Advertisement
ಇಲ್ಲಿ ನಿರ್ದೇಶಕ ರಿಷಭ್ ಶೆಟ್ಟಿ ಬಹಳ ಕ್ಲಿಯರ್ ಆಗಿದ್ದಾರೆ. ಪ್ರೇಕ್ಷಕರು ಸಂತೋಷದಿಂದ ಚಿತ್ರ ನೋಡಬೇಕು ಮತ್ತು ಸಂತೋಷದಿಂದಲೇ ಹೊರ ಹೋಗಬೇಕು ಎಂಬುದು ಅವರ ಉದ್ದೇಶ. ಹಾಗಾಗಿ ಚಿತ್ರದುದ್ದಕ್ಕೂ ಪ್ರೇಕ್ಷಕರು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ ಮತ್ತು ಪ್ರೇಕ್ಷಕರನ್ನು ಸಂತೋಷದಿಂದಲೇ ಮನೆಗೆ ಕಳಿಸಿಕೊಡುತ್ತಾರೆ ರಿಷಭ್. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯದ್ದು ಬಹಳ ಸರಳವಾದ ಕಥೆ. ಚಿತ್ರದ ಟ್ರೇಲರ್ ಒಮ್ಮೆ ನೋಡಿಬಿಟ್ಟರೆ, ಕಥೆ ಏನು ಎಂದು ಗೊತ್ತಾಗಿಬಿಡುತ್ತದೆ.
Related Articles
Advertisement
ಮೊದಲಾರ್ಧವೆಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಜೀವನ ಮತ್ತು ಕನಸಿನ ಸುತ್ತಲೇ ಚಿತ್ರ ಸುತ್ತತ್ತದೆ. ಮಧ್ಯಂತರದ ಹೊತ್ತಿಗೆ ಶಾಲೆಯನ್ನು ಮುಚ್ಚುವ ಸುತ್ತೋಲೆ ಬರುವುದರಿಂದ ಚಿತ್ರ ಟೇಕಾಫ್ ಆಗುತ್ತದೆ. ಹಾಗಾಗಿ ಅಲ್ಲಿಯವರೆಗೂ ಪ್ರೇಕ್ಷಕ ಕಾಯಬೇಕು. ಚಿತ್ರದ ಮೊದಲಾರ್ಧವನ್ನು ನಗಿಸುತ್ತಾ, ರಂಜಿಸುತ್ತಾ, ವೇಗವಾಗಿ ಮುಗಿಸುತ್ತಾರೆ ರಿಷಭ್. ದ್ವಿತೀಯಾರ್ಧದಲ್ಲೂ ಅದು ಮುಂದುವರೆದಿದೆಯಾದರೂ, ಈ ಹಂತ ಸ್ವಲ್ಪ ನಿಧಾನ. ಆ ನಿಟ್ಟಿನಲ್ಲಿ ರಿಷಭ್ ಚಿತ್ರವನ್ನು ಇನ್ನಷ್ಟು ಬಿಗಿ ಮಾಡಬಹುದಿತ್ತು. ಬೇಡದ್ದನ್ನು ಸ್ವಲ್ಪ ಕತ್ತರಿಸಬಹುದಿತ್ತು.
