Advertisement
ಶುಕ್ರವಾರ ರಾತ್ರಿ 11.54ರ ಸುಮಾರಿಗೆ ಆರಂಭವಾದ ಚಂದ್ರ ಗ್ರಹಣವನ್ನು ನಗರದ ಜನರು ಕಣ್ತುಂಬಿಕೊಂಡರು. ಬಹುತೇಕರು ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯದಲ್ಲಿ ತೋಡಗಿಕೊಂಡಿದ್ದಲ್ಲದೇ, ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
Related Articles
Advertisement
ಒಂದುಗಂಟೆ ಮೂರು ನಿಮಿಷ ಕಾಣಿಸಿಕೊಂಡಿದ್ದ ದೀರ್ಘಾವಧಿಯ ಚಂದ್ರಗ್ರಹಣವನ್ನು ಕಣ್ತುಂಬಿಕೊಳ್ಳಲು ನಗರದ ಜನರು ಮನೆ, ಕಟ್ಟಡ, ಬೀದಿಯಲ್ಲಿ ನಿಂತಿದ್ದರು. ಟಿ.ಚೌಡಯ್ಯ ರಸ್ತೆಯ ಜವಾಹರಲಾಲ್ ನೆಹರು ತಾರಾಲಯ, ವಿವಿಧ ವಿಜ್ಞಾನ ಸಂಘಟನೆಗಳು ಹಾಗೂ ಕೂಟಗಳು ಆಯೋಜಿಸಿದ್ದ ಗ್ರಹಣ ವೀಕ್ಷಣೆಯಲ್ಲಿ ಪಾಲ್ಗೊಂಡ ನೂರಾರು ಜನರು ದೂರದರ್ಶಕದ ಮೂಲಕ ಬಹು ಹತ್ತಿರದಲ್ಲಿ ಕೆಂಪು ಚಂದ್ರನನ್ನು ನೋಡಿ ಬೆರಗಾದರು.
ನಡುರಾತ್ರಿ 11.54ಕ್ಕೆ ಆರಂಭವಾದ ಗ್ರಹಣವು 1 ಗಂಟೆಗೆ ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣ ಆವರಿಸಿದ ಪರಿಣಾಮ ಚಂದ್ರನು ರಕ್ತದ ಬಣ್ಣಕ್ಕೆ ತಿರುಗಿದ್ದ ದೃಶ್ಯ ಮನಮೋಹಕವಾಗಿತ್ತು. 2.43 ಗಂಟೆವರೆಗೂ ಮುಂದುವರಿದ ಗ್ರಹಣ ನಸುಕಿನ ಹೊತ್ತಾದ 3.49 ಗಂಟೆಗೆ ಸಂಪೂರ್ಣ ಚಂದ್ರನನ್ನು ಬಿಟ್ಟಿತು. ಚಂದ್ರನೊಂದಿಗೆ ಕೆಂಪುಬಣ್ಣದಿಂದ ಪ್ರಕಾಶಮಾನವಾಗಿ ಮಂಗಳ ಗ್ರಹ ಕಂಗೊಳಿದ್ದು ವಿಶೇಷವಾಗಿತ್ತು.
ತಾರಾಲಯದಲ್ಲಿ ಚಂದಿರ ವೀಕ್ಷಣೆ: ಜವಾಹರ ಲಾಲ್ ನೆಹರು ತಾರಾಲಯದಲ್ಲಿ ರಾತ್ರಿ 11.54ರಿಂದ ಶನಿವಾರ ಮುಂಜಾನೆ 3.49ರವರೆಗೆ ಗ್ರಹಣ ವೀಕ್ಷಣೆಗೆ ದೂರದರ್ಶಕಗಳ ವ್ಯವಸ್ಥೆ ಮಾಡಲಾಗಿತ್ತು. ವಿಜ್ಞಾನದಲ್ಲಿ ಆಸಕ್ತ ವಿದ್ಯಾರ್ಥಿಗಳು ತಾರಾಲಯಕ್ಕೆ ಹೋಗಿ ದೂರದರ್ಶಕದಲ್ಲಿ ಚಂದ್ರನನ್ನು ನೋಡಿ ಆನಂದಿಸಿದರು. ದೂರದರ್ಶಕದಲ್ಲಿ ಮಂಗಳ ಗ್ರಹ ಸಮೀಪದಿಂದ ನೋಡಲು ಸಾಧ್ಯವಾಗಿದೆ. ಚಂದ್ರ ಗ್ರಹಣದ ವಿಶೇಷತೆ ವೈಜ್ಞಾನಿಕ ಕಾರಣಗಳ ಬಗ್ಗೆ ತಜ್ಞರು ನೆರೆದಿದ್ದ ಜನ ಸಮೂಹಕ ವಿವರಿಸಿದರು.
