Advertisement

ಭಾರತಕ್ಕೆ ಹೊಸ ತಲೆನೋವು : ಲಷ್ಕರ್‌ನಿಂದ ಹೊಸ ಸಂಘಟನೆ; ಗುಪ್ತಚರ ಸಂಸ್ಥೆಗಳಿಂದ ಮಾಹಿತಿ

07:48 PM May 10, 2020 | Hari Prasad |

ಶ್ರೀನಗರ/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಘಾತಕ ಕೃತ್ಯಗಳನ್ನು ನಡೆಸುವ ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್‌-ಎ-ತಯ್ಯಬಾ ಹೊಸದಾಗಿರುವ ಸಂಘಟನೆಯನ್ನು ಹುಟ್ಟುಹಾಕಿದೆ.

Advertisement

‘ದ ರೆಸಿಸ್ಟೆನ್ಸ್‌ ಫ್ರಂಟ್‌’ (ಟಿಆರ್‌ಎಫ್) ಎಂಬ ಹೆಸರಿನ ಸಂಘಟನೆ ಕೇಂದ್ರಾಡಳಿತ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಬುಡಮೇಲು ಕೃತ್ಯಗಳ ಹೊಣೆ ಹೊತ್ತುಕೊಂಡಿದೆ ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರಕ್ಕೆ  ವರದಿ ನೀಡಿವೆ.

ಸ್ಥಳೀಯ ವ್ಯಕ್ತಿಗಳೇ ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರ ಕೃತ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಳಿಯಬೇಕು ಎನ್ನುವುದೇ ಲಷ್ಕರ್‌ ಸಂಘಟನೆಯ ಕೇಂದ್ರ ನಾಯಕರ ಗುರಿ.

ಅದಕ್ಕಾಗಿಯೇ ಹೊಸ ಸಂಘಟನೆಯನ್ನು ಸ್ಥಾಪಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ಕಳಂಕ ಕಳೆದುಕೊಳ್ಳಲು ಮಾಡಿರುವ ಉಪಾಯದ ಭಾಗವೇ ಹೊಸ ಗುಂಪಿನ ಸ್ಥಾಪನೆ.

ಈ ಮೂಲಕ ಪ್ಯಾರಿಸ್‌ನ ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವು ತಡೆ ಕಾರ್ಯಪಡೆಗೆ (ಎಫ್ಎಟಿಎಫ್) ಮಣ್ಣೆರಚುವ ಯತ್ನವೂ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವರ್ಷವೇ ಟಿಆರ್‌ಎಫ್ ಸ್ಥಾಪನೆಗೊಂಡಿರುವ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ಅರಿವು ಇತ್ತು.

Advertisement

ಇದರ ಜತೆಗೆ ಜೆ.ಕೆ.ಪಿರ್‌ಪಂಜಾಲ್‌ ಪೀಸ್‌ ಫೋರಂ ಎಂಬ ಸಂಸ್ಥೆಗಳಿಗೆ ಬೆಂಬಲ ನೀಡುವ ಮೂಲಕ ಸ್ಥಳೀಯವಾಗಿ ಕೇಂದ್ರ ಸರಕಾರದ ಪ್ರಯತ್ನಗಳಿಗೆ ವಿರೋಧವಿದೆ ಎಂಬಂತೆ ಬಿಂಬಿಸಲೂ ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಈ ಪೈಕಿ ಟಿಆರ್‌ಎಫ್ಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ನೆರೆಯ ರಾಷ್ಟ್ರ ಮುಂದಾಗಿದೆ.

ಭೂಮಿಕೆ ಸಿದ್ಧ?: ಉತ್ತರ ಕಾಶ್ಮೀರದಲ್ಲಿ ಲಷ್ಕರ್‌ ಉಗ್ರ ಮೆಹ್ರಾಜುದ್ದೀನ್‌ ಹಲ್ವಾಲ್‌ ಈಗಾಗಲೇ ಟಿ.ಆರ್‌.ಎಫ್ ಗೆ ವೇದಿಕೆ ಸಿದ್ಧಪಡಿಸುತ್ತಿದ್ದಾನೆ ಎನ್ನುತ್ತಿದೆ ಗುಪ್ತಚರ ವರದಿ. ಪಾಕಿಸ್ಥಾನದಲ್ಲಿ ಸೃಷ್ಟಿಸಲಾಗಿರುವ ಸಾಮಾಜಿಕ ಜಾಲತಾಣಗಳ ಮೂಲಕ ಅದರ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಶ್ಮೀರದಲ್ಲಿ ಬಿಗಿ ವ್ಯವಸ್ಥೆ: ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ರಿಯಾಜ್‌ ನೈಕೂ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಅನಂತರ ಕಾಶ್ಮೀರ ಕಣಿವೆಯಲ್ಲಿ ಭದ್ರತೆ ಬಿಗಿಗೊಳಿ ಸಲಾಗಿದೆ. ಮುಳ್ಳು ತಂತಿ ಬೇಲಿ, ಹೆಚ್ಚಿನ ಸಂಖ್ಯೆಯ ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ನೈಕೂ ಸ್ಥಾನಕ್ಕೆ ಸೈಫ‌ುಲ್ಲಾ?
ಎರಡು ದಿನಗಳ ಹಿಂದೆ ಕಾಶ್ಮೀರದ ಹಂದ್ವಾರದಲ್ಲಿ ಭದ್ರತಾ ಪಡೆಗಳಿಂದ ಹತನಾದ, ಹಿಜ್ಬುಲ್‌ ಮುಜಾಹಿದೀನ್‌ನ “ಎ++’ ಶ್ರೇಣಿಯ ಕಮಾಂಡರ್‌ ರಿಯಾಜ್‌ ನೈಕೂ ಸ್ಥಾನಕ್ಕೆ ಅದೇ ಸಂಘಟನೆಯ ಸೈಫ‌ುಲ್ಲಾ ಎಂಬಾತನನ್ನು ನೂತನ ಕಮಾಂಡರ್‌ ಆಗಿ ನೇಮಿಸುವ ಸಾಧ್ಯತೆಗಳು ದಟ್ಟವಾಗಿವೆ. ಕಾಶ್ಮೀರದ ಫ‌ುಲ್ವಾಮಾದ ನಿವಾಸಿಯಾಗಿರುವ ಸೈಫ‌ುಲ್ಲಾ, ಈ ಹಿಂದೆ, ಇದೇ ಸಂಘಟನೆಯ ಕಮಾಂಡರ್‌ ಆಗಿದ್ದ ಬುರ್ಹಾನ್‌ ವಾನಿಯ 12 ನುರಿತ ಉಗ್ರವಾದಿ ತಂಡದಲ್ಲಿದ್ದ.

Advertisement

Udayavani is now on Telegram. Click here to join our channel and stay updated with the latest news.

Next