Advertisement

ಒಂದು ಯಕ್ಷಗಾನದ ರಿಹರ್ಸಲ್ಲು ಪ್ರಸಂಗ

06:40 AM Nov 05, 2017 | Harsha Rao |

ಹೈಸ್ಕೂಲಿನ ವಾರ್ಷಿಕೋತ್ಸವ ಅಂದರೆ ಯಕ್ಷಗಾನ ಇರಲೇಬೇಕು. ಅದೇ ವಿಶೇಷ ಆಕರ್ಷಣೆ. ಸಾಯಂಕಾಲ ಐದು ಗಂಟೆಯಿಂದ ಮರುದಿನ ಬೆಳಗಿನವರೆಗೂ ನಡೆಯುವ ಗ್ಯಾದರಿಂಗ್‌ನಲ್ಲಿ ಕೊನೆಯ ಮತ್ತು ಅತಿ ಮಹತ್ವದ ಕಾರ್ಯಕ್ರಮ ಅದು. ಗ್ಯಾದರಿಂಗ್‌ನ ಆರಂಭದಿಂದಲೇ ಕೊನೆಯಲ್ಲಿ ಆಟವಿದೆ ಎಂಬ ಎನೌನ್ಸ್‌ಮೆಂಟ್‌ ನಡೆದೇ ಇರುತಿತ್ತು. ಆಟದಲ್ಲಿ ಪಾರ್ಟ್‌ ಹಾಕುವ ಮಕ್ಕಳು ಒಂದು ರೀತಿ ವಿಐಪಿಗಳು. ಅವರಿಗೆ ಶಾಲೆಯ ಎಟೆಂಡೆನ್ಸ್‌ ತಾಗುತ್ತಿರಲಿಲ್ಲ. “”ರಾತ್ರಿ ರಿಹರ್ಸಲ್‌ ಲೇಟಾಯಿತು” ಎಂದು ಹೇಳಿದರೆ ಮುಗಿಯಿತು. ಯಕ್ಷಗಾನದಲ್ಲಿ ಮುಖ್ಯ ವೇಷವಾದರಂತೂ ಬಿಡಿ, ಶಾಲೆಯ ಹೀರೋಗಳು ಅವರು. ರೀಸೇಸ್‌ಗೆ ಹೋದಾಗ ಗೇರು ಮರದ ಕೆಳಗೆ ಮುಂಡಿ ಕುಣಿತ ಹೊಡೆದ, ಕಾಲಿನ ಚರ್ಮ ಸುಲಿದು ಹೋದರೂ ಮುಖದಲ್ಲಿ ಮುಗಿಯದ ಮಂದಹಾಸ. ಹುಡುಗಿಯರೂ ಅವರ ಕಡೆಯೇ ಕಣ್ಣಿನ ಮಿಂಚು ಹರಿಸುವುದು! ಉಳಿದವರಿಗೆ ಹೊಟ್ಟೆ ಉರಿಯುತ್ತಿತ್ತು. ಹೆಣ್ಣು ವೇಷ ಮಾಡುವವರಿಗಷ್ಟೇ ತುಸು ಮುಜುಗರ. ಚೂರು ಚೂರೇ ಬಂದಿದ್ದ ಮೀಸೆ ತೆಗೆಯಬೇಕು. ತುಸು ಸೊಂಟ ಬಗ್ಗಿಸಿ ಕುಣಿಯಬೇಕು. 

