ನತ ಶಿಕ್ಷಣ ಪಡೆಯುವ ವಾತಾವರಣ ನಿರ್ಮಾಣವಾಗಿದೆ.
ಆದರೂ ಸ್ವತಂತ್ರ ಭಾರತದಲ್ಲಿ ಅಕ್ಷರಸ್ಥರಾಗಿರುವ ಮಹಿಳೆಯರು ಕೇವಲ ಶೇ. 30ರಷ್ಟು ಮಾತ್ರ. ಉನ್ನತ ವ್ಯಾಸಂಗಕ್ಕೆ ಹೋಗುವವರ ಸಂಖ್ಯೆ ಕೇವಲ ಶೇ. 1 ಮಾತ್ರ. ನಮ್ಮ ಸರ್ಕಾರಗಳು ಶಿಕ್ಷಣಕ್ಕೆ ಕೇವಲ ಶೇ.3 ಕ್ಕಿಂತ ಕಡಿಮೆ ವೆಚ್ಚ ಮಾಡುತ್ತಿವೆ. ಬಜೆಟ್‌ನಲ್ಲಿ ಶಿಕ್ಷಣಕ್ಕೆ ನೀಡುವ ಅನುದಾನವನ್ನು ಕನಿಷ್ಠ ಶೇ.10 ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಎಐಎಂಎಸ್ಸೆಸ್ ನಗರ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ದೇವತ್ಕಲ್ ಮಾತನಾಡಿ, ಹೆಣ್ಣು ಮಕ್ಕಳ ಉಚಿತ ಶಿಕ್ಷಣಕ್ಕಾಗಿ ಸರ್ಕಾರ ಹೆಚ್ಚೆಚ್ಚು ಶಾಲಾ- ಕಾಲೇಜುಗಳನ್ನು ತೆರೆಯುವ ಬದಲಾಗಿ ಮುಚ್ಚುತ್ತಿದೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲೂ ಉತ್ತಮ ಶಿಕ್ಷಣ ಲಭಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷೆ ಭುವನಾ, ಕಾರ್ಯದರ್ಶಿ ಪ್ರಭಾವತಿ ಗುಗಲ್, ಗಂಗೂಬಾಯಿ ಕೋಕರೆ, ಭಾಗ್ಯಶ್ರೀ ನಿಂಗಮ್ಮ, ದೇವಮ್ಮ, ಮಾಣಿಕ್ಯ ಇತರರಿದ್ದರು.