ಇಷ್ಟು ದಿನ ಒಂದಷ್ಟು ಜಾಸ್ತಿ ಕೆಲಸ ಇರ್ತಾ ಇತ್ತು. ಲಾಕ್ ಡೌನ್ ಕಾರಣಕ್ಕೆ ಸ್ವಲ್ಪ ಕೆಲಸ ಕಮ್ಮಿ ಆಗಿದೆ ಅಂತಾನೇ ಹೇಳಬಹುದು. ಪಂಡಿತ್ ಭೀಮಸೇನ ಜೋಶಿ ಅವರ ಹಾಡು ಕೇಳುವ ಮೂಲಕ, ನನ್ನ ಬೆಳಗು ಆರಂಭ ಆಗುತ್ತದೆ. ನಂತರ ಒಂದು- ಒಂದೂವರೆ ಗಂಟೆ ಕಾಲ ಮನೆಯಲ್ಲಿಯೇ ಇರುವ ಜಿಮ್ ಮತ್ತು ಟ್ರೆಡ್ ಮಿಲ್‌ನಲ್ಲಿ ವ್ಯಾಯಾಮ, ಆಮೇಲೆ ಸ್ವಲ್ಪ ಹೊತ್ತು ಧ್ಯಾನ. ಎರಡು ಮೊಟ್ಟೆ ಮತ್ತು ಬ್ರೆಡ್, ಅಥವಾ ಎರಡು ಇಡ್ಲಿ ಇಲ್ಲವೇ ಎರಡು ದೋಸೆ ತಿಂದು ಒಂದು ಟೀ ಕುಡಿದರೆ, ತಿಂಡಿಯ ಶಾಸ್ತ್ರ ಮುಗಿದಂತೆ.
ನಂತರ, ಕ್ರಿಕೆಟ್ ಗೆ ಸಂಬಂಧಿಸಿದ ಒಂದಷ್ಟು ಕೆಲಸಗಳು ಅಥವಾ ಮೀಟಿಂಗ್‌ಗಳಲ್ಲಿ ಪಾಲ್ಗೊಂಡು ಅಲ್ಲಿಂದ ನೇರವಾಗಿ ಕೆನರಾ ಬ್ಯಾಂಕ್‌ನ ಮುಖ್ಯ ಕಚೇರಿಗೆ ಹೋಗುತ್ತೇನೆ. ಕೆನರಾ ಬ್ಯಾಂಕ್ ನ ನೌಕರ ಅನ್ನೋದು ನನ್ನ ಖುಷಿ, ಹೆಮ್ಮೆ. ಮಧ್ಯಾಹ್ನದವರೆಗೂ ಬ್ಯಾಂಕ್ ಕೆಲಸ. ನಂತರ ಮನೆಗೆ ಬಂದು ಊಟ ಮುಗಿಸ್ತೇನೆ. ನಂತರ ಕ್ರೀಡೆಗೆ ಸಂಬಂಧಿಸಿದ ಕೆಲವು ಪತ್ರಿಕೆ- ಪುಸ್ತಕಗಳನ್ನು ಓದುತ್ತಾ, ಹೆಂಡತಿ- ಮಗನ ಜೊತೆಗೆ ಸ್ವಲ್ಪ ಹರಟೆ ಹೊಡೆಯುವ ಹೊತ್ತಿಗೆ ಸಂಜೆ ಆಗಿಬಿಡುತ್ತೆ!
ಗೊತ್ತಾ ನಿಮಗೆ? ರಜೆಯಲ್ಲಿ, ಇಂಥದೊಂದು ಸಮಯಕ್ಕಾಗಿ ನಾನು ಕಾಯ್ತಾ ಇರ್ತೇನೆ. ಸಂಜೆ ಆಗುತ್ತಿದ್ದಂತೆ, ನೇರ ಅಡುಗೆ ಮನೆಗೆ ಹೋಗ್ತೀನೆ. ಹೆಸರು ಬೇಳೆ ಪಾಯಸ ಮಾಡುವುದರಲ್ಲಿ ನಾನು ಎಕ್ಸ್ ಪರ್ಟ್ ಇದು, ನನ್ನ ಅಮ್ಮ ಹೇಳಿಕೊಟ್ಟಿರುವ ರೆಸಿಪಿ ಗುಟ್ಟು. 10 ಜನ ವಾಹ್ ವಾಹ್ ಅನ್ನಬೇಕು, ಅಷ್ಟು ಚೆನ್ನಾಗಿ ನಾನು ಪಾಯಸ ಮಾಡಬಲ್ಲೆ. ಅದರ ಜೊತೆಗೆ, ಬೇರೆ ತಿನಿಸುಗಳನ್ನೂ ಮಾಡಿ, ನನ್ನ ಹೊಸರುಚಿಯನ್ನು ಹೆಂಡತಿ-ಮಗನ ಮೇಲೆ ಪ್ರಯೋಗ ಮಾಡ್ತೇನೆ!
ನಂತರ, ಮಾಸ್ಕ್ ಧಾರಿಯಾಗಿ, ಪತ್ನಿಯ ಜೊತೆ ಮನೆಯ ಹತ್ತಿರದ ಪಾರ್ಕ್ ನಲ್ಲಿ ವಾಕ್ ಮಾಡುವುದು ಈಗಿನ ನನ್ನ ರೂಟೀನ್ ಆಗಿದೆ. ಈ ಸಂದರ್ಭದಲ್ಲಿ ತಪ್ಪದೆ ದೈಹಿಕ ಅಂತರ ಕಾಯ್ದುಕೊಳ್ತೇನೆ. ರಾತ್ರಿ, ರಾಜ್ಯ ಮತ್ತು ದೇಶದ ವಿವಿಧ ಭಾಗದಲ್ಲಿ ಇರುವ ಗೆಳೆಯರು, ಬಂಧುಗಳಿಗೆ ವಿಡಿಯೋ ಕಾಲ್ ಮಾಡಿ ಮಾತಾಡುವುದು, ಎಲ್ಲರಿಗೂ ಹುಷಾರಾಗಿರಿ ಎಂದು ಎಚ್ಚರಿಸಿ ಗುಡ್ ನೈಟ್ ಹೇಳುವುದು, ಕ್ರಿಕೆಟ್‌ಗೆ ಸಂಬಂಧಿಸಿದ ನ್ಯೂಸ್ ನೋಡಿ- ಓದಿ ರಾತ್ರಿ ಹತ್ತೂವರೆಗೆಲ್ಲಾ ನಿದ್ರೆಗೆ ಜಾರುವುದು-ಈಗಿನ ದಿನಚರಿ ಆಗಿದೆ.
ಸುನಿಲ್ ಜೋಶಿ, ಖ್ಯಾತ ಕ್ರಿಕೆಟಿಗ