ವಿಟ್ಲ : ವಿದ್ಯೆಯಿಂದ ಜ್ಞಾನ ಹೆಚ್ಚುತ್ತದೆ. ತಾನು ಯಾರು ಎಂದು ತಿಳಿದುಕೊಳ್ಳುವ ವಿದ್ಯೆಯೇ ಅಧ್ಯಾತ್ಮ ವಿದ್ಯೆ. ಭಾರತ ದೇಶದ ಮನಸ್ಸು ಅಧ್ಯಾತ್ಮ. ಆಧ್ಯಾತ್ಮಿಕತೆಯಿಂದ ಭಗವಂತನಿಗೆ ಹತ್ತಿರವಾಗುತ್ತೇವೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.ಅವರು ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ತ್ಯಾಗ ಜೀವನದಿಂದ ಸುಖ ಪ್ರಾಪ್ತಿಯಾಗುತ್ತದೆ. ತ್ಯಾಗದಲ್ಲಿ ನಿಜವಾದ ಶ್ರೇಷ್ಠತೆ ಇದೆ. ಜೀವನದಲ್ಲಿ ಸಫಲತೆಯನ್ನು ಪಡೆಯಲು ರಾಗ ದ್ವೇಷಗಳನ್ನು ಮೀರಬೇಕು. ಪ್ರೀತಿ-ಭಾವ ತುಂಬಲು ನಮ್ಮಲ್ಲಿ ಸಂಘಟನೆ ಬೇಕು ಎಂದವರು ಹೇಳಿದರು.
ಇರಾ ಘಟ ಸಮಿತಿ ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇರಾ ಘಟ ಸಮಿತಿಯ ಅಧ್ಯಕ್ಷ ಮಂಜುನಾಥ ಡಿ. ಶೆಟ್ಟಿ ಇವರು ತುಳುನಾಡಿನ ನಂಬಿಕೆಗಳು ಎಂಬ ವಿಚಾರದ ಬಗ್ಗೆ ವಿಷಯ ಮಂಡಿಸಿದರು. ವಿಕಾಸವಾಹಿನಿ ಸ್ವಸಹಾಯ ಸಂಘದ ಸದಸ್ಯೆ ಕವಿತಾ ಅಮೃತವಚನವನ್ನು ಹಾಗೂ ಗೀತಾ ಆಚಾರ್ಯ ಶ್ಲೋಕವನ್ನು ಪಠಿಸಿದರು. ಇರಾ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ರೈಅವರು ಶ್ರೀ ಆಂಜನೇಯನ ಬಗ್ಗೆ ಉಪನ್ಯಾಸ ನೀಡಿದರು.
ಬಂಟ್ವಾಳ ತಾಲೂಕಿನ ಸಿಬಂದಿ ಭಗವದ್ಗೀತೆ ಅಭ್ಯಾಸ, ಪ್ರಾಣಾಯಾಮ, ಧ್ಯಾನ ಹಾಗೂ ಭಜನೆ ನೆರವೇರಿಸಿದರು. ಬಂಟ್ವಾಳ ತಾಲೂಕಿನ ಮೇಲ್ವಿಚಾರಕ ಸದಾಶಿವ ಅಳಿಕೆ ಯೋಜನೆಯ ಮಾಸಿಕ ವರದಿ ಮಂಡಿಸಿದರು. ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಯೋಜನೆಯ ಮಾಹಿತಿ ನೀಡಿದರು.
ವಿಟ್ಲ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೇವಾದೀಕ್ಷಿತೆ ಪುಷ್ಪಾ ಸ್ವಾಗತಿಸಿ, ಸೇವಾದೀಕ್ಷಿತೆ ಗೀತಾ ಕಾರ್ಯಕ್ರಮ ನಿರ್ವಹಿಸಿದರು. ಸೇವಾರ್ಥಿ ರಾಧಾಕೃಷ್ಣ ವಂದಿಸಿದರು.