ಸಿರುಗುಪ್ಪ: ತಾಲೂಕಿನ ನಡವಿ ಗ್ರಾಮದ ಹೊರ ವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಅಪರೂಪದ ನೀಲಿನಾಮಗೋಳಿ ಪಕ್ಷಿ ಪ್ರತ್ಯಕ್ಷವಾಗಿದೆ. ಆಂಗ್ಲ ಭಾಷೆಯಲ್ಲಿ ಈ ಪಕ್ಷಿಯನ್ನು ಫರ್ಪಲ್ ಮೂರ್‌ಹೆನ್ ಕರೆಯಲಾಗುತ್ತಿದ್ದು, ಕಳೆದ ಹಲವಾರು ದಿನಗಳಿಂದ ಈ ಪ್ರದೇಶದಲ್ಲಿ ಪಕ್ಷಿ ಕಂಡು ಬಂದಿದೆ.
ಈ ಪಕ್ಷಿ ನೇರಳೆ ನೀಲಿ ಬಣ್ಣ, ಪುಕ್ಕದ ಕೆಳಗೆ ಬಿಳಿ ಬಣ್ಣ, ಕಾಲುಗಳು ಕೆಂಪು ಬಣ್ಣ, ಕೊಕ್ಕರೆ ಕಾಲು, ಉದ್ದವಾದ ಬೆರಳುಗಳನ್ನು ಹೊಂದಿದೆ. ಮೋಟು ಬಾಲವನ್ನು ಮೇಲೆ ಕೆಳಗೆ ಆಡಿಸುತ್ತ ನಡೆಯುತ್ತದೆ. ಹೆಣ್ಣು ಮತ್ತು ಗಂಡು ಪಕ್ಷಿಗಳಿಗೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಈ ಪಕ್ಷಿಗಳು ನೆಲದ ಮೇಲೆಯೂ ನಡೆಯುತ್ತವೆ ಹಾಗೂ ಆಕಾಶದಲ್ಲಿಯೂ ಹಾರಬಲ್ಲವು. ಇವು ಮರಗಳ ತುದಿಯಲ್ಲಿ ಗೂಡುಗಳನ್ನು ಕಟ್ಟಿ ವಾಸ ಮಾಡುತ್ತವೆ.
ನೀಲಿನಾಮಗೋಳಿ ಪಕ್ಷಿಗಳು ಸಂಕೋಚ ಸ್ವಭಾವ ಹೊಂದಿದ್ದು, ಜೋಡಿಯಾಗಿ ಅಥವಾ ಸಣ್ಣ ಸಣ್ಣ ಗುಂಪುಗಳಾಗಿ ಕೆರೆಯ ದಂಡೆಯಲ್ಲಿರುವ ಜೋಗು ಬೆಳೆದ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಗದ್ದೆಗಳಲ್ಲಿ ಸಿಗುವ ಹುಳು, ಏಡಿ ಮತ್ತು ಶಂಖದ ಹುಳುಗಳು, ಬಿತ್ತನೆಯ ಕಾಳುಗಳನ್ನು ಆಹಾರವಾಗಿ ಸೇವಿಸುತ್ತವೆ.
ದಕ್ಷಿಣ ಏಷ್ಯಾದಲ್ಲಿ ಈ ಪಕ್ಷಿಗಳನ್ನು ಕಾಣಬಹುದಾಗಿದ್ದು, ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ಜೊಂಡಿನ ನಡುವೆ ಒಣಗಿದ ಜೊಂಡಿನ ಕಡ್ಡಿಗಳನ್ನು ಸುತ್ತಿ ಗೂಡುಮಾಡಿ ತನ್ನ ಸಂತಾನಾಭಿವೃದ್ಧಿ ಮಾಡುತ್ತವೆ. ತನ್ನ ನೀಲಿ ಬಣ್ಣದ ದೇಹ, ಕೆಂಪು ಕೊಕ್ಕಿನಿಂದಾಗಿ ಪಕ್ಷಿ ಪ್ರಿಯರನ್ನು ಆಕರ್ಷಿಸುತ್ತವೆ.
ಈ ಭಾಗದಲ್ಲಿ ಜೋಗು ಪ್ರದೇಶ ಇಲ್ಲದಿದ್ದರೂ ಕೆರೆಗಳು ಇರುವುದರಿಂದ ನೀಲಿನಾಮಗೋಳಿ ಪಕ್ಷಿ ಗೂಡು ಕಟ್ಟಿಕೊಂಡು ವಾಸ ಮಾಡುತ್ತಿವೆ. ಇವು ಸಂತಾನಾಭಿವೃದ್ಧಿಗೆ ಬಂದಿರಬಹುದು.
ಅಂದಾನಗೌಡ ದಾನಪ್ಪಗೌಡರ, ಪಕ್ಷಿ ತಜ್ಞ.