Advertisement

ಉತ್ತರ ಕರ್ನಾಟಕ ಪ್ರತ್ಯೇಕತೆಗೆ ಏಕೀಕರಣ ರೂವಾರಿಗಳ ಬಲ

06:30 AM Jul 15, 2018 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ದಿನದಿಂದ ದಿನಕ್ಕೆ ಬಲಗೊಳ್ಳತೊಡಗಿದೆ. ಏಕೀಕರಣ ಹೋರಾಟಕ್ಕೆ ಪ್ರಮುಖ ಪಾತ್ರ ವಹಿಸಿದ್ದ, ಪ್ರತ್ಯೇಕ ರಾಜ್ಯದ ಕೂಗಿಗೆ ಸದಾ ವಿರೋಧ ತೋರುತ್ತಿದ್ದ ನಾಡೋಜ ಡಾ| ಪಾಟೀಲ ಪುಟ್ಟಪ್ಪನಂತಹವರು ಸಹ ಇದೀಗ ಪ್ರತ್ಯೇಕತೆ ಧ್ವನಿಗೆ ಬೆಂಬಲದ ಮಾತನಾಡತೊಡಗಿದ್ದಾರೆ.

Advertisement

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ನಲ್ಲಿ ಮುಂಬೈ ಕರ್ನಾಟಕ ಹಾಗೂ ಹೈದರಾಬಾದ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದ್ದು, ಈ ಭಾಗಕ್ಕೆ ಹೋಲಿಸಿದರೆ ಮುಂದುವರಿದ ಭಾಗವೆಂದೇ ಪರಿಗಣಿಸಲ್ಪಟ್ಟ ಹಳೇ ಮೈಸೂರು, ಬೆಂಗಳೂರು ಭಾಗಕ್ಕೆ ಮತ್ತೆ ಅಭಿವೃದ್ಧಿಗೆ ರತ್ನಗಂಬಳಿ ಹಾಕಲಾಗಿದೆ ಎಂಬ ನೋವು ಉತ್ತರದ ಜನರಲ್ಲಿ ಅಸಮಾಧಾನ ಹೆಚ್ಚುವಂತೆ ಮಾಡಿದೆ.

ಉತ್ತರದ ಅಭಿವೃದ್ಧಿಗೆ ಬದ್ಧ ಎಂದು ಆಡಳಿತ ನಡೆಸಿದ ರಾಜಕೀಯ ಪಕ್ಷಗಳೆಲ್ಲವೂ ಹೇಳುತ್ತ ಬಂದಿವೆಯಾದರೂ ವಾಸ್ತವದ ಸ್ಥಿತಿ ಬೇರೆಯದ್ದೇ ಆಗಿದೆ ಎಂಬುದನ್ನು ಇಲ್ಲಿ ರಸ್ತೆ, ಆಸ್ಪತ್ರೆ, ಬಸ್‌ ನಿಲ್ದಾಣ, ನೀರಾವರಿ ಯೋಜನೆ, ಉದ್ಯಮ ಹೀಗೆ ಸಾಲು ಸಾಲು ಕ್ಷೇತ್ರಗಳಲ್ಲಿನ ದುಃಸ್ಥಿತಿ ಸಾಕ್ಷಿ ಹೇಳುತ್ತಿವೆ. ಪ್ರಾದೇಶಿಕ ಅಸಮತೋಲನೆ ಸರಿದೂಗಿಸುವ ಉದ್ದೇಶದಿಂದಲೇ ರಚನೆಗೊಂಡಿದ್ದ ಡಾ.ಡಿ.ಎಂ.ನಂಜುಂಡಪ್ಪ ನೇತೃತ್ವದ ಆಯೋಗ ಸಲ್ಲಿಸಿದ್ದ ವರದಿ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಿದೆ, ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ ಎಂಬುದನ್ನು ಪರಿಶೀಲಿಸಿದರೆ ಸಾಕು, ಈ ಭಾಗದ ಬಗ್ಗೆ ಸರ್ಕಾರಗಳಿಗೆ ಕಳಕಳಿ ಏನೆಂಬುದು ತಿಳಿಯುತ್ತದೆ.

ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ನಂಜುಂಡಪ್ಪ ವರದಿಯ ಶಿಫಾರಸುಗಳನ್ನು ಎಂಟು ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕಾಗಿತ್ತು. ದಶಕ ಕಳೆದರೂ ಅದು ಇನ್ನೂ ಅರ್ಧದಷ್ಟು ಸಹ ತಲುಪಿಲ್ಲ. ವರದಿಯಲ್ಲಿ ಪ್ರಸ್ತಾಪಿಸಿದ್ದ ವಿಶೇಷ ಅಭಿವೃದ್ಧಿ ಯೋಜನೆಗೆ ನೀಡಬೇಕಾಗಿದ್ದ ಅಂದಾಜು 16 ಸಾವಿರ ಕೋಟಿ ರೂ.ಗಳನ್ನು ಇದುವರೆಗೂ ಸಮರ್ಪಕವಾಗಿ ನೀಡಿಯೇ ಇಲ್ಲ. ವರ್ಷದಿಂದ ವರ್ಷಕ್ಕೆ ಬೆಲೆಗಳ ಹೆಚ್ಚಳ ಯೋಜನೆ ಉದ್ದೇಶವನ್ನೇ ಬುಡಮೇಲು ಮಾಡುವಂತೆ ಮಾಡಿದೆ.

ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ)ಕಲಂ ಜಾರಿಗೊಂಡಿದೆ ಎಂದಿದ್ದರೂ ಇಂದಿಗೂ ಅದರ ಸಮರ್ಪಕ ಲಾಭ ಆ ಭಾಗದ ಜನತೆಗೆ ಇಲ್ಲವಾಗಿದೆ.

Advertisement

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಯತ್ನಿಸಬೇಕಾದ ರಾಜ್ಯ ಸರ್ಕಾರ ಅದರ ಬದಲು ಅನ್ಯಾಯ-ಅಸಮತೋಲನ ನೋವಿನ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂಬ ನೋವು ಈ ಭಾಗದ ಜನತೆಯನ್ನು ಕಾಡತೊಡಗಿದೆ.

ಬಜೆಟ್‌ ಪುಷ್ಟಿ:
ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ ಇದನ್ನು ಪುಷ್ಟೀಕರಿಸುವಂತಿದೆ. ಬಜೆಟ್‌ನಲ್ಲಿ ನಿಗದಿ ಪಡಿಸಿದ ಅನುದಾನದಲ್ಲಿ ಶೇ.82ರಷ್ಟು ಅನುದಾನ ಬೆಂಗಳೂರು, ಶೇ.9ರಷ್ಟು ಬೆಂಗಳೂರು-ಮೈಸೂರು ವಿಭಾಗಕ್ಕೆ, ಶೇ.7ರಷ್ಟು ಹೈದರಾಬಾದ ಕರ್ನಾಟಕ ಹಾಗೂ ಶೇ.2ರಷ್ಟು ಮುಂಬೈ ಕರ್ನಾಟಕಕ್ಕೆ ನೀಡಲಾಗಿದೆ. ಈ ಅನ್ಯಾಯ ಸಹಜವಾಗಿಯೇ ಉತ್ತರ ಕರ್ನಾಟಕದ ಜನತೆಯ ಆಕ್ರೋಶ ಹೆಚ್ಚುವಂತೆ ಮಾಡಿದೆ.

ಈ ಹಿಂದೆ ಹೈಕ ಭಾಗದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲಾಗಿತ್ತು. ನಂತರದಲ್ಲಿ ಪ್ರತ್ಯೇಕ ರಾಜ್ಯ ಬೇಡಿಕೆ ಕುರಿತಾಗಿ ಅನೇಕ ರಾಜಕೀಯ ಮುಖಂಡರು ಹೇಳಿಕೆಗಳಿಗೆ ಏಕೀಕರಣ ಹೋರಾಟಗಾರರು, ಸಾಹಿತಿಗಳು ಸೇರಿ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅಖಂಡತೆಗೆ ಧಕ್ಕೆ ಬೇಡ ಎಂದು ಬುದ್ಧಿ ಹೇಳಿದ್ದರು. ಆದರೀಗ ಏಕೀಕರಣಕ್ಕೆ ಹೋರಾಟದ ಮುಂಚೂಣಿಯಲ್ಲಿದ್ದ ನಾಡೋಜ ಪಾಟೀಲ ಪುಟ್ಟಪ್ಪನವರೇ ಆಗಿರುವ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ನೀಡಬೇಕಾದೀತು ಎಂದಿರುವುದು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವವರಿಗೆ ಬಲ ಬಂದಂತಾಗಿದೆ.

