Advertisement

ಇಲ್ಲಿನ ನಿವಾಸಿಗಳಿಗೆ ವರ್ಷ ಪೂರ್ತಿ ನಳ್ಳಿ ನೀರೇ ಗತಿ…!

01:00 AM Feb 18, 2019 | Team Udayavani |

ಮಲ್ಪೆ: ಕಲ್ಯಾಣಪುರ ಮೂಡುತೋನ್ಸೆ ಗ್ರಾಮದ ಬಹುತೇಕ ಭಾಗವು ಉಪ್ಪು ನೀರಿನ ಪ್ರದೇಶವಾದ್ದರಿಂದ ಇಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ.  ಗ್ರಾಮದ ಸುತ್ತಮುತ್ತಲೂ ನದಿಗಳು ಹರಿಯುತ್ತಿದ್ದು,ಉಪ್ಪು, ಕೆಂಪು ನೀರಿನಿಂದಾಗಿ ನಳ್ಳಿ ನೀರೇ ಗತಿಯಾಗಿದೆ. ಆದರೂ ಎಪ್ರಿಲ್‌ನಲ್ಲಿ ಇಲ್ಲಿ ಟ್ಯಾಂಕರ್‌ ನೀರು ಬೇಕು. ನೀರಿನ ಸಮಸ್ಯೆಯನ್ನು ಹತೋಟಿಗೆ ತರಲು ಪಂಚಾಯತ್‌ ಶತಪ್ರಯತ್ನ ನಡೆಸುತ್ತಿದೆ.

Advertisement

ಎಲ್ಲೆಲ್ಲಿ  ಸಮಸ್ಯೆಗಳು?
ಕಲ್ಯಾಣಪುರ ಗ್ರಾ.ಪಂ. ವ್ಯಾಪ್ತಿಯ ಕೆಳ ನೇಜಾರು, ಕಡವಿನ ಬಾಗಿಲು, ಮೂಡು ಕುದ್ರು, ಮೂಡುಬೆಟ್ಟು, ಹೊನ್ನಪ್ಪಕುದ್ರು, ಉಗ್ಗೆಕುದ್ರು ಭಾಗದಲ್ಲಿ ಮಾರ್ಚ್‌ ಅಂತ್ಯದಿಂದ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ಆ ವೇಳೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ.

ಕೆಳ ನೇಜಾರಿನಲ್ಲಿ  ಹೆಚ್ಚು
ಕೆಳ ನೇಜಾರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಹೆಚ್ಚು ಕಾಡುತ್ತಿದೆ. ಕೆಳ ನೇಜಾರಿನ ಪರಿಶಿಷ್ಟ ಜಾತಿ ಕಾಲನಿಗೆ ಕೆಲವೊಮ್ಮೆ 4-5 ದಿನಗಳಾದರೂ ನೀರು ಇರುವುದಿಲ್ಲ.  ಕಳೆದ ವರ್ಷ ಎಡಬೆಟ್ಟುವಿನಲ್ಲಿ ಒಂದು, ಕೆಳನೇಜಾರಿನಲ್ಲಿ ಒಂದು ತೆರೆದ ಬಾವಿಯನ್ನು ನಿರ್ಮಿಸಲಾಗಿದೆ. ಹಾಗಾಗಿ ಈ ಸಲ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಕೆಮ್ಮಣ್ಣು  ಪಡುತೋನ್ಸೆ ಗ್ರಾ.ಪಂ.
ಕೆಮ್ಮಣ್ಣು  ಪಡುತೋನ್ಸೆ ಗ್ರಾ.ಪಂ. ವ್ಯಾಪ್ತಿಯ ಎರಡು ಭಾಗಗಳಲ್ಲಿ ನದಿಗಳು, ಪಶ್ಚಿಮದಲ್ಲಿ ಸಮುದ್ರ ಇದೆ. ಇಲ್ಲಿ ಮೂರ್‍ನಾಲ್ಕು ಕುದ್ರುಗಳು ಇವೆ. ಹಾಗಾಗಿ ಎಲ್ಲ ಕಡೆ ಉಪ್ಪು ನೀರಿನಿಂದಾಗಿ ವರ್ಷದ 12 ತಿಂಗಳು ಗ್ರಾಮದ ಜನರು ಪಂಚಾಯತ್‌ ನೀರನ್ನೆ ಅವಲಂಬಿಸಬೇಕಾದ ಸ್ಥಿತಿ ಇದೆ. ಇಲ್ಲಿಯವರೆಗೂ ಟ್ಯಾಂಕರ್‌ ನೀರು ಕೊಡುವ ಪರಿಸ್ಥಿತಿ ಎದುರಾಗಿಲ್ಲ.