ಇನ್ನು ಚಿತ್ರದಲ್ಲಿ ಮಾತು ಸ್ವಲ್ಪ ಜಾಸ್ತಿಯಾಯಿತು ಎನ್ನುವಷ್ಟರ ಮಟ್ಟಿಗೆ ಮಾತಿದೆ. ಈ ತರಹದ ಒಂದೆರೆಡು ಹಂಪುಗಳನ್ನು ಬಿಟ್ಟರೆ, ಮಿಕ್ಕಂತೆ ಪ್ರಯಾಣ ಖುಷಿ ಕೊಡುತ್ತದೆ. ಹಾಗೆ ಸುಖಕರವಾಗಿರುವುದಕ್ಕೆ ಹಲವರ ಕೊಡುಗೆ ಇದೆ. ರಿಷಭ್ ಚಿತ್ರಕಥೆ, ರಾಜ್ ಬಿ ಶೆಟ್ಟಿ ಮತ್ತು ಅಭಿಜಿತ್ ಮಹೇಶ್ ಸಂಭಾಷಣೆ, ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣ, ವಾಸುಕಿ ಹಾಡುಗಳು, ರಿಥ್ವಿಕ್ ಮತ್ತು ಪ್ರತೀಕ್ ಶೆಟ್ಟಿ ಸಂಕಲನ, ಕಲ್ಯಾಣ್ ಅವರ ಸಾಹಿತ್ಯಸ ಎಲ್ಲವೂ ಚಿತ್ರವನ್ನು ಇನ್ನಷ್ಟು ಮಜಬೂತಾಗಿದೆ.
ಇನ್ನು ಕಲಾವಿದರ ಕೊಡುಗೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಪಾತ್ರಕ್ಕೆ ತಕ್ಕ ಕಲಾವಿದರನ್ನು ಆಯ್ಕೆ ಮಾಡಿರುವುದೇ ಮೊದಲ ಹೆಗ್ಗಳಿಕೆ. ಆ ನಂತರ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅನಂತ್ ನಾಗ್ ತಡವಾಗಿ ಬಂದರೂ, ಎಲ್ಲರಿಗೂ ಇಷ್ಟವಾಗುತ್ತಾರೆ. ಅದರಲ್ಲೂ ಕೊನೆಯಲ್ಲಿ 14 ನಿಮಿಷಗಳ ಒನ್ ಟೇಕ್ ದೃಶ್ಯದಲ್ಲಿ ಅವರ ಅಭಿನಯವನ್ನು ಮೆಚ್ಚದಿರುವುದಕ್ಕೆ ಸಾಧ್ಯವೇ ಇಲ್ಲ.
ಇನ್ನು ಅನಂತ್ ನಾಗ್ ಅವರನ್ನು ಬಿಟ್ಟರೆ ಭುಜಂಗಣ್ಣನ ಪಾತ್ರ ಮಾಡಿರುವ ಪ್ರಕಾಶ್ ತುಮಿನಾಡು ಮತ್ತು ಉಪಾಧ್ಯಾಯರ ಪಾತ್ರ ಮಾಡಿರುವ ಪ್ರಮೋದ್ ಶೆಟ್ಟಿ ತಮ್ಮ ಅಭಿನಯದಿಂದ ಚಿತ್ರ ಮುಗಿದರೂ ನೆನಪಿನಲ್ಲುಳಿಯುತ್ತಾರೆ. ಚಿತ್ರದಲ್ಲಿ ಹಲವು ಮಕ್ಕಳು ನಟಿಸಿದ್ದು, ಅವರೆಲ್ಲಾ ತಮ್ಮ ಪಾತ್ರಗಳನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಮಕ್ಕಳ ಚಿತ್ರ ಎಂದರೆ ಬರೀ ಸಮಸ್ಯೆ, ಗೋಳು, ಹೋರಾಟ ಎಂಬಂತಾಗಿರುವ ಕಾಲದಲ್ಲಿ ರಿಷಭ್ ಒಂದು ಪಕ್ಕಾ ಮನರಂಜನೆಯ ಚಿತ್ರವನ್ನು ನೀಡಿದ್ದಾರೆ. ಈ ಶಾಲೆಗೆ ಹಾಜರಿ ಹಾಕಲಡ್ಡಿಯಿಲ್ಲ.
ಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡುನಿರ್ದೇಶನ: ರಿಷಭ್ ಶೆಟ್ಟಿ
ನಿರ್ಮಾಣ: ರಿಷಭ್ ಶೆಟ್ಟಿ
ತಾರಾಗಣ: ಅನಂತ್ ನಾಗ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ರಂಜನ್, ರಮೇಶ್ ಭಟ್ ಮುಂತಾದವರು * ಚೇತನ್ ನಾಡಿಗೇರ್