Advertisement

ಅಷ್ಟೇ ಅಲ್ಲ, ಛೇ! ವೇಷ ಕಟ್ಟುವಾಗ ಹೆಣ್ಣುಮಕ್ಕಳಂತೆ ಕಾಣಲು ಅವರು ಧರಿಸುವ ರೀತಿಯ ಒಳಬಟ್ಟೆಯನ್ನು ಎದೆಯ ಮೇಲೆ ಹಾಕಿಕೊಂಡು ಅದರೊಳಗೆ ಕಾಯಿದುಂಬು ಅಥವಾ ಹರಕು ಬಟ್ಟೆಯ ಚೂರುಗಳನ್ನು ಗಂಟುಕಟ್ಟಿ ಇಟ್ಟುಕೊಳ್ಳಬೇಕು. ಒಂದು ರೀತಿಯ ಲಿಂಗ ಪರಿವರ್ತನೆಯ ಪುಳಕಕ್ಕೆ ನಾವು ಕರಗಿ ಹೋಗುತ್ತಿ¨ªೆವು. ಒಮ್ಮೆ ಸುಧನ್ವಾರ್ಜುನ ಕಾಳಗದಲ್ಲಿ ಪ್ರಭಾವತಿಯ ವೇಷ ಹಾಕಿದ್ದ ನನ್ನ ಪರಿಸ್ಥಿತಿ ಬೇಡವೇ ಬೇಡ. ಕಡ್ಡಿಯಂತಿದ್ದ ನನ್ನ ಸೈಜಿಗೆ ಹೊಂದುವ ಒಳಬಟ್ಟೆಗಾಗಿ ಇಡೀ ಊರೆಲ್ಲ ಹುಡುಕಿದ್ದು. ಒಂದು ದಿನದ ಸಲುವಾಗಿ ಅದನ್ನು ಮಾರ್ಕೆಟಿನಿಂದ ತರಲು ಸಾಧ್ಯವೇ ಇಲ್ಲ. ಮತ್ತೆ ಹೇಗೋ ಹೊಂದಾಣಿಕೆ ಮಾಡಿಕೊಂಡೆವೆನ್ನಿ.

ಯಕ್ಷಗಾನಕ್ಕೆ ಅಪಸ್ವರವಿದ್ದದ್ದು ಭಟ್ಟ ಮಾಸ್ತರರಿಂದ ಮಾತ್ರ. ಅವರು ಶಾಸ್ತ್ರೀಯ ಸಂಗೀತ ಕಲಿತವರು. ಅನಾಗರಿಕ ಕಲೆ ಎಂದು ಕ್ಲಾಸುಗಳಲ್ಲಿ ಯಕ್ಷಗಾನವನ್ನು ಅವರು ಹಿಗ್ಗಾಮುಗ್ಗಾ ಬಯ್ಯುತ್ತಿದ್ದರು. “ಕೋಣನ ಸಂಗೀತ’ ಎಂದು ಅವರು ಯಕ್ಷಗಾನ ಹಾಡುಗಾರಿಕೆಯನ್ನು ವರ್ಣಿಸುತ್ತಿದ್ದರು. ಆದರೆ ಅವರದು ಒಂಟಿ ದನಿ. ಅಲ್ಲದೆ ಶಾಸ್ತ್ರೀಯ ಸಂಗೀತ ಹಾಡುವಾಗ ಅವರು ಕೈಗಳನ್ನು ಆಡಿಸುವ ವಿಚಿತ್ರ ರೀತಿಗೆ, “ಆ… ಆ…’ ಮಾಡುವ ರೀತಿಗೆ ಪ್ರೇಕ್ಷಕರಿಗೆ ನಗು ತಡೆಯಲಾಗುತ್ತಿರಲಿಲ್ಲ. ಶಾಸ್ತ್ರೀಯ ಸಂಗೀತವನ್ನು ಅಪಹಾಸ್ಯ ಮಾಡುವವರೆಲ್ಲರೂ ಅನಾಗರಿಕರು ಎಂದು ಅವರ ಮನಸ್ಸಿನಲ್ಲಿ ಇದ್ದುದರಿಂದ ನಗುವವರ ಕುರಿತು ಅವರು ಹೆಚ್ಚು ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ. ತಿಂಗಳಿಗೊಮ್ಮೆ ಆಕಾಶವಾಣಿ ಧಾರವಾಡದಲ್ಲಿ ಅವರ ಐದು ನಿಮಿಷದ ಲಘು ಸಂಗೀತ ಕಾರ್ಯಕ್ರಮ ಬರುತ್ತಿದ್ದುದರಿಂದ ಊರವರಿಗೂ ಅವರು ಹೇಳಿದ್ದು ಸತ್ಯವಿದ್ದರೂ ಇರಬಹುದು ಎಂಬ ಒಳ ಹೆದರಿಕೆ ಕೂಡ ಇತ್ತು. ಹೀಗಾಗಿ  ಊರವರು ಅವರ ಮಾತುಗಳನ್ನೂ ನಿರಾಕರಿಸುತ್ತಿರಲಿಲ್ಲ. ಆದರೂ ಯಕ್ಷಗಾನ ಯಕ್ಷಗಾನವೇ.