ಕುಸಿಯುವ ಭೀತಿಯಲ್ಲಿ ಹಳೆಬಾವಿ
ಕಲ್ಯಾಣಪುರ ಮತ್ತು ಕೆಮ್ಮಣ್ಣು  ಎರಡು ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿರುವ ಕೆಮ್ಮಣ್ಣು ಗುಡ್ಯಾಂ ಬಳಿ ಇರುವ ಹಳೆಯ ಬಾವಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈಗಾಗಲೇ ಇದರ ಕಲ್ಲು ಜರಿದು ಹೋಗಿ, ಸ್ಲಾ$Âಬ್‌ಗಳು ಕುಸಿದಿವೆ. ಒಂದು ವೇಳೆ ಬಾವಿ ಕುಸಿದು ಬಿದ್ದರೆ ಎರಡೂ ಗ್ರಾಮಗಳಿಗೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇವೆ.

Advertisement

ಬಾವಿಗಳ ನಿರ್ವಹಣೆ ಅಗತ್ಯ
ಕಲ್ಯಾಣಪುರ ಗ್ರಾ. ಪಂ. ವ್ಯಾಪ್ತಿಯ ಬಗ್ಗರಬೆಟ್ಟು ಬಳಿ ಇರುವ ಪಟ್ಲಕೆರೆ ಬಾವಿಯಲ್ಲಿ ಸಾಕಷ್ಟು ನೀರಿನ ಮೂಲ ಇದ್ದರೂ, ಸೂಕ್ತ ನಿರ್ವಹಣೆ ಇಲ್ಲದೆ ಬಾವಿಯೊಳಗೆ ಹುಲ್ಲು ಕಸ ಕಡ್ಡಿರಾಶಿ ಬಿದ್ದಿವೆ. ಆದೇ ರೀತಿ ಕೆಮ್ಮಣ್ಣು ಜ್ಯೂನಿಯರ್‌ ಕಾಲೇಜು ಬಳಿ ಬಾವಿಗೆ ಮೇಲೆ ರಕ್ಷಣಾ ಹೊದಿಕೆ ಇಲ್ಲದೆ ಕಸಗಳು ತುಂಬುತ್ತಿವೆ. ಬಾವಿ ನಿರ್ವಹಣೆಯ ಬಗ್ಗೆ ಗಮನ ಹರಿಸಬೇಕಾಗಿದೆ.

ಭರವಸೆ ಮಾತ್ರ
ಬಾವಿ ದುರಸ್ತಿಯ ಬಗ್ಗೆ ತಾ. ಪಂ., ಜಿ. ಪಂ. ಗೆ ಹಲವು ಬಾರಿ ಮನವಿ ಮಾಡಲಾಗಿದೆ. ಜಿ. ಪಂ. ಕಳೆದ ವರ್ಷ ಬಾವಿ ದುರಸ್ತಿಗಾಗಿ 15 ಲಕ್ಷ ರೂ. ಇಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಇದುವರೆಗೂ ಯಾವುದೇ ಸ್ಪಂದನೆ ಇಲ್ಲ. ಬಾವಿ ಕೈಕೊಟ್ಟರೆ ಸಮಸ್ಯೆ ಎದುರಾಗುತ್ತದೆ.
– ಫೌಸಿಯಾ ಸಾದಿಕ್‌, ಅಧ್ಯಕ್ಷರು ತೋನ್ಸೆ  ಗ್ರಾ.ಪಂ.

ಟ್ಯಾಂಕರ್‌ ನೀರು
ಗ್ರಾಮದಲ್ಲಿ  ಸದ್ಯದ ಮಟ್ಟಿಗೆ ಎಲ್ಲೂ ಹೇಳಿಕೊಳ್ಳುವಂಥ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಎಪ್ರಿಲ್‌ ಬಳಿಕ ಸಮಸ್ಯೆ ತಲೆದೋರಿದಾಗ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸಲಾಗುತ್ತದೆ.
– ಪುಷ್ಪಾ, ಅಧ್ಯಕ್ಷರು ,ಕಲ್ಯಾಣಪುರ ಗ್ರಾ.ಪಂ.

ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆ ಪ್ರಸ್ತಾವನೆ
ಕಲ್ಯಾಣಪುರದಲ್ಲಿ ವರ್ಷದಿಂದ ವರ್ಷಕ್ಕೆ ಸಮಸ್ಯೆ ಕಡಿಮೆಯಾಗುತ್ತಿದೆ. ಕಳೆದ ವರ್ಷ ಟ್ಯಾಂಕರ್‌ ನೀರಿಗೆ 2ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಅದರ ಹಿಂದಿನ ವರ್ಷ ಅದಕ್ಕಿಂತ ಹೆಚ್ಚು ಖರ್ಚಾಗಿತ್ತು. ಕೆಳನೇಜಾರಿನಲ್ಲಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಪೈಪ್‌ಲೈನ್‌ ಸರಿಯಿಲ್ಲದೆ ಸಮಸ್ಯೆ ಆಗುತ್ತಿತ್ತು. ಅದನ್ನು ಈಗ ಸರಿಪಡಿಸಲಾಗಿದೆ. ನೇಜಾರು ಬಳಿ ಹೊಸ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
– ಸುರೇಶ್‌, ಪಿಡಿಒ, ಕಲ್ಯಾಣಪುರ ಗ್ರಾ.ಪಂ.

– ನಟರಾಜ್ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next