ಕರೆಯಯ್ಯ ಕರೆ ಕಾರ್ಮೋಡ ಬಂದೈತೆ
ಕರೆಯಯ್ಯ ಕರೆ ಮನೆ ಮಂದಿಯ
ತಂದೈತೆ ಮುಗಿಲಿಂದ ಮಳೆ ಹನಿಯ
ಯುಗ ಯುಗಾದಿಯ ಸೆಳವಿಗೆ
ಚಿಗುರೊಡೆದ ಹಸಿರ ಸವಿಯ ಸವಿದ ಮಂದಿಯ
ಕರೆಯಯ್ಯ ಕರೆ ಕಾರ್ಮೋಡ ಬಂದೈತೆ
ಕರೆಯಯ್ಯ ಕರೆ ಮನೆ ಮಂದಿಯ
ಕಾದ ಬಿಸಿಯುಸಿರು ತಣಿಸಿ
ಕಳೆಯುವುದು ಮನೆ- ಮನೆಯ ಮೇಲಿನ ಕೊಳೆ
ತುಂಬಿಸುವುದು ನದಿ ಕೆರೆ ತೊರೆ
ಇನ್ನೇನು ಬೇಕು ಬೆಳ್ಳಿಯ ನಗುವ ತಂದಿರಲು ಮಳೆ
ಬಿಗಿ ಭೂ ಒಡಲ ಸಡಿಲಿಸುವ
ಬಿತ್ತುವ ಬೀಜಕ್ಕೆ ಜೀವಾಮೃತವಾಗುವ
ಮನೆ- ಮನವ ಒಟ್ಟುಗೂಡಿಸುವ
ಮಳೆ ಬಂದೈತೆ ಕರೆಯಯ್ಯ ಕರೆ ಮನೆ ಮಂದಿಯ
ಸಂಜೀವಿನಿ ಇದು ಹಸಿರ ಹೊನ್ನ ಸಿರಿಗೆ
ದೈವ ರಸವಿದು ಬಳಿದುಂಡ ಜೀವರಾಶಿಗೆ
ನಂಬಿಕೆಯ ಆಸರೆ ಇದು ಹಸಿದ ಹೊಟ್ಟೆಗಳಿಗೆ
ವಿಶ್ರಾಂತಿಯ ಸ್ಪರ್ಶವಿದು ಗವಿಯೊಡಲ ಧಗೆಗೆ
ಕರೆಯಯ್ಯ ಕರೆ ಕಾರ್ಮೋಡ ಬಂದೈತೆ
ಕರೆಯಯ್ಯ ಕರೆ ಮನೆ ಮಂದಿಯ
ತಂದೈತೆ ಮುಗಿಲಿಂದ ಮಳೆ ಹನಿಯ
– ರಶ್ಮಿ ಎಂ., ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮಾಧ್ಯಮ ವಿಭಾಗ, ಮಾನಸಗಂಗೋತ್ರಿ. ಮೈಸೂರು
Advertisement
ಬಂದೇ ಬಿಟ್ಟ ಮಳೆರಾಯ…!!ಬೇಸಗೆ ಸರಿಸುತ
ಮಳೆಯನು ಸುರಿಸುತ
ಬಂದೇ ಬಿಟ್ಟ ಮಳೆರಾಯ!
ಸಿಡಿಲನು ಸಿಡಿಸುತ
ಗುಡುಗನು ಕರೆಯುತ
ರಭಸದಿ ಬಂದಿಹ ಮಳೆರಾಯ!
ಬತ್ತಿದ ಭೂಮಿಗೆ ತಂಪನೀಯುತ
ಹಸುರ ಪೈರಿಗೆ ನೀರನುಣಿಸುತ
ಸಂತಸ ತರುತಿಹ ಮಳೆರಾಯ!
ಬಿಸಿಲ ಬೇಗೆಗೆ ತತ್ತರಿಸಿದ
ಪ್ರಕೃತಿ ಸೌಂದರ್ಯ ಹೆಚ್ಚಿಸುತ,
ಜೀವ ಸಂಕುಲಕೆ ಜೀವ ತುಂಬುತ
ಚೆಂದದಿ ನಲಿವ ಮಳೆರಾಯ!