ಸಾಧುಗಳ ಉಪವಾಸ: ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್‌ನಲ್ಲಿ ಶುಕ್ರವಾರ ರಾತ್ರಿ 8.30ಕ್ಕೆ ಸಾರ್ವಜನಿಕ ದರ್ಶನ ನಿಲ್ಲಿಸಲಾಗಿತ್ತು. ಬಳಿಕ 120 ಸಾಧುಗಳು ಉಪವಾಸವಿದ್ದು, ಮುಂಜಾನವೆರೆಗೆ ಭಜನೆ ಮಾಡಿದರು. ಸಂಜೆ 7 ಗಂಟೆಯ ವರೆಗೆ ಪ್ರಸಾದ ವಿತರಣೆ ನಡೆದಿತ್ತು. ಪ್ರತಿ ದಿನ ಮುಂಜಾನೆ 4.15 ಗಂಟೆಗೆ ಕೃಷ್ಣರಾಧೆಗೆ ಮಹಾಪೂಜೆ ಆರಂಭವಾಗುತ್ತದೆ. ಗ್ರಹಣದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ 4.30 ಗಂಟೆಗೆ ಮಹಾಪೂಜೆ ಆರಂಭವಾಯಿತು.
ಟೌನ್‌ಹಾಲ್‌ನಲ್ಲಿ ಚಂದ್ರ: ಗ್ರಹಣ ಹಿಡಿದ ಚಂದ್ರನನ್ನು ಬರಿಗಣ್ಣಿನಲ್ಲೇ ನೋಡಬಹುದಾದರೂ ದೂರದರ್ಶಕದಲ್ಲಿ ಮತ್ತಷ್ಟು ನಿಖರವಾಗಿ ಗ್ರಹಣ ಕಾಣಲಿದೆ ಎಂಬ ಉದ್ದೇಶದಿಂದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಕಾಡು ಮಲ್ಲೇಶ್ವರ ಗೆಳೆಯರ ಬಳಗ ಮೊದಲಾದ ಸಂಘಟನೆಗಳು ಟೌನ್‌ಹಾಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದರು. ರಾತ್ರಿ 11.54 ರಿಂದ 1.43 ಗಂಟೆವರೆಗೆ ಸಾರ್ವಜನಿಕರು ಗ್ರಹಣ ಸುತ್ತಿದ ಚಂದ್ರನನ್ನು ನೋಡಿದರು. ಇದೇ ವೇಳೆ ಕೆಲ ಪ್ರಗತಿಪರ ಸಂಘಟನೆಗಳ ಸದಸ್ಯರು ಗ್ರಹಣದ ವೇಳೆಯೇ ಟೌನ್ ಹಾಲ್ ಬಳಿ ಸಾಮೂಹಿಕ ಭೋಜನ ಸವಿದು ಮೌಡ್ಯ ವಿರೋಧಿಸಿದರು.
ಮೋಡಕವಿದ ವಾತಾರಣ ಇಲ್ಲದ ಕಡೆ ಅನೇಕರು ಚಂದ್ರಗ್ರಹಣವನ್ನು ದೂರದರ್ಶಕದ ಮೂಲಕ ನೋಡಿ ಖುಷಿಪಟ್ಟರು. ದೂರದರ್ಶಕದ ಮೂಲಕ ಚಂದ್ರನ್ನು ನೋಡಲಿ ಸಾಧ್ಯವಾಗದವರಿಗೆ ಪ್ರೊಜೆಕ್ಟರ್ ಮೂಲಕ ಚಂದ್ರ ಗ್ರಹಣದ ದರ್ಶನ ಮಾಡಲಾಯಿತು.-ಪ್ರಮೋದ್ ಜಿ ಗಲಗಲಿ, ನಿರ್ದೇಶಕ ನೆಹರು ತಾರಾಲಯ ಚಂದ್ರಗ್ರಹಣ ಸಂದರ್ಭದಲ್ಲಿ ನೇರವಾಗಿ ಮನೋಬಲ ದೌರ್ಬಲ್ಯ ಉಂಟಾಗುವ ಹಿನ್ನೆಲೆಯಲ್ಲಿ ಹಲವಾರು ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಗ್ರಹಣದ ನಂತರವೂ ಜಪತಪದಲ್ಲಿ ತೊಡಗುವುದುರಿಂದ ಮನಶಾಂತಿ ನೆಲೆಸುತ್ತದೆ.
-ವಿಠಲಾಚಾರ್ಯ, ಸಂಸ್ಕೃತ ಪಂಡಿತ