Advertisement

ನೈಜ ಉದ್ದೇಶ ಮರೆಗೆ ವಿವಾದಕ್ಕೊಳಗಾದ ಬಂದ್‌

01:18 PM Jan 24, 2018 | Team Udayavani |

ಮಹದಾಯಿ ವಿವಾದ ಇತ್ಯರ್ಥಪಡಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಹತ್ತು ದಿನಗಳ ಅಂತರದಲ್ಲಿ ನಡೆಯಲಿರುವ ಎರಡು ಬಂದ್‌ಗಳೇ ಈಗ ವಿವಾದಕ್ಕೊಳಗಾಗಿವೆ. ಜ. 25ರಂದು ರಾಜ್ಯ ಬಂದ್‌ ಮತ್ತು ಫೆ. 4ರಂದು ಬೆಂಗಳೂರು ಬಂದ್‌ ನಡೆಸಲು ಕೆಲವು ಸಂಘಟನೆಗಳು ಕರೆ ನೀಡಿವೆ. ಬಂದ್‌ನ ಮುಂಚೂಣಿಯಲ್ಲಿರುವುದು ಹೋರಾಟಗಾರ ವಾಟಾಳ್‌ ನಾಗರಾಜ್‌. ಉ. ಕರ್ನಾಟಕದ ಲಕ್ಷಗಟ್ಟಲೆ ಜನರಿಗೆ ಜೀವನಾಧಾರವಾಗಿರುವ ಮಹದಾಯಿ ನೀರು ರಾಜ್ಯಕ್ಕೆ ಹರಿಯಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿ ಈ ಭಾಗದ ಜನರು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈಗ ನಡೆಸಲುದ್ದೇಶಿಸಿರುವ ಎರಡು ಬಂದ್‌ಗಳ ನೈಜ ಉದ್ದೇಶ ಮಹದಾ ಯಿಯೇ ಆಗಿದ್ದರೆ ಗೊಂದಲ ಉಂಟಾಗುತ್ತಿರಲಿಲ್ಲ. ಆದರೆ ಇದರ ಹಿಂದೆ ರಾಜಕೀಯ ಹಿತಾಸಕ್ತಿಗಾಗಿ ಕಾಣದ “ಕೈ’ಗಳು ಚಿತಾವಣೆ ನಡೆಸಿವೆ ಎಂಬ ಅನುಮಾನ ಹುಟ್ಟಿಕೊಂಡಿದೆ.  ಬಿಜೆಪಿಯ ಪರಿವರ್ತನಾ ಯಾತ್ರೆಯ ಕೊನೆಯ ಸಮಾವೇಶ ಜ. 25ರಂದು ಮೈಸೂರಿನಲ್ಲಿ ನಡೆಯಲಿದ್ದು, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಭಾಗವಹಿಸಲಿದ್ದಾರೆ. ಫೆ.4ರಂದು ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಎರಡು ಕಾರ್ಯಕ್ರಮಗಳನ್ನು ವಿಫ‌ಲ ಗೊಳಿಸಲು ಕಾಂಗ್ರೆಸ್‌ ಸಂಘಟನೆಗಳನ್ನು ಎತ್ತಿಕಟ್ಟಿ ಬಂದ್‌ ನಡೆಸುತ್ತಿದೆ ಎನ್ನುವುದು ಬಿಜೆಪಿ ಆರೋಪ. ರಾಜಕೀಯ ಸಂಚಿನ ಸುಳಿವು ಸಿಕ್ಕಿದ ಕಾರಣದಿಂದಲೇ ಬಂದ್‌ ಆಚರಿಸುವವರಲ್ಲೂ ಒಡಕು ಮೂಡಿದೆ. ಈಗಿರುವ ಪ್ರಶ್ನೆ ಮೋದಿ ಬರುವ ಸಂದರ್ಭದಲ್ಲಿ ಬಂದ್‌ ನಡೆಸಿದರೆ ಮಹದಾಯಿ ವಿವಾದ ಇತ್ಯರ್ಥವಾದೀತೇ ಎನ್ನುವುದು. ವಿವಾದ ನ್ಯಾಯಾಧಿಕರಣದ ವಿಚಾರಣೆಯಲ್ಲಿದ್ದು ಇನ್ನು ಕೆಲವೇ ತಿಂಗಳಲ್ಲಿ ತೀರ್ಪು ಹೊರಬೀಳಲಿದೆ. ಯಾವುದೇ ಬಂದ್‌, ಮುಷ್ಕರ ನಡೆಸಿದರೂ ನ್ಯಾಯಾಧಿಕರಣದ ಮೇಲೆ ಪ್ರಭಾವವಾಗುವುದಿಲ್ಲ.  