ಕೈಚೆಲ್ಲಿ ಕುಳಿತ ಮನುಕುಲಕ್ಕೆ
ಸ್ಫೂರ್ತಿ ಚಿಲುಮೆಯ ಮಳೆಗಾಲ,
ಇದರ ಆಟಕ್ಕೆ ಹೆದರಿ ಓಡಲಿ
ಕೊರೊನಾ ಎಂಬ ಕೇಡುಗಾಲ…!
ಪೂರ್ಣಿಮಾ ಹಿರೇಮಠ,
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ,ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ
ನಭದಿ ಬರೆದ ಚಿತ್ತಾರದಂತಿರುವ ಮೋಡದಿಂದ
ಹವಳದಂತೆ ಸಾಲಾಗಿ ಮಳೆಹನಿಗಳು ಧರೆಗಿಳಿದು
ಬಿಸಿಲ ಬೇಗೆಯಲಿ ಬೆಂದು ಬಳಲಿದ
ಭೂದೇವಿಯ ಒಡಲ ತಂಪುಗೊಳಿಸಲು ||
ರವಿಯ ರೌಧ್ರ ಪ್ರತಾಪಕೆ ಸಿಲುಕಿ
ಬದುಕುವ ಆಸೆ ಕಮರಿ ಹೋದ
ಖಗ-ಮಿಗ ಜೀವರಾಶಿಗಳಿಗೆ
ಆಶಾಕಿರಣವಾಗಿ ಬರುವ ವರ್ಷಧಾರೆ ||
ಮುಂಜಾನೆಯ ಮನೋಲ್ಲಾಸಕರ ವಾತಾವರಣದಿ
ಹಸುರೆಲೆಗಳ ಮೇಲೆ ಸಾಲಾಗಿ ಕುಳಿತ ಮಳೆಹನಿಗಳು
ಸೂರ್ಯರಶ್ಮಿಯೊಡನೆ ಸರಸವಾಡುತ್ತಾ
ಸಜ್ಜಾಗಿದೆ ಶುಭದಿನಕೆ ನಾಂದಿಹಾಡಲು ||
ಮಾನವನ ಕ್ರೌರ್ಯ ಅಟ್ಟಹಾಸದ ಫಲಶ್ರುತಿ
ನೀನಂದು ತೋರಿದ ರುದ್ರನರ್ತನ
ಸೂರು ಕಳಕೊಂಡ ಜೀವಸಂಕುಲದ ಅಳಲು
ಇಂದಿಗೂ ಅಚ್ಚಳಿಯದೆ ಉಳಿದಿದೆ ಮನದಲಿ ||
ಮತ್ತೆಂದೂ ತೋರಬೇಡ ನಿನ್ನ ಆ ಪ್ರತಾಪ
ಭೂದೇವಿಯ ಮೇಲೆ ದಯೆತೋರಿ
ಹರಿದು ಬಾ ಇಳೆಗೆ ಭರವಸೆಯ ಬೆಳಕಾಗಿ
ಎಂದೆಂದೂ ಬಿಗಿಯಾಗಿರಲಿ ಪೃಥ್ವಿಯೊಡನೆ ನಿನ್ನ ಬಂಧ ||
-ರಮ್ಯಾ ನೆಕ್ಕರೆಕಾಡು, ತೃತೀಯ ಬಿ.ಎಸ್ಸಿ, ವಿವೇಕಾನಂದ ಕಾಲೇಜು ಪುತ್ತೂರು.
ಮಳೆ ಹನಿಯ ನರ್ತನ
ಮಳೆಹನಿಯು ನರ್ತಿಸಿರಲು
ವೇದಿಕೆ ಭೂಮಿ ಆಗಿದೆ,
ಗಗನ ಗುಡುಗಿ ಮಿಂಚಿದೆ,
ಕಾದ ಮನವು ತಣಿದಿದೆ!
ಗಾಳಿಯ ನಾಟ್ಯಕೆ ಸೋತು,
ಎಲೆಗಳು ತಲೆದೂಗಿವೆ.
ನೀರ ಬಿಂದು ಜಾರಿ ಬೀಳುತಿರೆ,
ಬೇರುಗಳು ತಂಪಾಗಿಸಿಢಢದೆ!
