ಕಟಕ್: ಗುರುವಾರದ ದ್ವಿತೀಯ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾದ ಕಟಕ್ ಪ್ರಯಾಣ ವಿಳಂಬಗೊಂಡಿದೆ. ಇದಕ್ಕೆ ಕಾರಣ, ಕಟಕ್‌ನಲ್ಲಿ ವಸತಿ ಸಮಸ್ಯೆ ತಲೆದೋರಿರುವುದು! ಮದುವೆ ಸಮಾರಂಭಗಳಿಂದಾಗಿ ಕಟಕ್‌ನ ಸ್ಟಾರ್ ಹೊಟೇಲ್ ಕೊಠಡಿಗಳೆಲ್ಲ ಮೊದಲೇ ಭರ್ತಿ ಆಗಿರುವು ದರಿಂದ ಭಾರತೀಯ ತಂಡದ ಆಟಗಾರರರಿಗೆ ವಸತಿ ಸಮಸ್ಯೆ ಉದ್ಭವಿಸಿದೆ. ಹೀಗಾಗಿ ತಂಡದ ಆಟಗಾರರು ಹಾಗೂ ಇತರ ಸದಸ್ಯರೆಲ್ಲ ಪುಣೆಯಲ್ಲೇ ಉಳಿದಿದ್ದಾರೆ. ಬುಧ ವಾರವಷ್ಟೇ ಕೊಠಡಿಗಳು ಕ್ರಿಕೆಟಿಗರಿಗೆ ಲಭಿಸಲಿವೆ ಎಂದು ತಿಳಿದು ಬಂದಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತಾಡಿದ ಒಡಿಶಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಆಶೀರ್ವಾದ್ ಬೆಹೆರಾ, “ಕಟಕ್‌ನಲ್ಲಿ ಕ್ರಿಕೆಟಿಗರಿಗೆ ತಂಗಲು ಹೊಟೇಲ್ ಕೊಠಡಿಗಳ ಕೊರತೆ ಕಾಡುತ್ತಿದೆ. ವಿಪರೀತ ಮದುವೆ ಸಮಾರಂಭಗಳೇ ಇದಕ್ಕೆ ಕಾರಣ. ಹೀಗಾಗಿ ಟೀಮ್ ಇಂಡಿಯಾ ಸದಸ್ಯರೆಲ್ಲ ಬುಧವಾರ ಬೆಳಗ್ಗೆ 11.30ಕ್ಕೆ ಕಟಕ್‌ಗೆ ಆಗಮಿಸಲಿದ್ದು, ಸಂಜೆ 4 ಗಂಟೆಗೆ ಅಭ್ಯಾಸ ಆರಂಭಿಸಲಿದ್ದಾರೆ’ ಎಂದಿದ್ದಾರೆ. “ಇದರಿಂದ ದ್ವಿತೀಯ ಏಕದಿನ ಪಂದ್ಯಕ್ಕೆ ಅಭ್ಯಾಸ ಕೊರತೆ ಕಾಡುವುದರಿಂದ ಭಾರತದ ಕ್ರಿಕೆಟಿಗರು ಪುಣೆಯಲ್ಲೇ ಪ್ರ್ಯಾಕ್ಟೀಸ್ ನಡೆಸಿದರು. ಸೋಮವಾರ ವಿಶ್ರಾಂತಿ ಪಡೆದ ಆಟಗಾರರು ಮಂಗಳವಾರ ಅಭ್ಯಾಸಕ್ಕಿಳಿದರು…’ ಎಂದೂ ಬೆಹೆರಾ ಹೇಳಿದರು. ಪಂದ್ಯದ ಸಿದ್ಧತೆ ಕುರಿತು ಪ್ರತಿಕ್ರಿಯಿಸಿದ ಬೆಹೆರಾ, “ನಮ್ಮ ಕಡೆಯಿಂದ ಎಲ್ಲ ತಯಾರಿ ಮುಗಿದಿದೆ. ಇದು ಕೂಡ ಪುಣೆ ಪಂದ್ಯದಂತೆ ಭರ್ಜರಿ ಯಶಸ್ಸು ಕಾಣಲಿದೆ. ರವಿವಾರದ ಮುಖಾಮುಖೀಯಲ್ಲಿ ಎರಡೂ ತಂಡಗಳು ಅಮೋಘ ಪ್ರದರ್ಶನ ನೀಡಿವೆ. ಹೀಗಾಗಿ ವೀಕ್ಷಕರು ಕಟಕ್ ಹಣಾಹಣಿಯನ್ನು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದಾರೆ…’ ಎಂದರು.