Advertisement

ಪುರಭವನ ನವೀಕರಣಕ್ಕೆ ಭೂಮಿಪೂಜೆ

12:52 PM Jan 11, 2017 | Team Udayavani |

ಹುಬ್ಬಳ್ಳಿ: ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ಪುರಭವನ ನವೀಕರಣ ಕಾಮಗಾರಿಗೆ ಮಂಗಳವಾರ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಭೂಮಿಪೂಜೆ ನೆರವೇರಿಸಲಾಯಿತು. 

Advertisement

ಮೊದಲ ಹಂತದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾರ್ಯ ಕೈಗೊಳ್ಳಲಾಗುತ್ತದೆ. ಇದರಲ್ಲಿ ಸುಮಾರು 8 ಸಾವಿರ ಚದರ ಅಡಿ ವ್ಯಾಪ್ತಿಯ ಕಟ್ಟಡ ನವೀಕರಣ ನಡೆಯಲಿದೆ. ಇದರಲ್ಲಿ ಸುಮಾರು 2,280 ಚದರ ಅಡಿಯ ಸಭಾಭವನ ಬರಲಿದೆ.

ಅಲ್ಲದೆ, ಶೌಚಾಲಯ ನಿರ್ಮಾಣ, ಪ್ರವೇಶ ದ್ವಾರ, ಸುಮಾರು ಒಂದು ಸಾವಿರ ಚದರ ಅಡಿ ಕಚೇರಿ ಕಟ್ಟಡ, ಎರಡು ಗ್ರೀನ್‌ ರೂಮ್‌, ನಾಲ್ಕು ವಿಶ್ರಾಂತಿ ಕೋಣೆಗಳು, ಅಡುಗೆ ವಿಭಾಗ ನಿರ್ಮಾಣಗೊಳ್ಳಲಿವೆ. ಎರಡನೇ ಹಂತದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಕೆಯಾಗುತ್ತಿದ್ದು, ಇದರಲ್ಲಿ ಕಟ್ಟಿಗೆ ನೆಲಹಾಸುಗೆ ವೇದಿಕೆ, ಕುರ್ಚಿಗಳು, ಬೆಳಕು ಹಾಗೂ ಧ್ವನಿ ವ್ಯವಸ್ಥೆ ಇನ್ನಿತರ ಕಾಮಗಾರಿ ಕೈಗೊಳ್ಳಲು ಯೋಜಿಸಲಾಗಿದೆ. 

2-3 ದಿನದಲ್ಲಿ ಕಾಮಗಾರಿ ಶುರು: ಪುರಭವನ ನವೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅನಂತರ ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ, ಪಾಲಿಕೆಗೆ ಬಿಡುಗಡೆಯಾದ 2ನೇ 100 ಕೋಟಿ ರೂ.ನಲ್ಲಿ ಈ ಕಾಮಗಾರಿಗೆ 1.50 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. 

ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇನ್ನು 2-3 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು. ಕಟ್ಟಡವನ್ನು ಮೂಲರೂಪದಲ್ಲಿಯೇ ಉಳಿಸಿಕೊಂಡು ನವೀಕರಣ ಮಾಡಲಾಗುವುದು. ಕಟ್ಟಡದ ಪಾಯ ಬಲವರ್ಧನೆ ಜತೆಗೆ ಮೊದಲ ಮಹಡಿ ಕಟ್ಟಡ ನಿರ್ಮಾಣ ಮಾಡಲಾಗುವುದು. 

Advertisement

ಈ ಕಟ್ಟಡದಲ್ಲಿ ನಾಟಕ, ನೃತ್ಯ ಇತ್ಯಾದಿ ಕಾರ್ಯಕ್ರಮಗಳಿಗೆ ಪೂರಕವಾಗಿ ಸಿದ್ಧಗೊಳಿಸಲಾಗುವುದು. ಕಟ್ಟಡಕ್ಕೆ ರಂಗಕರ್ಮಿ ಗುಡಗೇರಿ ಬಸವರಾಜ ಅವರ ಹೆಸರಿಡಲು ನಿರ್ಧರಿಸಲಾಗಿದ್ದು, ಈ ಕುರಿತು ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದರು. ದೇಶಪಾಂಡೆ ನಗರದಲ್ಲಿ ಸವಾಯಿ ಗಂಧರ್ವ ಸಭಾಭವನವನ್ನು ಸುಮಾರು 1.75 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕೈಗೊಳ್ಳಲಾಗಿದೆ.

ಇದಕ್ಕೆ ಮತ್ತೆ 1.75 ಕೋಟಿ ರೂ. ಬಿಡುಗಡೆಯಾಗಿದ್ದು, ನವೀಕರಣ ಕಾಮಗಾರಿ 6-8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು. ನೃಪತುಂಗ ಬೆಟ್ಟದ ಕೆಳಗಡೆ ಪಿರಾಮಿಡ್‌ನ್ನು ಸುಮಾರು 1.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇನ್ನಷ್ಟು ಕಾಮಗಾರಿಗೆ ಪಾಲಿಕೆಯ 4ನೇ 100 ಕೋಟಿ ರೂ.ನಲ್ಲಿ ಒಂದು ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಕೈಗೊಳ್ಳಲಾಗುವುದು ಎಂದರು.   

Advertisement

Udayavani is now on Telegram. Click here to join our channel and stay updated with the latest news.

Next