ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ಈ ವಾರದಲ್ಲೇ ರಾಮ ದೇಗುಲ ಟ್ರಸ್ಟ್ ರಚನೆಯಾಗುವ ಸಂಭವವಿದೆ. ಈಗಾಗಲೇ ಸರಕಾರ ಎಲ್ಲ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಕೇಂದ್ರ ಗೃಹ ಇಲಾಖೆ ರಾಮಮಂದಿರ ಟ್ರಸ್ಟ್ ರಚನೆಯ ಹೊಣೆ ಹೊತ್ತಿದೆ. ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಜಾಗ ಕೊಡುವ ಬಗ್ಗೆಯೂ ಈ ವಾರದಲ್ಲೇ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.
ರಾಮಜನ್ಮಸ್ಥಾನದಲ್ಲೇ ರಾಮಮಂದಿರ ನಿರ್ಮಿಸು ವುದಕ್ಕೆ ಅನುವು ಮಾಡಿಕೊಡುವ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷದ ನ.9ರಂದು ನೀಡಿತ್ತು. ಜತೆಗೆ ಮುಸ್ಲಿಮರಿಗೆ ಅಯೋಧ್ಯೆಯಲ್ಲೇ 5 ಎಕರೆ ಭೂಮಿ ನೀಡುವಂತೆಯೂ ಸೂಚನೆ ನೀಡಿತ್ತು. ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚನೆ ಮಾಡುವಂತೆಯೂ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಅದರಂತೆ ಈಗ ಕೇಂದ್ರ ಗೃಹ ಇಲಾಖೆ ಟ್ರಸ್ಟ್ ರಚನೆ ಮಾಡುತ್ತಿದೆ.