Advertisement

ಉಪಕರದ ಮೂಲಕ ಸುಲಿಗೆ ಭಾಗ್ಯ

10:33 AM Nov 25, 2017 | |

ಬೆಂಗಳೂರು: ಆಸ್ತಿ ತೆರಿಗೆಯ ಮೇಲೆ ಶೇ.15ರಷ್ಟು ಘನತ್ಯಾಜ್ಯ ಉಪಕರ ವಿಧಿಸುವ ಮೂಲಕ ನಗರದ ಆಸ್ತಿ ಮಾಲೀಕರ ಜೇಬಿಗೆ ಕತ್ತರಿ ಹಾಕಿ “ಸುಲಿಗೆ ಭಾಗ್ಯ’ ನೀಡಲು ಕಾಂಗ್ರೆಸ್‌ ಆಡಳಿತ ಮುಂದಾಗಿದೆ. ಇದನ್ನ ಜಾರಿಗೊಳಿಸಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ. 

Advertisement

ಪಾಲಿಕೆಯು, ಆಸ್ತಿ ತೆರಿಗೆ ಮೇಲೆ ಶೇ.15ರಷ್ಟು ಘನತ್ಯಾಜ್ಯ ಉಪಕರ ವಿಧಿಸಲು ಮುಂದಾಗಿರುವ ಕುರಿತು ಶುಕ್ರವಾರ “ಉದಯವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ವಿಫ‌ಲವಾಗಿದೆ.

ಹೀಗಾಗಿ ಉಪಕರದ ಹೆಸರಿನಲ್ಲಿ ಆಸ್ತಿ ಮಾಲೀಕರ ಸುಲಿಗೆಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆಯಿಂದ ಜಾರಿಗೊಳಿಸಲು ಸಿದ್ಧತೆ ನಡೆಸಿರುವ ನೂತನ ಉಪಕರ ವ್ಯವಸ್ಥೆಯಿಂದ ಹೇಗೆ ಆಸ್ತಿ ಮಾಲೀಕರಿಗೆ ಹೊರೆಯಾಗುತ್ತದೆ ಎಂಬ ಕುರಿತ ದಾಖಲೆಗಳನ್ನು ಬಿಡುಗಡೆಗೊಳಿಸಿದ ರೆಡ್ಡಿ, ಆಸ್ತಿ ಮಾಲೀಕರು ಸದ್ಯ ಪಾವತಿಸುತ್ತಿರುವ ಉಪಕರ ಪ್ರಮಾಣಕ್ಕಿಂತ ಸುಮಾರು 2 ಸಾವಿರ ಪಟ್ಟು ಅಧಿಕ ಉಪಕರ ಪಾವತಿಸಬೇಕಾಗುತ್ತದೆ.

ವಸತಿ, ವಸತಿಯೇತರ, ಕೈಗಾರಿಕೆ, ಕಲ್ಯಾಣ ಮಂಟಪ, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಸೇರಿದಂತೆ ಖಾಸಗಿ ಕಂಪನಿಗಳಿಗೂ ಇದು ಹೊರೆಯಾಗಲಿದ್ದು, ಯಾವುದೇ ಕಾರಣಕ್ಕೂ ಇದು ಜಾರಿಯಾಗಲು ಬಿಡುವುದಿಲ್ಲ ಎಂದು ತಿಳಿಸಿದರು. 

ಆಸ್ತಿ ತೆರಿಗೆ ಮೇಲೆ ಘನತ್ಯಾಜ್ಯ ಉಪಕರ ಎಷ್ಟು ಪ್ರಮಾಣದಲ್ಲಿದೆ ಎಂದರೆ, ಸದ್ಯ ಕೆಲವೇ ಸಾವಿರಗಳಲ್ಲಿ ಪಾವತಿಸುತ್ತಿರುವವರು ಮುಂದಿನ ದಿನಗಳಲ್ಲಿ ಲಕ್ಷ ರೂ.ಗಳಲ್ಲಿ ಪಾವತಿಸಬೇಕಾಗುತ್ತದೆ. ಅದರಂತೆ ಆಸ್ತಿ ತೆರಿಗೆಗೆ ಅನುಗುಣವಾಗಿ 100ರಿಂದ 2000 ಪಟ್ಟು ಅಧಿಕ ಘನತ್ಯಾಜ್ಯ ಉಪಕರ ಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು. 

Advertisement

ಸದಾಶಿವನಗರದಲ್ಲಿ ವಾಸವಾಗಿರುವ ನಟ ಪುನೀತ್‌ ರಾಜಕುಮಾರ್‌ ಅವರು ಆಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ಉಪಕರವಾಗಿ 600 ರೂ. ಪಾವತಿಸುತ್ತಿದ್ದಾರೆ. ಅದೇ ಶೇ.15ರಷ್ಟು ಉಪಕರ ನಿಯಮದ ಪ್ರಕಾರ ಮುಂದಿನ ದಿನಗಳಲ್ಲಿ ಅವರು 6,537 ರೂ. ಪಾವತಿಸಬೇಕಾಗುತ್ತದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಸದ್ಯ 1,200 ರೂ. ಪಾವತಿಸುತ್ತಿದ್ದು, ಮುಂದೆ 7,523 ರೂ., ಮಲ್ಲಿಕಾರ್ಜುನ ಖರ್ಗೆ ಅವರು ಪಾವತಿಸುತ್ತಿರುವ 600 ರೂ. ಬದಲಾಗಿ 5,414 ರೂ., ಸಚಿವ ಡಿ.ಕೆ.ಶಿವಕುಮಾರ್‌ 1,800 ರೂ. ಬದಲಿಗೆ 12,000 ರೂ. ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. 

ನೂತನ ಉಪಕರದಿಂದ ಆಗುವ ಬದಲಾವಣೆಗಳ ವಿವರ
ಆಸ್ತಿ ಮಾಲೀಕರು    ಹಾಲಿ ಪಾವತಿ    ನೂತನ ಉಪಕರ
-ಲೀ ಮೆರಿಡಿಯನ್‌    7,200    4.91 ಲಕ್ಷ
-ಅಶೋಕ ಹೋಟೆಲ್‌    3,600    4.76 ಲಕ್ಷ
-ಈಸ್ಟ್‌ವೆಸ್ಟ್‌ ಹೋಟೆಲ್‌    7,200    4.76 ಲಕ್ಷ
-ವುಡ್‌ಲ್ಯಾಂಡ್‌ ಹೋಟೆಲ್‌    6,000    54,000 
-ಸೇಂಟ್‌ ಜೋಸೆಫ್ ಶಾಲೆ    2400    1.41 ಲಕ್ಷ 
-ಸೆಸ್ನಾ ಗಾರ್ಡನ್‌ ಡೆವಲಪರ್    9600    90.14 ಲಕ್ಷ
ಉಪಕರ ರೂ.ಗಳಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next