Advertisement

ದಶಕದ ಪ್ರಯತ್ನದ ಫಲ ಆರ್‌ಡಿಎ ಕಚೇರಿ

06:28 PM May 19, 2022 | Team Udayavani |

ರಾಯಚೂರು: ಆರ್‌ಡಿಎ ಕಚೇರಿ ಕಟ್ಟಡ ನಿರ್ಮಾಣಕ್ಕೆ ಒಂದು ದಶಕದಿಂದ ಪ್ರಯತ್ನ ನಡೆದಿತ್ತು. ಎರಡ್ಮೂರು ಬಾರಿ ಪೂಜೆ ಮಾಡಿದ್ದರೂ ಅನೇಕ ತಾಂತ್ರಿಕ ಅಡೆತಡೆಗಳಿಂದ ಕಾಮಗಾರಿ ಕೈಗೂಡಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಎಂದು ನಗರ ಶಾಸಕ ಡಾ| ಎಸ್‌.ಶಿವರಾಜ ಪಾಟೀಲ್‌ ತಿಳಿಸಿದರು.

Advertisement

ನಗರದ ಐಡಿಎಸ್‌ಎಂಟಿ ಲೇಔಟ್‌ನಲ್ಲಿ ನಗರಾಭಿವೃದ್ಧಿ ಪ್ರಾಧಿ ಕಾರದ ನೂತನ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನಾನು ಶಾಸಕನಾದ ಬಳಿಕ ನಗರಾಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದು, ನಗರದ ಒಳರಸ್ತೆ, ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಸುಮಾರು 50 ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕೆಕೆಆರ್‌ಡಿಬಿ, ನಗರೋತ್ಥಾನ, ಆರ್‌ ಡಿಎ ಅನುದಾನದಲ್ಲಿ ಉದ್ಯಾನವನ ಅಭಿವೃದ್ಧಿ ಮಾಡಲಾಗಿದೆ ಎಂದು ವಿವರಿಸಿದರು.

ಹಿಂದಿನ ಅಧ್ಯಕ್ಷ ವೈ. ಗೋಪಾಲರೆಡ್ಡಿ ಅವಧಿಯಲ್ಲಿಯೂ ಕಟ್ಟಡ ನಿರ್ಮಾಣಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಲಾಯಿತು. ಆದರೆ, ತಿಮ್ಮಪ್ಪ ನಾಡಗೌಡರ ಅವ ಧಿಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆದು ಕಾಮಗಾರಿಗೆ ಚಾಲನೆ ಸಿಕ್ಕಿದೆ. ಬಡಾವಣೆ ನಿವಾಸಿಗಳಿಗೆ  ತೊಂದರೆಯಾಗದ ರೀತಿ ಕೆಲಸ ಮಾಡಬೇಕು. ಕಟ್ಟಡ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗದಂತೆ ಎಚ್ಚರಿಕೆ ನೀಡಿದರು.

ಆರ್‌ಡಿಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ ಮಾತನಾಡಿ, ಅನೇಕ ವರ್ಷಗಳ ಪ್ರಯತ್ನದ ಫಲವಾಗಿ ಈಗ ಕಟ್ಟಡ ನಿರ್ಮಾಣಕ್ಕೆ ಕಾಲ ಕೂಡಿ ಬಂದಿರುವುದು ಖುಷಿ ವಿಚಾರ. ಕಾಮಗಾರಿಯನ್ನು ನನ್ನ ಅಧಿಕಾರವಧಿ  ಇರುವುದರೊಳಗೆ ಮಾಡಿ ಮುಗಿಸಲು ಪ್ರಯತ್ನಿಸಲಾಗುವುದು. ಆರ್‌ಡಿಎ ಅನುದಾನದಲ್ಲಿ ನಗರದಲ್ಲಿ ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು. ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಳು ಆಂಜನೇಯ, ಉಪಾಧ್ಯಕ್ಷೆ ನರಸಮ್ಮ ನರಸಿಂಹಲು
ಮಾಡಗಿರಿ, ಸದಸ್ಯರಾದ ಈ.ಶಶಿರಾಜ, ವಿ.ನಾಗರಾಜ, ಎಸ್‌. ರಾಜು, ಬಿಜೆಪಿ ಮುಖಂಡರಾದ ಕಡಗೋಲು ಆಂಜನೇಯ, ರವೀಂದ್ರ ಜಲ್ದಾರ್‌, ಶ್ರೀನಿವಾಸ ರೆಡ್ಡಿ, ಹರೀಶ್‌ ನಾಡಗೌಡ, ಶೇಖರ್‌ ವಾರದ, ಜೆಡಿಎಸ್‌ ನಗರಾಧ್ಯಕ್ಷ ಬಿ.ತಿಮ್ಮಾರೆಡ್ಡಿ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next