ನಾಗಮಂಗಲ: ರಾಜ್ಯದಲ್ಲಿನ ಕೊರೊನಾ ಕಂಟಕಕ್ಕೆ ಸರ್ಕಾರಗಳ ಬೇಜವಾಬ್ದಾರಿ ನಿರ್ಧಾರಗಳೇ ಕಾರಣ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿನ ಮುಂಬೈ ಕೊರೊನಾ ಸೊಂಕಿಗೂ ಮೋದಿಯವರ ದುಡುಕಿನ ನಿರ್ಧಾರಗಳೇ ಕಾರಣ.
ದೇಶದ ಜನತೆಗೆ ಯಾವುದೇ ಮುನ್ಸೂಚನೆ ನೀಡದೆ ಮಾ.20ರಂದು ಜನತಾ ಕರ್ಫ್ಯೂ, ಆ ಬಳಿಕ ದೇಶದ ಜನತೆಗೆ ಸ್ವರಾಜ್ಯಗಳಿಗೆ ತೆರಳಲು ಅವಕಾಶ ನೀಡಿದ ಮೇಲೆ ಲಾಕ್‌ಡೌನ್ ಮಾಡಬೇಕಿತ್ತು. ಅಂದು ಮುಂಬೈನಲ್ಲಿ ಕೊರೊನಾ ಇಷ್ಟೊಂದು ವ್ಯಾಪಕವಾಗಿ ಹರಡಿರಲಿಲ್ಲ. ಇದೀಗ ರಾಜ್ಯಕ್ಕೂ ಈ ಮಟ್ಟದಲ್ಲಿ ಸೋಂಕು ಹರಡುತ್ತಿರಲಿಲ್ಲ ಎಂದು ಹೇಳಿದರು.
ಕೊರೊನಾ ಸೋಂಕು ಸಂಕಷ್ಟದ ಲ್ಲಿಯೂ ಕೇಂದ್ರ, ರಾಜ್ಯ ಸರ್ಕಾರವಾಗಲಿ ರೈತರ ನೆರವಿಗೆ ಧಾವಿಸುತ್ತಿಲ್ಲ. ಬದಲಾಗಿ ಕಂದಾಯ, ವಿದ್ಯುತ್ ಇತರೆ ಬಿಲ್‌ಗಳನ್ನ ವಸೂಲಿ ಮಾಡುತ್ತಿದೆ. ಪ್ರಧಾನಿಗಳು ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದ್ದು ಇದನ್ನ ಪ್ರಶ್ನಿಸುವ ಯಾವೊಬ್ಬ ಸಂಸದರೂ ನಮ್ಮ ರಾಜ್ಯದಲ್ಲಿಲ್ಲ. ಇನ್ನೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೂಡ ಒಳಿತಲ್ಲ.
ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಗಿದಿರುವ ನೆಪದಲ್ಲಿ ಸರ್ಕಾರ ಪಕ್ಷದ ಕಾರ್ಯಕರ್ತರನ್ನು ನೇಮಿಸಲು ಹೊರಟಿರುವ ಕ್ರಮ ಸರಿಯಲ್ಲ ಎಂದು ಖಂಡಿಸಿದರು. ಮುಂಬೈನಿಂದ ವಾಪಸ್ ಬರುವ ವರನ್ನು ಬೇಡ ಎನ್ನಲು ಸಾಧ್ಯವಿಲ್ಲ. ಅವರೂ ನಮ್ಮವರೆ, ಆದರೆ ಅವರು ಕರ್ನಾಟಕ ಪ್ರವೇಶಕ್ಕೂ ಮುನ್ನವೇ ಪರೀಕ್ಷೆಗೊಳಪಡಿಸಬೇಕು. ಜಿಲ್ಲೆಯ ಜನಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ಸಾರ್ವಜನಿಕರು ಆತಂಕಕ್ಕೊಳಗಾಗದೆ ಅತಿ ಎಚ್ಚರದಿಂದಿರಬೇಕು. ಹೊರಗಿನಿಂದ ಬಂದವರು ನೇರವಾಗಿ ಕ್ವಾರಂಟೈನ್ ಆಗುವುದು ಎಲ್ಲರ ಹಿತ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದರು.