ಬೆಂಗಳೂರು: ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರದ ಭವಿಷ್ಯ ಏನಾಬಹುದದೆಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ. ರಾಜೀನಾಮೆ ಪರ್ವ ಇಬ್ಬರು ಶಾಸಕರಿಗೆ ಸೀಮಿತವಾದರೆ ಸರ್ಕಾರಕ್ಕೆ ತೊಂದರೆಯಾಗುವ ಸಾಧ್ಯತೆ ಕಡಿಮೆ. ಆದರೆ, ಮತ್ತಷ್ಟು ಶಾಸಕರು ರಾಜೀನಾಮೆ ನೀಡಿದರೆ ಕಷ್ಟವಾಗಬಹುದು.
ಏಕೆಂದರೆ, ಇಬ್ಬರು ಶಾಸಕರ ರಾಜೀನಾಮೆಯಿಂದ ಸರ್ಕಾರದ ಬಲ 117 ಕ್ಕೆ ಕುಸಿತವಾಗಿದೆ. ಇಬ್ಬರು ಪಕ್ಷೇತರರು ಸರ್ಕಾರಕ್ಕೆ ಬೆಂಬಲ ನೀಡಿರುವುದರಿಂದ ಮೇಲ್ನೋಟಕ್ಕೆ ಸಮಸ್ಯೆ ಕಾಣಿಸುತ್ತಿಲ್ಲ. ಆದರೆ, ಸರ್ಕಾರ ಉರುಳುತ್ತದೆ ಎಂದಾದರೆ ಆ ಇಬ್ಬರು ಪಕ್ಷೇತರರು ಯಾವ ಕಡೆ ಬೇಕಾದರೂ ವಾಲಬಹುದು. ಆಗ ಸರ್ಕಾರದ ಬಲ 115 ಕ್ಕೆ ಇಳಿಯಲಿದೆ.
ಮ್ಯಾಜಿಕ್ ಸಂಖ್ಯೆ 113. ಇಬ್ಬರು ಶಾಸಕರು ಹೆಚ್ಚುವರಿಯಾಗಿ ಬೆಂಬಲ ಇದ್ದಂತಾಗುತ್ತದೆ. ಆದರೆ, ಮೂರ್‍ನಾಲ್ಕು ಶಾಸಕರು ರಾಜೀನಾಮೆ ಕೊಟ್ಟರೆ ಅಧಿವೇಶನ ಸಂದರ್ಭದಲ್ಲಿ ಸರ್ಕಾರಕ್ಕೆ ಮುಜುಗರ ಹಾಗೂ ಇಕ್ಕಟ್ಟಿಗೆ ಸಿಲುಕುತ್ತದೆ. ಪ್ರತಿಪಕ್ಷ ಬಿಜೆಪಿ, ಸರ್ಕಾರಕ್ಕೆ ಬಹುಮತ ಇಲ್ಲ, ಹೇಗೆ ಅಧಿವೇಶನ ನಡೆಸುತ್ತೀರಿ ಎಂದು ಪ್ರಶ್ನಿಸಿಬಹುದು.
ಆದರೆ, ಶಾಸಕರು ರಾಜೀನಾಮೆ ಕೊಟ್ಟರೂ ಸದನದಲ್ಲಿ ಬಹುಮತ ಸಂದರ್ಭದಲ್ಲಿ ಎಷ್ಟು ಸಂಖ್ಯಾಬಲ ಇದೆ ಎಂಬುದರ ಮೇಲೆ ಬಹುಮತ ಸಂಖ್ಯೆ ನಿರ್ಧಾರವಾಗುತ್ತದೆ. ಉದಾಹರಣೆಗೆ 224 ಶಾಸಕರಲ್ಲಿ ನಾಲ್ವರು ರಾಜೀನಾಮೆ ಕೊಟ್ಟರೆ 220 ಸಂಖ್ಯಾಬಲ ಆಗುತ್ತದೆ.
ಆಗ ಸರ್ಕಾರಕ್ಕೆ 111 ಶಾಸಕರ ಬಲ ಸಾಕಾಗುತ್ತದೆ. ಈ ಹಿಂದೆ ಬಿಜೆಪಿ ಸರ್ಕಾರ ರಚಿಸಿದ್ದಾಗ ಆಪರೇಷನ್ ಕಮಲ ನಡೆದು ಗದ್ದಲ ಉಂಟಾದಾಗ ಸದನದಲ್ಲಿರುವ ಸಂಖ್ಯೆ ಆಧಾರದ ಮೇಲೆ ಬಹುಮತ ನಿರ್ಧಾರವಾಗಿತ್ತು. ಸರ್ಕಾರವೂ ಬಚಾವ್ ಆಗಿತ್ತು.
ಬಿಜೆಪಿಯು 105 ಸಂಖ್ಯಾಬಲ ಹೊಂದಿದ್ದು, ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ 113 ಸಂಖ್ಯೆ ಬೇಕಾಗುತ್ತದೆ. ಕಾಂಗ್ರೆಸ್-ಜೆಡಿಎಸ್‌ನ ಬಲ 103 ಕ್ಕೆ ಕುಸಿದರೆ ಮಾತ್ರ ಬಿಜೆಪಿಗೆ ಸರ್ಕಾರ ರಚನೆ ಅವಕಾಶ ಇರುತ್ತದೆ.