Advertisement

 ನ್ಯಾಯಾಧಿಕರಣದ ತೀರ್ಪು ಬರುವ ಮೊದಲೇ ಮೋದಿ ವಿವಾದ ಇತ್ಯರ್ಥಪಡಿಸಲು ಮುಂದಾಗುತ್ತಾರೆ ಎಂದು ನಿರೀಕ್ಷಿಸುವುದು ಅಸಾಧ್ಯ. ರಾಜ್ಯದಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿರುವುದರಿಂದ ಮೋದಿ ಕರ್ನಾಟಕ ಪರವಾಗಿ ವಿವಾದ ಇತ್ಯರ್ಥ ಪಡಿಸಲು ಮುಂದಾಗಬಹುದು ಎಂಬ ಲೆಕ್ಕಾಚಾರವೇ ತಪ್ಪು. ಹಾಗೊಂದು ವೇಳೆ ಕರ್ನಾಟಕದ ಪರವಾಗಿ ನಿಂತರೆ ಗೋವಾದಲ್ಲಿರುವ ಅವರ ಪಕ್ಷದ ಸರಕಾರ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಅವರಿಗೆ ಗೊತ್ತಿರುವುದಿಲ್ಲವೆ? ಚುನಾವಣೆಯ ಫ‌ಲಿತಾಂಶಕ್ಕಾಗಿ ಮೋದಿ ಒಂದು ಸರಕಾರವನ್ನು ಕಳೆದುಕೊಳ್ಳಲು ತಯಾರಿರುತ್ತಾರೆಯೇ? ಸದ್ಯದ ಪರಿಸ್ಥಿತಿಯನ್ನು ನೋಡುವಾಗ ಮಹದಾಯಿಗಿಂತಲೂ ಬಿಜೆಪಿಯ ಕಾರ್ಯಕ್ರಮವನ್ನು ವಿಫ‌ಲಗೊಳಿಸುವುದೇ ಎರಡು ಬಂದ್‌ಗಳ ಮುಖ್ಯ ಅಜೆಂಡಾ ಆಗಿರುವಂತೆ ಕಾಣಿಸುತ್ತಿದೆ. ಹಾಗೊಂದು ವೇಳೆ ಬಂದ್‌ನಿಂದ ವಿವಾದ ಇತ್ಯರ್ಥ ವಾಗುವುದಿದ್ದರೆ ಸುಮಾರು ಎರಡು ತಿಂಗಳು ಉತ್ತರ ಕರ್ನಾಟಕ ಹೊತ್ತಿ ಉರಿದಾಗ ಏಕೆ ಇತ್ಯರ್ಥವಾಗಲಿಲ್ಲ? ಎರಡು ವರ್ಷದಲ್ಲಿ ನಡೆದ 11 ಬಂದ್‌ಗಳಿಂದ ಬಗೆಹರಿಯದ ಸಮಸ್ಯೆ ಎರಡು ಬಂದ್‌ಗಳಿಂದ ಬಗೆಹರಿಯಲು ಸಾಧ್ಯವೇ?  ಹಾಗೆಂದು ಜನರು ಬಂದ್‌ ನಡೆಸಬಾರದು ಎಂದಲ್ಲ. ಬಂದ್‌, ಮುಷ್ಕರ ಇವೆಲ್ಲ ಆಡಳಿತದ ವಿರುದ್ಧ ತಮಗಿರುವ ಅಸಮಾಧಾನವನ್ನು ಪ್ರಕಟಿಸಲು ಜನರ ಕೈಯಲ್ಲಿರುವ ಪ್ರಬಲ ಅಸ್ತ್ರ. ಕೇರಳ ಹೈಕೋರ್ಟ್‌ ಬಂದ್‌ಗಳನ್ನು ಬಂದ್‌ ಮಾಡಬೇಕೆಂದು ಹೇಳಿದ್ದರೂ ಸುಪ್ರೀಂ ಕೋರ್ಟ್‌ ಪ್ರತಿಭಟಿಸುವ ಹಕ್ಕು ಹತ್ತಿಕ್ಕಬಾರದು ಎಂದು ಅಭಿಪ್ರಾಯಪಟ್ಟಿದೆ. ಆದರೆ ಪದೇ ಪದೇ ಬಂದ್‌ ಆಚರಿಸುವುದರಿಂದ ಆಗುವ ಹಾನಿಯ ಬಗ್ಗೆಯೂ ಅರಿವಿರಬೇಕು. ಪ್ರತಿ ಸಲ ಬಂದ್‌ ನಡೆದಾಗ ಕೋಟಿಗಟ್ಟಲೆ ರೂಪಾಯಿಯ ನಷ್ಟ ಉಂಟಾಗುತ್ತಿದೆ. ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ವಾಹನಗಳನ್ನು ಸುಟ್ಟು, ಅಂಗಡಿಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿ ತೊಂದರೆ ಕೊಟ್ಟು ಮಾಡುವ ಬಂದ್‌ನಿಂದೇನು ಪ್ರಯೋಜನ? ಪ್ರಸ್ತುತ ಬಂದ್‌ ಎನ್ನುವುದು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಉಳಿದ ಪಕ್ಷಗಳು ಬಳಸುವ ಒಂದು ಪ್ರಬಲ ಅಸ್ತ್ರ. ಇಂದು ಅದು ಕಾಂಗ್ರೆಸ್‌ ಆಗಿರಬಹುದು. ನಾಳೆ ಬಿಜೆಪಿ ಅಧಿಕಾರಕ್ಕೆ ಬಂದರೂ ಮಾಡುವುದು ಇದನ್ನೆ. ಹೀಗಾಗಿ ಬಂದ್‌ಗೆ ಸಂಬಂಧಿಸಿದಂತೆ ಯಾವ ಪಕ್ಷವನ್ನೂ ನಂಬುವಂತಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next