ಉತ್ತರಕ್ಕಾಗುವ ಅನ್ಯಾಯ, ತಾರತಮ್ಯ ಮುಂದುರಿರೆದರೆ ಪ್ರತ್ಯೇಕ ರಾಜ್ಯ ಕೂಗಿಗೆ ಧ್ವನಿ ನೀಡಬೇಕಾದೀತು. ಸರ್ಕಾರ ಎಚ್ಚೆತ್ತುಕೊಂಡು ಅನ್ಯಾಯ ಸರಿಪಡಿಸುವ ಕೆಲಸ ಮಾಡಲಿ.
– ನಾಡೋಜ ಡಾ.ಪಾಟೀಲ ಪುಟ್ಟಪ್ಪ., ಹಿರಿಯ ಪತ್ರಕರ್ತ

ಉತ್ತರದಲ್ಲಿ ನೀರಾವರಿ ಹಾಗೂ ರೈತರಿಗೆ ಸಮರ್ಪಕ ಯೋಜನೆ ಕಾಲಮಿತಿಯಲ್ಲಿ ಜಾರಿಗೊಳಿಸಬೇಕಾಗಿದೆ. ಹೊಸ ಯೋಜನೆಗಳು ಅವಶ್ಯವಾಗಿವೆ. ಪ್ರತ್ಯೇಕ ರಾಜ್ಯ ಎಂಬುದು ಎಲ್ಲರ ಮನಸ್ಸಿನಲ್ಲಿ ಇಲ್ಲ. ಏಕೀಕರಣದಲ್ಲಿ ಅನೇಕರ ತ್ಯಾಗ-ಬಲಿದಾನ ಇದೆ. ಪ್ರತ್ಯೇಕ ರಾಜ್ಯದ ಕೂಗಿನ ಬದಲು ಸೌಲಭ್ಯಕ್ಕೆ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಆಗಬೇಕಾಗಿದೆ.
– ನಾಡೋಜ ಡಾ.ಚೆನ್ನವೀರ ಕಣವಿ, ಹಿರಿಯ ಕವಿ

ಪ್ರತ್ಯೇಕ ರಾಜ್ಯಕ್ಕಿಂತ ನಮ್ಮ ನ್ಯಾಯ ಪಡೆಯಲು ಹೋರಾಟ ಅಗತ್ಯವಾಗಿದೆ. ಈ ಭಾಗಕ್ಕಾದ ಅನ್ಯಾಯದ ಬಗ್ಗೆ ವೈಜ್ಞಾನಿಕವಾಗಿ ಅಂಶಗಳನ್ನು ಎತ್ತಿ ತೋರಿಸಬೇಕು. ಈ ಯತ್ನಗಳಿಗೆ ಉತ್ತರ ಕರ್ನಾಟಕದ ನಾಯಕರು ಬೆಂಬಲ ನೀಡಬೇಕು. ಬಜೆಟ್‌ನಲ್ಲಾದ ಅನ್ಯಾಯದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದೆ. ಆದರೆ, ಈ ವಿಷಯವನ್ನು ವಿಪಕ್ಷ ಗಂಭೀರವಾಗಿ ಪರಿಗಣಿಸಿದಂತಿಲ್ಲ. ನಾನು ಸಂಪುಟದಲ್ಲಿದ್ದರೆ ಬಜೆಟ್‌ನಲ್ಲಾದ ಅನ್ಯಾಯ ತಡೆಗೆ ಪ್ರಾಮಾಣಿಕ ಯತ್ನ ತೋರುತ್ತಿದ್ದೆ.
– ಎಚ್‌.ಕೆ.ಪಾಟೀಲ, ಮಾಜಿ ಸಚಿವ

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next