ಜನವರಿಯಲ್ಲಿ ಗ್ಯಾದರಿಂಗು. ಆದರೆ, ಯಕ್ಷಗಾನದ ರಿಹರ್ಸಲ್‌ ಆರಂಭವಾಗುವದು ನವೆಂಬರ್‌ನಲ್ಲಿಯೇ. ಹೆಚ್ಚು ಹುಡುಗರಿಗೆ ಅವಕಾಶ ಸಿಗಲಿ ಎಂದು ಹೆಚ್ಚು ವೇಷಗಳು ಬರುವಂತಹ ಪ್ರಸಂಗಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಪ್ರಸಂಗದ ಆಯ್ಕೆ, ರಿಹರ್ಸಲ್‌, ವೇಷಭೂಷಣ ವ್ಯವಸ್ಥೆ, ಮೈಕ್‌ ವ್ಯವಸ್ಥೆ ಎಲ್ಲಾ ಜವಾಬ್ದಾರಿ ನಾಣ ಹೆಗಡೆಯದು. ಏಕೆಂದರೆ, ಅವನ  ಬಳಿ ವೇಷಭೂಷಣಗಳ ಪೆಟ್ಟಿಗೆ, ಮೈಕ್‌ ಇತ್ಯಾದಿ ಎಲ್ಲವೂ ಇತ್ತು. ಚೆಂಡೆ-ಮದ್ದಳೆಯವರದೂ ದೋಸ್ತಿ ಇತ್ತು. ಹೀಗಾಗಿ, ಶಾಲೆಯಲ್ಲಷ್ಟೇ ಅಲ್ಲ, ಸುತ್ತಮುತ್ತಲ ಎಲ್ಲ ಹಳ್ಳಿಗಳಲ್ಲಿಯೂ ಯಕ್ಷಗಾನ ತರಬೇತಿ ಮತ್ತು ಕಾರ್ಯಕ್ರಮದ ಯಜಮಾನಿಕೆ ಅವನದೇ. ಆತ ತುಂಬ ಬಿಝಿ. ಮಳೆಗಾಲದ ನಂತರವಂತೂ ದಿನಾ ರಾತ್ರಿ ಆಟ.

