Advertisement

ವರದಿ ಶೀಘ್ರ ಸರಕಾರಕ್ಕೆ ಸಲ್ಲಿಕೆ: ಜಯಪ್ರಕಾಶ್‌ ಹೆಗ್ಡೆ

10:29 AM Dec 03, 2022 | Team Udayavani |

ಉಡುಪಿ: ಅನಾಥ ಮಕ್ಕಳಿಗೆ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ, ಕುಡುಬಿ ಸಮುದಾಯವನ್ನು ಪ್ರವರ್ಗ-1ರಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ಸೇರಿದಂತೆ 17 ವರದಿಯನ್ನು ಶೀಘ್ರವೇ ಸರಕಾರಕ್ಕೆ ಸಲ್ಲಿಸಲಿದ್ದೇವೆ. ಸರಕಾರದಿಂದ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಶುಕ್ರವಾರ ಪತ್ರಿ ಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಪರಿಯಾಳ ಸಮುದಾಯವನ್ನು ಮಡಿವಾಳ ಸಮುದಾಯದೊಂದಿಗೆ ಸೇರಿಸಿರುವುದು, ರಾಮ ಕ್ಷತ್ರಿಯ-ಕರ್ನಾಟಕ ಕ್ಷತ್ರಿಯ ಸಮುದಾಯ, ವೀರಶೈವ ಲಿಂಗಾಯತ ಸಮುದಾಯದ ಉಪ ಪಂಗಡಗಳ ಪಟ್ಟಿ ಸಮಸ್ಯೆ, ಕೂಡುಒಕ್ಕಲಿಗೆ ಸಮುದಾಯದ ಸಮಸ್ಯೆ ಹೀಗೆ ವಿವಿಧ ಸಮುದಾಯಕ್ಕೆ ಸಂಬಂಧಿಸಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಸಮುದಾಯಗಳ ಹಿರಿಯರಿಂದ ಮಾಹಿತಿ ಪಡೆದು, ವರದಿ ಸಿದ್ಧಪಡಿಸಲಾಗಿದೆ. ಇದನ್ನು ಸರಕಾರಕ್ಕೆ ನೀಡಲಿದ್ದೇವೆ. ವರದಿಯನ್ನು ಒಪ್ಪುವುದು ಅಥವಾ ಬಿಡುವುದು ಸರಕಾರದ ಅಂತಿಮ ನಿರ್ಣಯಕ್ಕೆ ಒಳಪಟ್ಟಿರುತ್ತದೆ ಹಾಗೂ ನಮ್ಮ ವರದಿಯು ಕೋರ್ಟ್‌ನ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂದು ವಿವರಿಸಿದರು.

ಕುರುಬ, ಹಡಪದ, ಬೇಡ, ಜಂಗಮ ಹೀಗೆ ಹಲವು ಸಮುದಾಯಗಳು  ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಲು ಮನವಿ ಸಲ್ಲಿಸಿವೆ. ಅದನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗಕ್ಕೆ ನೀಡಿದ್ದೇವೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಎರಡು ವರ್ಷ ಪೂರ್ಣಗೊಂಡಿದೆ. ಮುಂದಿನ ಕೆಲವು ತಿಂಗಳಲ್ಲಿ ಉಳಿದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ ಎಂದು ಹೇಳಿದರು.

ದಿಲ್ಲಿ ಭೇಟಿ:

ರಾಜ್ಯ ಒಬಿಸಿ ಪಟ್ಟಿಯಲ್ಲಿರುವ ಕೆಲವು ಜಾತಿಗಳನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದೆವು. ಅದರಂತೆ ಡಿ. 15,  16ಕ್ಕೆ ದಿಲ್ಲಿಗೆ ಪ್ರವಾಸ ಮಾಡಲಿದ್ದೇವೆ ಎಂದರು.

Advertisement

ಸರಕಾರ ನಿರ್ಧರಿಸಬೇಕು:

ಹಿಂದಿನ ಸರಕಾರದ ಅವಧಿಯಲ್ಲಿ ಆಯೋಗ ನಡೆಸಿದ ಸಾಮಾಜಿಕ, ಶೈಕ್ಷಣಿಕ ವರದಿಯ ಮರು ಪರಿಶೀಲನೆ ಮಾಡುವಂತೆ ಸರಕಾರ ಸೂಚಿಸಿದ್ದರೂ, ಅದರಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆ

ಯಿದೆ. ಕಾಯ್ದೆಯಂತೆ ಅಧೀನ ಕಾರ್ಯದರ್ಶಿ ವರದಿಗೆ ಸಹಿ ಹಾಕಿರಬೇಕು. ಆದರೆ, ಸಹಿ ಹಾಕಿಲ್ಲ. ಹೀಗಾಗಿ ಪುನಃ ಸರಕಾರಕ್ಕೆ ಈ ಬಗ್ಗೆ ಕೇಳಲಿದ್ದೇವೆ. ಸರಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ರಂಗ ಪ್ರವೇಶಿಸಲು ಆಸೆ :

ಸಕ್ರಿಯ ರಾಜಕಾರಣಕ್ಕೆ ಬರುವ ಆಸೆಯಿದೆ. ಆದರೆ, ಈಗ ಇರುವುದು ಸಾಂವಿಧಾನಿಕ ಹುದ್ದೆಯಾಗಿರುವುದರಿಂದ ಇದಕ್ಕೆ ರಾಜೀನಾಮೆ ನೀಡಿದ ಅನಂತರವಷ್ಟೇ ರಾಜಕೀಯ ರಂಗ ಪ್ರವೇಶ ಸಾಧ್ಯ. ಬೇರೆ ಪಕ್ಷದಿಂದ ಆಹ್ವಾನ ಬಂದರೂ ಸದ್ಯದ ಪರಿಸ್ಥಿತಿಯಲ್ಲಿ ಪಕ್ಷ ಬದಲಾಯಿಸುವ ಯೋಚನೆ ಇಲ್ಲ. ತವರು ಕ್ಷೇತ್ರದಲ್ಲಿ ಸೀಟು ಸಿಕ್ಕರೆ ಉತ್ತಮ. ಬೇರೆ ಎಲ್ಲೇ  ನೀಡಿದರೂ ಸ್ಪರ್ಧಿಸಲಿದ್ದೇನೆ. ಜನರ ಮಧ್ಯೆಯೇ ಇರುವುದರಿಂದ ಜನ ಬೆಂಬಲವೂ ಇರಲಿದೆ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next