Advertisement
ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಿಜೆಪಿಗೆ ತಕ್ಕ ಮಟ್ಟಿಗೆ ಸಮಾಧಾನ ತಂದಿದ್ದರೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್‌ಗೆ ಒಂದು ರೀತಿಯಲ್ಲಿ ಎಚ್ಚರಿಕೆ ಗಂಟೆಯೂ ಹೌದು. ಮುಂಬೈ ಕರ್ನಾಟಕ, ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಬಲ ಕಡಿಮೆಯಾಗಿರುವುದು ಆ ಪಕ್ಷದಲ್ಲಿ ಆತಂಕ ಮೂಡಿಸಿರುವುದಂತೂ ನಿಜ. ಇಲ್ಲಿ ಜೆಡಿಎಸ್ ಸಹ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಇಲ್ಲಿ ಬಿಜೆಪಿ ಬಲಿಷ್ಠವಾಗಿರುವುದು ಎರಡೂ ಪಕ್ಷಗಳ ನಿದ್ದೆಕೆಡಿಸಿದೆ. ಮುಂಬೈ ಕರ್ನಾಟಕ ಹಾಗೂ ಕರಾವಳಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್, ತುಮಕೂರು, ಮಂಡ್ಯ, ಹಾಸನದಲ್ಲಿ ಜೆಡಿಎಸ್ ಪಾರುಪತ್ಯ ಸಾಧಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಶೇ.2ರಷ್ಟು ಕಡಿಮೆ ಸ್ಥಾನ ಪಡೆದರೆ ಜೆಡಿಎಸ್ ಒಂದಷ್ಟು ಸೀಟು ಹೆಚ್ಚಿಸಿಕೊಂಡಿದೆ.
Related Articles
Advertisement
ಹಳೇ ಮೈಸೂರು ಭಾಗ ಹಾಗೂ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೂ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಮುಂಬೈ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕದಲ್ಲಿ ಮೇಲುಗೈ ಸಾಧಿಸಿರುವ ಬಿಜೆಪಿ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಹಿನ್ನೆಡೆ ಅನುಭವಿಸಿದೆ. ಕಳೆದ ಬಾರಿ ಕೆಜೆಪಿ, ಬಿಎಸ್‌ಆರ್ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ನಷ್ಟವಾಗಿದ್ದ ಕಡೆ ಈ ಬಾರಿ ಲಾಭವಾಗಿದೆ ಎಂಬುದು ಗಮನಿಸಬೇಕಾದ ಅಂಶ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಆಧಾರದ ಮೇಲೆ ಲೋಕಸಭೆ ಚುನಾವಣೆ ಮೈತ್ರಿ ನಿರ್ಧರಿಸಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಎಷ್ಟರ ಮಟ್ಟಿಗೆ ಲಾಭವಾಗಬಹುದು ಎಂಬ ಪ್ರಶ್ನೆಯೂ ಇದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ಎಚ್.ಡಿ.ಕುಮಾರಸ್ವಾಮಿ ವಹಿಸಿರುವುದರಿಂದ ಅದರ ಲಾಭ ಜಾತ್ಯತೀತ ಜನತಾದಳಕ್ಕೆ ಚುನಾವಣೆಯಲ್ಲಿ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿ ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಲಾಭ ಮಾಡಿಕೊಳ್ಳಲು ಜೆಡಿಎಸ್ ಪ್ರಯತ್ನಿಸಬಹುದು.
ಜೆಡಿಎಸ್ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸಾಧನೆ ಮಾಡಿಲ್ಲ. ಹೀಗಾಗಿ, ಆ ಪಕ್ಷದ ಜತೆ ಮೈತ್ರಿ ಮಾಡಿಕೊಂಡರೂ ಪ್ರಯೋಜನವಾಗದು ಎಂಬ ವಾದವನ್ನೂ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಇಡಬಹುದು. ಒಟ್ಟಾರೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ರಾಜಕೀಯವಾಗಿ ಚರ್ಚೆಯಂತೂ ಹುಟ್ಟುಹಾಕಿದೆ.