“”ನಿನ್ನೆ ತದುಡಿಯಲ್ಲಿ ಸಿಂಗಾ-ಬಾಳಾ, ಇಂದು ದೋಣಿಹೊಳೆಯಲ್ಲಿ ಕೈರಮುಡ್ಡಾ, ನಾಳೆ ಹಿರೇಗುತ್ತಿಯಲ್ಲಿ ಗದಾಯುದ್ಧ”- ಹೀಗೆ ಎಲ್ಲಾ ಕಡೆಯೂ ನಾಣ ಹೆಗಡೆಯದೇ. ಒಳ್ಳೆಯ ಮನುಷ್ಯ. ಕೊಟ್ಟಷ್ಟು ದುಡ್ಡು ಸಾಕು. ಇಂತಿಷ್ಟೇ ಅಂತ ಯಾವಾಗಲೂ ಹೇಳಿದವನಲ್ಲ. ಅಲ್ಲದೆ ಯಕ್ಷಗಾನದ ಎಲ್ಲಾ ಕಸಬೂ ಆತನಿಗೆ ಬರುತ್ತಿತ್ತು. ಮೃದಂಗಕಾರನಿಗೆ ಡೀಸೆಂಟ್ರಿ ಆದರೆ ಮೃದಂಗ, ಭಾಗವತರ ಧ್ವನಿ ಬಿದ್ದು ಹೋದಾಗ ಭಾಗವತಿಕೆ, ಚಂಡೆ ಬಾರಿಸುವವನಿಗೆ ಸಿಟ್ಟು ಬಂದು ಎದ್ದು ಹೋದರೆ ಚೆಂಡೆ. ಬೇಕಾದರೆ ಒಂದು ವೇಷ. ಆಟ ಬೀಳಲು ಬಿಡದವನು ನಾಣ ಹೆಗಡೆ. ಆದ್ದರಿಂದ ಬಿಜಿಯೋ ಬಿಜಿ.

Advertisement

ರಿಹರ್ಸಲ್‌ ದಿನಾಲು ರಾತ್ರಿ ಇರುತ್ತಿತ್ತು. ಆದರೆ, ಎಷ್ಟು ಗಂಟೆಗೆ ಎಂದು ಇರಲಿಲ್ಲ. ನಾವೆಲ್ಲ ಮಕ್ಕಳು ಹೋಗುವದು ಸಂಜೆ ಐದು ಗಂಟೆಗೇ. ಅಣ್ಣ, ರಾಜಣ್ಣ, ನಾನು, ಮಹೇಶ ಮತ್ತು ಸುರೇಶ ಕಂಪೆನಿ. ಒಮ್ಮೆ ಐದು ಗಂಟೆಗೆ ರಿಹರ್ಸಲ್‌ಗೆ ಹೋಗಬೇಕಿ¨ªಾಗ ಭಟ್ಟ ಮಾಸ್ತರು ಅಂಗಡಿಯಲ್ಲಿ ನಿಂತಿದ್ದವರು ನಮಗೆ ಚೆನ್ನಾಗಿ ಬೈದಿದ್ದರು. ಯಕ್ಷಗಾನಕ್ಕಾದರೆ ರಾತ್ರಿ ಕರೆದರೆ ಐದು ಗಂಟೆಗೇ ಹಾಜರ್‌. “”ಶಾಸ್ತ್ರೀಯ ಗಾಯನ ಕ್ಲಾಸ್‌ ತಪ್ಪಿಸ್ತೀರಿ. ಒಳ್ಳೆ ಮನೆತನದ, ಚಂದ ಸ್ವರ ಇದ್ದ ಮಕ್ಕಳು ಪೂರ್ತಿ ಹಾಳಾದ್ರಿ. ರಾಜಾರಾಮ ನೀನೂ ಹಾಳಾದೆ” ಎಂದು ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಗತಿಯಿದ್ದ ರಾಜಣ್ಣನಿಗೂ ಬೈಯ್ದಿದ್ದರು.