ನವಿಲು ಗರಿಬಿಚ್ಚಿ ಕುಣಿದಿರೆ,
ಕೋಗಿಲೆ ಕೂ ಎಂದಿದೆ,
ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ,
ಮುಂಗಾರಿನ ಸಂಭ್ರಮ ಜೋರಿದೆ!
– ಸಹನಾ ಕಾರಂತ್, ಚಿಕ್ಕಮಗಳೂರು
Related Articles
ಮೋಡದ ಮರೆಯಲ್ಲಿ
ತನ್ನನ್ನೇ ತಾ ಮರೆತು
ಮರೆಯಾಗಿದೆ..
ಜಿನುಗುವ ಹೂ ಮಳೆಯಲ್ಲಿ
ಕಾನನದ ಗಿಡ ಮರವೆಲ್ಲಾ
ನಿಶ್ಯಬ್ಧವಾಗಿ ತಲೆದೂಗಿ
ಹಾಡತೊಡಗಿದೆ..
ಆ ಲತೆಗಳು ವಯ್ನಾರದ
ಬಳುಕಿನ ನಡೆಯಲ್ಲಿ
ಸಾಗುತ ನಡೆದಿವೆ
ಮರದ ನೆರಳಲ್ಲೇ..
ಗಗನಚುಂಬಿ ಮರಗಳಲ್ಲಿ
ಹಕ್ಕಿಗಳ ಕಲರವವು
ಸಂತಸದಿ ಬಾನಾಡಿಗಳ
ಜತೆಯಲ್ಲಿ ಹಾರಾಡಿವೆ..
ಆ ಮೃಗಗಳು ನಿಶ್ಯಬ್ಧವಾಗಿವೆ
ಗುಡುಗಿನ ಆರ್ಭಟಕೆ
ಮಂದವಾಗಿ ಅನುಭವಿಸಿದೆ
ಮಿಂಚಿನ ಆ ನೋಟವ..
ಎಂಥ ಸಂಭ್ರಮದ ಮಳೆಯಿದು
ಎಲ್ಲ ಜೀವಿಗಳಲ್ಲಿ
ಹರ್ಷದ ಸಂಗಮವಿದು
ಇದೆ ಪ್ರಕೃತಿಯ ಮಂದಹಾಸ..
– ಅವಿನಾಶ್ ಶೆಟ್ಟಿ , ಉಡುಪಿ
Advertisement
ಮಳೆ ಹಾಡುಸಾವಿರಾರು ಗಿಡಗಳು ಫಲವಾಗಲು ಅಣಿಯಿವೆ
ಹಸುರು ಚಾಪೆಯ ಹೊದೆಯಲು ಮಣ್ಣು ತವಕಿಸಿದೆ
ಕೆರೆ, ನದಿ, ಹಳ್ಳಗಳು ಖಾಲಿ ಬೊಗಸೆಯ ಚಾಚಿವೆ
ಅದೆಷ್ಟೋ ಹೃದಯಗಳು ಮತ್ತೆ ಮಗುವಾಗ ಬಯಸಿವೆ
ಬಂದುಬಿಡು ಮತ್ತೂಮ್ಮೆ ಪ್ರತೀ ವರ್ಷದಂತೆ
ಹನಿಯಾಗಿ, ಮೇಘಗಳ ಧ್ವನಿಯಾಗಿ
ಆಗಸದ ಗುಟ್ಟುಗಳ ಭುವಿಗೆ ಪಿಸುಗುಡುತ
ನಲ್ಮೆಯಲಿ ನೇವರಿಸಲಿ ಪಶ್ಚಿಮದ ಮಾರುತ
ಹುಲುಮನುಜರು ನಾವು ಅರ್ಭಟವ ತಡೆಯೆವು
ಹದ್ದುಮೀರಿದರೆ ಮದ್ದಾನೆ ನೀ, ನಿನಗೆಲ್ಲಿಯ ಮಾವುತ ?!
