Advertisement

ದಶಕಗಳಿಂದ ಪಾಳುಬಿದ್ದಿದ್ದ ಕಾವೂರು ಕೆರೆ ಪುನಃಶ್ಚೇತನ

09:58 AM Mar 22, 2018 | |

ಮಹಾನಗರ: ಪಾಳು ಬಿದ್ದಿರುವ ಕೆರೆಗಳ ಪುನಃಶ್ಚೇತನಕ್ಕೆ ಮುಂದಾಗುವುದು ಬಹಳ ಅಪರೂಪ. ಈ ಕಾರಣದಿಂದಲೇ ಪಾಳು ಬಿದ್ದಿದ್ದ ಎಷ್ಟೋ ಕೆರೆಗಳು ಈಗ ಕಣ್ಮರೆಯಾಗಿವೆ. ಹೀಗಿರುವಾಗ, ಹಲವು ದಶಕಗಳಿಂದ ಪಾಳು ಬಿದ್ದಿರುವ ಕಾವೂರಿನಲ್ಲಿರುವ ಬೃಹತ್‌ ಕರೆಯೊಂದನ್ನು ಪುನಃಶ್ಚೇತನಗೊಳಿಸಿ ಅಂತರ್ಜಲ ಮಟ್ಟ ವೃದ್ಧಿಸಲು ಸ್ಥಳೀಯರೇ ಮುಂದಾಗಿದ್ದಾರೆ.

Advertisement

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಬೃಹದಾಕಾರದ ಕೆರೆಯ ಪುನಃ ಶ್ಚೇತನದ ದೃಷ್ಟಿಯಿಂದ ಯೋಜನೆಯೊಂದು ಸಿದ್ಧಗೊಳ್ಳುತ್ತಿದ್ದು, ಮೊದಲ ಹಂತವಾಗಿ ಮಾ. 25ರಂದು ಬೆಳಗ್ಗೆ 6.30ರಿಂದ ಸುಮಾರು 100 ಮಂದಿ ಸ್ವಯಂ ಸೇವಕರು ಶ್ರಮದಾನ ನಡೆಸಲಿದ್ದಾರೆ. ಕಾವೂರು ದೇಗುಲದ ಆಡಳಿತ ಮಂಡಳಿ, ಯುವ ಬ್ರಿಗೇಡ್‌ ಹಾಗೂ ಶ್ರೀ ಮಹಾಲಿಂಗೇಶ್ವರ ಕೆರೆ ಸ್ವಚ್ಛತಾ ಸಮಿತಿಯು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯವನ್ನು ಕೈಗೊಂಡಿದೆ. 

ಮೊದಲ ಹಂತದಲ್ಲಿ ಕೆರೆಯನ್ನು ಸ್ವಚ್ಛಗೊಳಿಸಿ ಬಳಿಕ ಅಗತ್ಯ ಯಂತ್ರಗಳ ಮೂಲಕ ಹೂಳು ತೆಗೆಯುವ ಕಾರ್ಯ ನಡೆಯಲಿದೆ.ಯುವ ಬ್ರಿಗೇಡ್‌ನ‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅವರ ತಂಡ ಕೂಡ ಈ ಕಾರ್ಯದಲ್ಲಿ ಪಾಲ್ಗೊಂಡು ಶ್ರಮದಾನ ನಡೆಸಲಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶ್ರಮದಾನ ನಡೆಯಲಿದ್ದು, ಸ್ವಯಂ ಸೇವಕರಿಗೆ ದೇಗುಲದ ವತಿಯಿಂದ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. 

ಧಾರ್ಮಿಕ ನಂಬಿಕೆ ಇದೆ!
ಕಾವೂರು ಕೆರೆಯನ್ನು ದೇಗುಲದ ಜಳಕದ ಕೆರೆ ಎಂದು ಕರೆಯಲಾಗುತ್ತಿದ್ದು, ಇದು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಕಾವೂರು ಕ್ಷೇತ್ರವು ಏಳು ಮಾಗಣೆಗೆ ಸಂಬಂಧಪಟ್ಟಿದ್ದು, ಕೆರೆಯಲ್ಲಿ ನೀರಿದ್ದರೆ ಮಾಗಣೆ ವ್ಯಾಪ್ತಿಯಲ್ಲಿ ನೀರಿಗೆ ತೊಂದರೆ ಇರುವುದಿಲ್ಲ ಎನ್ನುವುದು ಧಾರ್ಮಿಕ ನಂಬಿಕೆ. ಈಗ ಕೆರೆಯ ನೀರು ಪೂರ್ತಿ ಹಾಳಾಗಿರುವುದರಿಂದ 2004ರಲ್ಲಿ ದೇವರ ಜಲಕಕ್ಕಾಗಿ ಪ್ರತ್ಯೇಕ ಕೆರೆಯೊಂದನ್ನು ನಿರ್ಮಿಸಲಾಗಿದೆ.