ನಾಣ ಹೆಗಡೆಯ ಮನೆಯಲ್ಲಿ ಬಹಳ ಬಡತನವಿತ್ತು ಎಂದು ಈಗ ಅನಿಸುತ್ತದೆ. ಏಕೆಂದರೆ, ಅಡುಗೆ ಮನೆಯಲ್ಲಿ ಖಾಲಿ ಕರಡಿಗೆಗಳ ಸದ್ದು ಕೇಳಿ ಬರುತ್ತಿತ್ತು. ಅಲ್ಲದೆ ಆತ ಯಾವಾಗಲೂ ತುಸು ಸಪ್ಪಗೆ ಇರುತ್ತಿದ್ದ. ದುಡ್ಡಿದ್ದರೆ ಮನುಷ್ಯನಿಗೆ ಅಮಸಾಣಿ ಇರುತ್ತದೆ. ಆತ ಹಾಗಿರಲಿಲ್ಲ. ಅಲ್ಲಿಯ ಪರಿಸ್ಥಿತಿ ಕೂಡ ದಿನಾ ಒಂದು ರೀತಿ. ಅವನಿಗೆ ನೂರೆಂಟು ರೀತಿಯ ತಾಪತ್ರಯ. ಒಂದೊಂದು ದಿನ ನಾವು ಹೋದಾಗ ಕಂಬಳಿ ಹಾಸಿ ಅಡಿಕೆ ಸಿಪ್ಪೆಯ ಮೇಲೆ ಮಲಗಿ ಆತ ಗೊರಕೆ ಹೊಡೆಯುತ್ತಿದ್ದ. ಕಿವಿಗೆ ಕಂಬಳಿ ಕರೆ ಆಡಿಸಿದರೂ ಏಳುತ್ತಿರಲಿಲ್ಲ, ಆದ್ಭುತ ಗೊರಕೆ. ಗರಗಸದಲ್ಲಿ ಮರ ಕೊಯ್ಯುತ್ತಾರಲ್ಲ, ಅಂತಹ ಸದ್ದು. ಮಧ್ಯ ಮಧ್ಯ “ಬುಸ್‌ ಬುಸ್‌’ ಎಂದು ಶಬ್ದ. “ಮರದ ಗಂಟು ಅಡ್ಡ ಸಿಕ್ಕಿತು’ ಎಂದು ನಾವೆಲ್ಲ ನಗಾಡುತ್ತಿ¨ªೆವು. ಒಂದೊಂದು ದಿನ ನಾವು ಹೋಗುವಾಗ ಆತನ ಹೆಂಡತಿ ಮುಟ್ಟು. ರುಮಾಲು ಸುತ್ತಿ ಗೊಜ್ಜು ಬೀಸಿ ತಂಬಳಿಗೆ ವಗ್ರಣೆ ಕೊಟ್ಟು ಹೆಂಡತಿಗೆ-ಮಕ್ಕಳಿಗೆ ಊಟ ಬಡಿಸಿದ ನಂತರವೇ ರಿಹರ್ಸಲ್‌ ಚಾಲು. ಅವನ ಊಟ, ರಿಹರ್ಸಲ್‌ ಮುಗಿದ ನಂತರ ಒಂದೊಂದು ದಿನ ಅವನಿಗೆ ಸಾಯಂಕಾಲದ ನೀರು ಬಾರಿ ತೋಟಕ್ಕೆ ನೀರು ಹಾರಿಸಿ ಬರಬೇಕು. 

ಅದೆಲ್ಲ ಮುಗಿಸಿ ಆತ ಬೋನ ಕಲಸಿ ಮೃದಂಗಕ್ಕೆ ಹಚ್ಚಿ ಆಮೇಲೆ ಚಿಕ್ಕ ಸುತ್ತಿಗೆ ತೆಗೆದುಕೊಂಡು ಅಲ್ಲಿ ಇಲ್ಲಿ ಕುಟ್ಟಿ ಕುಟ್ಟಿ ಸ್ವರ ಹೊರಡಿಸುತ್ತಿದ್ದಂತೆ ಚಂದ್ರ ಮೇಲೆ ಬಂದು ಬೆಳ್ಳಿಯಂತಹ ಬೆಳದಿಂಗಳು. ಅಕ್ಕಪಕ್ಕದ ಮನೆಗಳ ದೀಪಗಳು ಆರಿ ನಾಯಿಗಳು ಬೊಗಳಲಾರಂಭಿಸಿದಾಗ ನಮ್ಮ ಕುಣಿತ ಶುರು. ನಾಣ ಹೆಗಡೆಯ ಮನೆಯ ಮೂರು-ನಾಲ್ಕು ನಾಯಿಗಳು ನಮ್ಮ ಕುಣಿತ ನೋಡಿ ಮೊದಲು ಎರಡು ದಿನ ಬೊಗಳುತ್ತ ಓಡಿಬರುತ್ತಿದ್ದವು. ಆದರೆ, ಕ್ರಮೇಣ ಅವಕ್ಕೆ ನಮ್ಮ ಕುಣಿತ ರೂಢಿಯಾಗಿ ಇವೆಲ್ಲಾ ತಮಗೆ ಸಂಬಂಧಿಸಿದ ವಿಷಯಗಳಲ್ಲ ಎಂದು ಸರಿಯಾಗಿಯೇ ಗ್ರಹಿಸಿ ನಾವೆಲ್ಲ ಎಷ್ಟು ಗದ್ದಲ ಹೊಡೆದರೂ ತಲೆಕೆಡಿಸಿಕೊಳ್ಳದೇ ಆ ಜಾಗ ಬಿಟ್ಟು ಹೋಗಿ ಕೊಟ್ಟಿಗೆ ಸೇರಿ ಮಲಗಿ ಬಿಡುತ್ತಿದ್ದವು. ಅಷ್ಟು ಹೊತ್ತಿಗೆ ಓ.ಸಿ.

