Advertisement

ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಮರು ಆರಂಭ ಸ್ವಾಗತಾರ್ಹ

01:05 AM Nov 11, 2021 | Team Udayavani |

ಕಳೆದ ಎರಡು ವರ್ಷಗಳಲ್ಲಿ ಕೊರೊನಾ ತಂದಿಟ್ಟ ಅಡ್ಡಿ ಆತಂಕಗಳು ಒಂದಿಷ್ಟಲ್ಲ. ಜನರಷ್ಟೇ ಅಲ್ಲ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೂ ಆರ್ಥಿಕವಾಗಿ ದಿನವಹೀ ಕಾರ್ಯನಿರ್ವಹಣೆ ಮಾಡಲೂ ಕಷ್ಟಕರವಾದ ಸನ್ನಿವೇಶಗಳು ಎದುರಾಗಿದ್ದವು. ಕಳೆದ ಎರಡು ವರ್ಷಗಳಲ್ಲಿ ಈ ತೊಂದರೆಗಳಿಂದ ನರಳಿ ಈಗಷ್ಟೇ ಸರಕಾರಗಳು ಆರ್ಥಿಕವಾಗಿ ಸುಧಾರಣೆ ಕಾಣುತ್ತಿವೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಸ್ಥಗಿತ ಮಾಡಲಾಗಿದ್ದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನು ಮತ್ತೆ ಚಾಲನೆ ಮಾಡಲಾಗುತ್ತಿದೆ.

Advertisement

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಇಂಥದ್ದೊಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಆರ್ಥಿಕ ವರ್ಷದ ಉಳಿದರ್ಧ ಭಾಗವೂ ಸೇರಿದಂತೆ 2024-25ರ ವರೆಗಿನ ಎಂಪಿಲಾಡ್ಸ್‌ಗೆ ಅನುದಾನ ನಿಗದಿ ಮಾಡಲಾಗಿದೆ. ಅಂದರೆ, ಪ್ರಸಕ್ತ ವರ್ಷದ ಉಳಿದರ್ಧ ಆರ್ಥಿಕ ವರ್ಷಕ್ಕಾಗಿ ಪ್ರತಿಯೊಬ್ಬ ಸಂಸದರಿಗೂ ತಲಾ 2 ಕೋಟಿ ರೂ. ನೀಡಲಾಗುತ್ತದೆ. ಈ ಆರ್ಥಿಕ ವರ್ಷ ಕಳೆದು, ಮುಂದಿನ ಆರ್ಥಿಕ ವರ್ಷದಿಂದ 2024-25ರ ವರೆಗೆ ಪ್ರತೀ ವರ್ಷವೂ ಸಂಸದರಿಗೆ ಪ್ರದೇಶಾಭಿವೃದ್ದಿಗಾಗಿ ತಲಾ 5 ಕೋಟಿ ರೂ.ಯನ್ನು ಎರಡು ಸಮಾನ ಕಂತುಗಳನ್ನು ನೀಡಲಾಗುತ್ತದೆ.

ಗ್ರಾಮೀಣ ಭಾಗದಲ್ಲಿನ ರಸ್ತೆಗಳು, ಬಸ್‌ ನಿಲ್ದಾಣಗಳು ಸೇರಿದಂತೆ ಇತರ ಸ್ಥಳೀಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಇದೇ ಎಂಪಿಲಾಡ್ಸ್‌ ನಿಧಿಯಿಂದಲೇ. ಕಳೆದ ಎರಡು ವರ್ಷ ಈ ನಿಧಿ ಸ್ಥಗಿತವಾಗಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿರಲಿಲ್ಲ. ಅಂದರೆ, ರಸ್ತೆ ನಿರ್ಮಾಣ, ಕುಡಿಯುವ ನೀರು ವ್ಯವಸ್ಥೆ, ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯದಂಥ ಕೆಲಸಗಳು ನಿಂತೇ ಹೋಗಿದ್ದವು. ಈ ಕೆಲಸಗಳಿಗೆ ಸಾಮಾನ್ಯವಾಗಿ ಸ್ಥಳೀಯ ಸಂಸದರ ಅಭಿವೃದ್ಧಿ ನಿಧಿಯಿಂದಲೇ ಹಣ ಬಿಡುಗಡೆಯಾಗುತ್ತಿತ್ತು. ಜತೆಗೆ, ಸಂಸದರಿಗೂ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಿಗುತ್ತಿದ್ದ ಅವಕಾಶವೂ ಇದಾಗಿತ್ತು.ಆದರೆ ಎರಡು ವರ್ಷಗಳ ಕಾಲ ಈ ಯೋಜನೆಯ ನಿಧಿ ಸ್ಥಗಿತವಾಗಿದ್ದರಿಂದ ಸ್ಥಳೀಯವಾಗಿ ಕೆಲಸ ಮಾಡಲು ಆಗದಂಥ ಪರಿಸ್ಥಿತಿ ತಲೆದೋರಿತ್ತು. ಈಗ ಕೇಂದ್ರ ಸರಕಾರ ಮತ್ತೆ ಸಂಸದರ ನಿಧಿಗೆ ಹಣ ಬಿಡುಗಡೆ ಮಾಡಿರುವುದರಿಂದ ಮತ್ತೆ ಅಭಿವೃದ್ಧಿ ಚಟುವಟಿಕೆಗಳು ಚುರುಕುಗೊಳ್ಳುವ ನಿರೀಕ್ಷೆ ಇದೆ.

ಇತ್ತೀಚೆಗಷ್ಟೇ ಹಲವಾರು ಸಂಸದರು ಕೇಂದ್ರ ಸರಕಾರದ ಮೇಲೆ ಎಂಪಿಲಾಡ್ಸ್‌ ನಿಧಿ ಪುನರ್‌ಸ್ಥಾಪಿಸುವ ಬಗ್ಗೆ ಒತ್ತಡ ಹೇರುತ್ತಲೇ

ಇದ್ದರು. ಅಲ್ಲದೆ, ಸಂಸತ್‌ನಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಸಂಸದರ ನಿಧಿ ಬಿಡುಗಡೆಯಾಗದೇ ಇರುವ ಕಾರಣದಿಂದಾಗಿ ನಾವು ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಜನತೆ ಕೂಡ ಸ್ಥಳೀಯವಾಗಿ ಅಭಿವೃದ್ಧಿಗಾಗಿ ಮನವಿ ಹೊತ್ತು ತರುತ್ತಿದ್ದಾರೆ. ಇವರಿಗೆ ಉತ್ತರ ಹೇಳಲೂ ಆಗುತ್ತಿಲ್ಲ.  ಹೀಗಾಗಿ ಶೀಘ್ರವೇ ಎಂಪಿಲಾಡ್ಸ್‌ ಅನ್ನು ಮತ್ತೆ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಪಕ್ಷಭೇದ ಮರೆತು ಸದಸ್ಯರು ಆಗ್ರಹಿಸಿದ್ದರು. ಈಗ ಎಲ್ಲರ ಒತ್ತಾಸೆಯಂತೆ ಕೇಂದ್ರ ಸರಕಾರ ಸಂಸದರ ನಿಧಿ ಬಿಡುಗಡೆ ಮಾಡಲು ಒಪ್ಪಿದ್ದು, ಇದನ್ನು ಸಂಸದರೂ ಉತ್ತಮವಾಗಿ ಬಳಸಿಕೊಳ್ಳಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next