ಈ ಕೆರೆ ತೋಡುವ ಸಂದರ್ಭ ಸುಮಾರು 12 ಅಡಿ ಅಳದಲ್ಲಿ ಕೆರೆಯ ಮೂಲ ಮಣ್ಣು ಸಿಕ್ಕಿದ್ದು, ಹೀಗಾಗಿ ಕೆರೆಯ ಒಟ್ಟು ಆಳ ಅಷ್ಟಿರಬಹುದೆಂದು ಅಂದಾಜಿಸಲಾಗಿದೆ. ಜತೆಗೆ ಕೆರೆಯ ಆಳದ ಕಲ್ಲುಹಾಸು ಕೂಡ ವಿಶಿಷ್ಟವಾಗಿದ್ದು, ನೀರು ಇಂಗುವುದಕ್ಕೆ ಪೂರಕವಾಗಿ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಿಸುತ್ತಾರೆ.

Advertisement

8.32 ಎಕ್ರೆ ವಿಸ್ತೀರ್ಣ
ದಾಖಲೆ ಪ್ರಕಾರ ಕೆರೆಯ ಒಟ್ಟು ವಿಸ್ತೀರ್ಣ 8.32 ಎಕ್ರೆ ಇದ್ದು, ಒತ್ತುವರಿ ಸೇರಿದಂತೆ ವಿವಿಧ ಕಾರಣಗಳಿಂದ ಪ್ರಸ್ತುತ ವಿಸ್ತೀರ್ಣ ಸುಮಾರು 5 ಎಕ್ರೆಗಳಷ್ಟಕ್ಕೆ ಇಳಿದಿದೆ ಎಂಬ ದೂರುಗಳು ಕೇಳಿಬರುತ್ತಿದೆ. ಜತೆಗೆ ಕೆರೆಯ ಪಕ್ಕದಲ್ಲೇ ಡ್ರೈನೇಜ್‌ ಪೈಪ್‌ ಕೂಡ ಹಾದು ಹೋಗುತ್ತಿದ್ದು, ಇದರ ನೀರು ಕೂಡ ಕೆರೆಯನ್ನು ಸೇರುತ್ತಿದೆ. ಸುತ್ತಮುತ್ತಲ ಕಾಮಗಾರಿಯ ಸಂದರ್ಭದಲ್ಲಿಯೂ ಮಣ್ಣು ಬಿದ್ದು, ಸುಮಾರು 10 ಅಡಿಗಳಷ್ಟು ಹೂಳು ತುಂಬಿಕೊಂಡಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕೆರೆಯ ನೀರನ್ನು ತೋಟಕ್ಕೆ ಉಪಯೋಗಿಸುವ ನಿಟ್ಟಿನಲ್ಲಿ ಸ್ಥಳೀಯ ಕೆಲವೊಂದು ಕುಟುಂಬಗಳು ಸಣ್ಣ ನೀರಾವರಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ ಇಲಾಖೆಗೆ ಪ್ರತಿವರ್ಷ ಇಂತಿಷ್ಟು ಶುಲ್ಕ ಪಾವತಿಸುತ್ತಿದ್ದಾರೆ. ಆದರೆ ಈಗ ಎಪ್ರಿಲ್‌ ಅಂತ್ಯಕ್ಕೆ ಕೆರೆಯ ನೀರು ಪೂರ್ತಿ ಖಾಲಿಯಾಗುತ್ತಿದೆ. 

ಕೆರೆ ಸ್ವಚ್ಛತೆ ಕಾರ್ಯ
ಕಾವೂರು ಕೆರೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಶ್ರಮದಾನವನ್ನು ಕೈಗೊಂಡಿದ್ದೇನೆ. ಮೊದಲ ಹಂತದಲ್ಲಿ ಸುತ್ತಮುತ್ತಲನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಯಂತ್ರಗಳ ಮೂಲಕ ಹೂಳು ತೆಗೆಯುವ ಕಾರ್ಯ ನಡೆಯಲಿದೆ.
-ಪ್ರಶಾಂತ್‌ ಪೈ, ಸಂಘಟಕ

ನಿರ್ವಹಣೆಗೆ ನೀಡಿಲ್ಲ
ಕಾವೂರು ಕೆರೆಯು ದೇಗುಲದಷ್ಟೇ ವರ್ಷಗಳ ಇತಿಹಾಸವನ್ನು ಹೊಂದಿದೆ. ಆದರೆ ಇಂದು ಕೆರೆಯು ಒತ್ತವರಿಯ ಜತೆಗೆ ಸಂಪೂರ್ಣ ಹೂಳು ತುಂಬಿ ಕೊಳಚೆಯಾಗಿದೆ. ಕೆರೆಯ ಅಭಿವೃದ್ಧಿಗೆ ಸರಕಾರ ಅನುದಾನ ನೀಡಿದರೂ ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ. ದೇವಳಕ್ಕೆ ನಿರ್ವಹಣೆಗಾಗಿ ಕೇಳಿದರೂ ಇಲಾಖೆ ನೀಡಿಲ್ಲ.
– ಕೆ. ಮೋಹನ ಪ್ರಭು,
ಮೊಕ್ತೇಸರರು, ಕಾವೂರು ಕ್ಷೇತ್ರ

ಕಿರಣ್‌ ಸರಪಾಡಿ 

Advertisement

Udayavani is now on Telegram. Click here to join our channel and stay updated with the latest news.

Next