ಅಂಗಡಿ ಮುಗಿಸಿ ನಾಣಶೆಟ್ಟಿ ಕೂಡ ಬಂದು ಚೆಂಡೆ ಬಾರಿಸಲು ಆರಂಭಿಸಿದರೆ ರಿಹರ್ಸಲ್‌ಗೆ ಒಂದು ರಂಗು. ರಾತ್ರಿಯ ಅದ್ಭುತ ಬೆಳದಿಂಗಳು ತೂಗಾಡಿದಾಗ ನೆರಳು ಬೆಳಕಿನ ಆಟವಾಡುವ ತೆಂಗಿನ ಮರಗಳು, ಬೆಳೆದು ನಿಂತ ಕಬ್ಬಿನ ಹೂವಿನ ತುರಾಯಿ. ಮೈಗೆ ಮುದ ನೀಡುವ ಡಿಸೆಂಬರ್‌ನ ಚಳಿಯ ಮಧ್ಯದಲ್ಲಿಯೇ ರಿಹರ್ಸಲ್‌. 

ಎಲ್ಲ ಸರಿಯಾಯಿತು ಎನ್ನುವಾಗ ತಪ್ಪಿದ ತಾಳ. ಥೂ! ಹೊಸದಾಗಿಂದ. ಕುಣಿತಕ್ಕೆ ಕಾಲುಗಳು ಕೂಡಲು ಒಂದು ತಿಂಗಳಾದರೂ ಬೇಕು. 

ಕುಣಿತದಲ್ಲಿ ಕಾಲು ಕೂಡಿದ ನಂತರ ಮಾತು-ಅಭಿನಯ ಆರಂಭ. ಸುಧನ್ವಾರ್ಜುನ  ಕಾಳಗ  ಪ್ರಸಂಗ. ಪ್ರಭಾವತಿ, ಸುಧನ್ವನ ಬಳಿ ಬಂದು, “”ನೀನು ಅರ್ಜುನನ ಬಳಿ ಯುದ್ಧಕ್ಕೆ ಹೋಗುವಾಗ ನನ್ನೊಡನೆ ಒಂದು ದಿನ ಕಳೆದು ನನಗೆ ಪುತ್ರರತ್ನ ನೀಡಿ ಹೋಗು” ಎನ್ನುವಾಗ ಅದರ ಗೂಡಾರ್ಥ ನಮಗೆ ಹೊಳೆದು ಬಿಟ್ಟು ಮುಜುಗರವೋ ಮುಜುಗರ.

ಆದರೆ, ವಿಷಯ ತಿಳಿದುಕೊಳ್ಳಲು ಹೆದರಿಕೆ. ನಾವೆಲ್ಲ ಹೆಸರಾಂತ ಕುಟುಂಬಗಳಿಂದ ಬಂದವರು. ಅಂಥ ಮಾತು ಕೇಳಲೂ ಹೆದರಿಕೆ. ನಾಳೆಯಿಂದ ಮನೆಯಲ್ಲಿ ಯಕ್ಷಗಾನ ಬೇಡವೇ ಬೇಡ ಅಂದ್ರೆ? ಆದರೆ ಎದ್ದಿದ್ದ ಪ್ರಶ್ನೆಗಳು ಜಗತ್ತಿನ ಒಳವಲಯಗಳನ್ನು ನಮ್ಮ ಮುಂದೆ ಧುತ್ತನೆ ತಂದಿಟ್ಟಿದ್ದವು. ಗಂಡು-ಹೆಣ್ಣಿನ ಸಂಬಂಧಗಳ ಕುರಿತಾದ ವಿಚಿತ್ರ ಜಗತ್ತು ನಮಗೆ ಅರ್ಥವಾಗತೊಡಗಿದ್ದೇ ಯಕ್ಷಗಾನದ ಟ್ರಯಲುಗಳಲ್ಲಿ. ಹೆಣ್ಣು ವೇಷ ಮಾಡುವವರು “”ಹುಡ್ಗಿàರು ಹೆಂಗ್‌ ನಡೀತ್ರು, ಹೇಂಗೆ ಕೊಮ್ಮಣೆ ಮಾಡ್‌ತ್ರು, ನೋಡ್ರಾ” ಎಂದು ನಾಣಶೆಟ್ಟಿ ಹೇಳಿದ್ದು ಜೋಕಿಗಾದರೂ ನಮ್ಮ ಮನಸ್ಸುಗಳಲ್ಲಿ ಹೂಬಾಣ ನಾಟಿಯೇ ಬಿಟ್ಟಿತ್ತು.

ಮೊದಲಿನ ಹಂತಗಳ ರಿಹರ್ಸಲ್‌ ಎಲ್ಲ ಮುಗಿದ ಬಳಿಕ ಡ್ರೆಸ್‌ ರಿಹರ್ಸಲ್‌. ಯಾವ ಪಾರ್ಟಿಗೆ ದೊಡ್ಡ ಮೀಸೆ, ಯಾರಿಗೆ ಬರೀ ಚಾಪುಡಿಯ ಮೀಸೆ, ಯಾರದ್ದು ಬಿಡುಮೈ ವೇಷ, ಪಗಡೆಯೋ, ಕಿರೀಟವೋ? ಉಡುಗೆಗೆ ಯಾವ ಬಣ್ಣದ ಸೀರೆ?- ಎನ್ನುವ ಪ್ರಶ್ನೆಗಳು ಈಗ. ಯಾರ ಯಾರದೋ ಮನೆ ಅಲೆದು ಆ ಎಲ್ಲ ಬಣ್ಣದ ಸೀರೆಗಳನ್ನು ಕೂಡಿಸುವದು ರಿಹರ್ಸಲ್‌ನ ಭಾಗವೇ. ನಂತರ ನಾಣ ಹೆಗಡೆಯ ಪೆಟ್ಟಿಗೆಯ ಅದ್ಭುತ ವಿಶ್ವರೂಪ ಹೊರಬರುತಿತ್ತು. ಜುಮ್ಮನ ಮುಳ್ಳಿನಿಂದ ಮಾಡಿದ ಕೈಗವಸು, ಎದೆಹಾರ, ಗದೆ, ಖಡ್ಗ ಎಲ್ಲವೂ ಬಣ್ಣ ಬಣ್ಣದ ಬೇಗಡೆ ಹಚ್ಚಿದವುಗಳು.  ತರಹೇವರಿ ಮಿಂಚುವ ಬಣ್ಣಗಳ ಲೋಕವೇ ಅವನ ಪೆಟ್ಟಿಗೆಯಿಂದ ಹೊರಬೀಳುತ್ತಿತ್ತು. ಬೇರೆಯವರಿಗೆ ಚಂದದ ಬಟ್ಟೆಗಳು ಸಿಕ್ಕಿದ್ದಕ್ಕೆ ನಮಗೆ ಹೊಟ್ಟೆ ಉರಿ.

