Advertisement
ಆದಿಉಡುಪಿ ಶಾಲೆ: ಕಳವು ಉಡುಪಿ: ಆದಿಉಡುಪಿ ಪ್ರೌಢಶಾಲೆ ಯಲ್ಲಿ ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವುಗೈದ ಘಟನೆ ನಡೆದಿದೆ. ರವಿವಾರ ತಡರಾತ್ರಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳ್ಳರು ಶಾಲಾ ಕಚೇರಿಯ ಬೀಗ ಒಡೆದು ಒಳಪ್ರವೇಶಿಸಿ, ಕಪಾಟಿನಲ್ಲಿದ್ದ 8,900 ರೂ. ಮೌಲ್ಯದ ಆರ್.ಡಿ., 1,644 ರೂ. ನಗದು, 4,425 ರೂ.ನ ಪ್ರಿಂಟರ್, ಝೆರಾಕ್ಸ್‌ನಿಂದ ಬಂದ 3,796 ರೂ., ಅಕ್ಷರ ದಾಸೋಹದ 5,179 ರೂ., ಎಸೆಸೆಲ್ಸಿ ಪರೀಕ್ಷಾ ಶುಲ್ಕ 17,200 ರೂ., ಉಳಿದ 4 ಸಾವಿರ ರೂ. ಸಹಿತ ಒಟ್ಟು 45,144 ರೂ. ನಗದು ಕಳವು ಮಾಡಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: ಮಲ್ಪೆ ಫಿಶರೀಶ್ ಮತ್ತು ಗಾಂಧಿ ಶತಾಬ್ದ ಶಾಲೆಗೆ ರವಿವಾರ ರಾತ್ರಿ ಕಳ್ಳರು ನುಗ್ಗಿದ್ದಾರೆ.
ಮಲ್ಪೆ ಕಾಲೇಜಿನ ಪ್ರಾಂಶುಪಾಲ ಕೊಠಡಿಯ ಬಾಗಿಲು ಚಿಲಕ ಮುರಿದು ಒಳ ಪ್ರವೇಶಿಸಿದ್ದ ಕಳ್ಳರು ಕಾಪಾಟಿನಲ್ಲಿ ಇಟ್ಟಿದ್ದ 5,000 ರೂ. (ಪರೀಕ್ಷಾ ಶುಲ್ಕ) ನಗದು ಹಾಗೂ ಈ ಹಿಂದೆ ಸರಕಾರದಿಂದ ಕಾಲೇಜಿಗೆ ನೀಡಲಾಗಿದ್ದ ಚಿನ್ನದ ಪದಕವನ್ನು ಎಗರಿಸಿದ್ದಾರೆ. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರ ಮತ್ತು ಸ್ಟಾಫ್‌ರೂಮಿನ ಬಾಗಿಲು ತೆರೆದು 6 ಕಾಪಾಟುಗಳ ಬೀಗ ಮುರಿದಿದ್ದಾರೆ. ಏನೂ ಸಿಗದ ಅವರು ಅಲ್ಲಿಟ್ಟಿದ್ದ 10 ಎಲ್‌ಇಡಿ ಬಲುºಗಳನ್ನು ಕೊಂಡೊಯ್ದಿದ್ದಾರೆ. ಗಾಂಧಿ ಶತಾಬ್ದ ಶಾಲೆಯ ಬಾಗಿಲು ಮುರಿದ ಕಳ್ಳರು ಅಲ್ಲಿ ಏನೂ ಸಿಗದೆ ವಾಪಸಾಗಿದ್ದಾರೆ. ಹಳೆಯಂಗಡಿ ಕಾಲೇಜಿನಲ್ಲಿ ಕಳವು
ಹಳೆಯಂಗಡಿ: ಇಲ್ಲಿನ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳ್ಳತನ ನಡೆದಿದೆ. ಕಾಲೇಜಿನ ಕಚೇರಿಯಲ್ಲಿದ್ದ 10 ಕಪಾಟಿನಲ್ಲಿ 8 ಕಪಾಟನ್ನು ಒಡೆದಿರುವ ಕಳ್ಳರು ಕಪಾಟಿನಲ್ಲಿದ್ದ ಅಮೂಲ್ಯ ದಾಖಲೆಗಳನ್ನು ತಡಕಾಡಿ ಚೆಲ್ಲಾಪಿಲ್ಲಿ ಮಾಡಿಟ್ಟಿದ್ದಾರೆ. ಕಪಾಟಿನಲ್ಲಿದ್ದ ಸುಮಾರು 15 ಸಾವಿರ ರೂ. ನಗದನ್ನು ಕದ್ದಿದ್ದಾರೆ. ಕಚೇರಿಯ ಬಾಗಿಲನ್ನು ಒಡೆದು, ಗ್ರಿಲ್ಸ್‌ನ ಬೀಗ ತೆಗೆದು ಈ ಕೃತ್ಯ ನಡೆಸಿದ್ದಾರೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕಾಲೇಜಿನ ಮೈದಾನಕ್ಕೆ ಹೊರಗಿನ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸುತ್ತಿರುವ ಬಗ್ಗೆ ಆಗಾಗ್ಗೆ ಗ್ರಾಮಸಭೆಗಳಲ್ಲಿ ದೂರುಗಳು ಕೇಳಿ ಬಂದಿದ್ದವು.