ರಿಹರ್ಸಲ್‌ ಮುಗಿಸಿ ರಾತ್ರಿ ಹನ್ನೆರಡು ಗಂಟೆಗೋ ಒಂದು ಗಂಟೆಗೋ ಮನೆಗೆ ಹೋಗುವ ಅನುಭವವೇ ಮರೆಯಲಾರದ್ದು. ಹುಣ್ಣಿಮೆಯಾದರೆ ಹಾಲು ಚೆಲ್ಲಿದಂತೆ ತಿಂಗಳ ಬೆಳಕು. ಅಮಾವಾಸ್ಯೆಯಾದರೆ ಆಕಾಶದಲ್ಲೆಲ್ಲಾ ಬರೇ ನಕ್ಷತ್ರಗಳ ರಾಶಿ. ಬೆಳಕಿಗೆ ಕೈಯಲ್ಲಿ ಕತ್ತರಿಸಿದ ಟೈಯರಿನ ಟ್ಯೂಬಿನ ಮಂದ ಬೆಳಕು ಮತ್ತು ಘಾಟು ವಾಸನೆ. ಅಲ್ಲದಿದ್ದರೆ ಕತ್ತುತ್ತಿರುವ ಸೂಡಿಯ ಬೆಂಕಿಯ ಜತೆಗೇ ವಿಶಿಷ್ಟ ಪರಿಮಳ. ಅರೆನಿದ್ರೆ, ಅರೆಎಚ್ಚರ.

ನಾವು ಸಾಗುವ ದಾರಿಯಲೆಲ್ಲ ಕೀಲಿ ಕೊಟ್ಟಂತೆ ಸರಣಿಯಲ್ಲಿ ಬೊಗಳುವ ನಾಯಿಗಳು. ಕಾಯುವವರು ತುಸು ಎಚ್ಚರ ತಪ್ಪಿದರೂ ನಾವು ಕಬ್ಬಿನ ಗ¨ªೆಗೆ ಅಥವಾ ಶೇಂಗಾ ಗ¨ªೆಗೆ ಇಳಿದು ಮಾಡಬಹುದಾದ ಲೂಟಿಯನ್ನರಿತ ಮಾಳ ಕಾಯುವವರ “ಕೂ’ ಹಾಕುವ ಸದ್ದು. ಮನೆ ತಲಪುವಾಗ ಬರೇ “ಟಪ ಟಪ ಟಪ’ ಹೆಜ್ಜೆಯ ಸಪ್ಪಳ. “”ಇನ್ನು ಮುಂದೆ ಇಷ್ಟೊಂದು ರಾತ್ರಿ ಮಾಡಿಕೊಳ್ಳಬೇಡಿ” ಎಂದು ಮೃದುವಾಗಿ ಹೇಳಿ ಊಟ ಬಡಿಸುವ ತಾಯಿ. ಬಂದು ಹಾಸಿಗೆಯಲ್ಲಿ ಬಿದ್ದರೆ ಸತ್ತು ಹೋದಂತೆ ನಿದ್ರೆ.

ಕೊನೆಗೊಂದು ದಿನ ಆಟ. ಆಟ ಮುಗಿದ ಮೇಲೆ ಮನಸೆಲ್ಲ ಖಾಲಿ ಖಾಲಿ. ಆಟ ಮುಗಿದರೂ, ಮನಸ್ಸಿನಲ್ಲಿ ಮುಗಿಯದ ರಿಹರ್ಸಲ್ಲು.

– ರಾಮಚಂದ್ರ ಜಿ. ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next