ಬಂದುಬಿಡು ಮತ್ತೂಮ್ಮೆ ಪ್ರತೀ ವರ್ಷದಂತೆ
ಮಿತವಾಗಿ, ಕಂಗಳಿಗೆ ಹಿತವಾಗಿ
ಅಡಿಯಾಳುಗಳು ನಾವು ನೀನೇ ಪರಮಾತ್ಮ
ನೀ ಬಂದರೆ ವರ, ಬರದಿದ್ದರೆ ಬರ
ನಂಬಿದವರು ನರಳಿದರೆ ನಿನಗೇ ಅವಮಾನ
ಬಿಂಕ, ಬಿಗುಮಾನ ನಿನಗಲ್ಲ ತರ
ಬಂದುಬಿಡು ಮತ್ತೂಮ್ಮೆ ಪ್ರತೀ ವರ್ಷದಂತೆ
ಜಲವಾಗಿ, ಪರಿಸರಕೆ ಒಲವಾಗಿ
ನಿನ್ನ ಬಗ್ಗೆ ಗೀಚಲು ಕವಿಗಳು ಕಾದಿಹರು
ಅವರ ಹಿಡಿತಕೆ ಸಿಗುವ ಹರಿವು ನಿನ್ನದಲ್ಲ
ಕ್ರೂರತೆಯ ಕಳೆದುಬಿಡು ಮನಗಳನು ತೊಳೆದುಬಿಡು
ಮಜ್ಜನವ ಮಾಡಿ ಮೈಕೊಡವಲಿ ಜಗತ್ತೆಲ್ಲಾ
ಬರುತಲಿರು ಪ್ರತೀ ವರ್ಷ ಒಮ್ಮೆಯೂ ಮರೆಯದೇ
ಸ್ಥಿತಿಯಾಗಿ, ಸೃಷ್ಟಿಯ ಗತಿಯಾಗಿ…
– ಸಂಪತ್ ಸಿರಿಮನೆ, ಕೊಪ್ಪ ಮತ್ತೂಂದು ಮಳೆಗಾಲ
ಮತ್ತೆ ಶುರು!
ಮಳೆ, ಸಿಡಿಲು, ಗುಡುಗೂ
ಮಿಂಚಿ ಮರೆಯಾಗುವ ನೆನಪ ಹಾಗೆ
ಮಿಂಚು ಬಳ್ಳಿಗಳೂ!
ಹಲಸಿನ ಹಪ್ಪಳ ಮಾಡಿ
ಒಣಗಿಸಿ ಗಂಟು ಕಟ್ಟಿದ್ದೇನೆ ಮಳೆಗಾಲಕ್ಕೆ…
ಈ ಬಾರಿ ನೀನು ಬಂದೇ ಬರುವೆಯೆಂದು!
ಚುಮು ಚುಮು ಮಳೆ ಸಂಜೆಯಲಿ
ಹಬೆಯಾಡುವ ಟೀಯ ಜೊತೆ
ಹಪ್ಪಳ ಮೆಲ್ಲುತ್ತಾ….
ನಾನು ಲೇಖನಿ ಹಿಡಿಯಬೇಕು….
ಎಷ್ಟೋ ಮಳೆಗಳ ಕಥೆ
ಬಾಕಿಯಿದೆ ಹೇಳುವುದಕ್ಕೆ!
ಹೇಳಿದಷ್ಟೂ ಮುಗಿಯದ್ದದು…
ಅದೆಷ್ಟು ಮಳೆಗಾಲ ಬೇಕೋ ಏನೋ
ಈ ಮಳೆಯೇ ಹಾಗೆ
ಕಣ್ಣೀರನ್ನೂ ಮರೆಮಾಚುತ್ತದೆ
ತೋಯಿಸಿ, ನೆನಪಿಸಿ, ಹಸಿರು ಹುಟ್ಟಿಸಿ!!
ಮಣ್ಣಿನ ಘಮಲಿಗೆ ನಾನು ಹೆಣ್ಣಾಗುತ್ತೇನೆ…
ಥೇಟ್ ಈ ಭೂಮಿಯ ಹಾಗೇ
ಎಲ್ಲಾ ಘಮಲಿಗೂ ಒಂದು ನೆನಪಿರುವಂತೆ…
ಈ ಘಮಲು ಬರೀ ನಿನ್ನದು..!!
ಹಾ! ಮರೆತಿದ್ದೆ ನೋಡು…
ಮೊದಲ ಮಳೆಗೆ ಬೆಳೆದ ಕಳೆ
ಹಾಗೆಯೇ ಇದೆ ಕಿತ್ತು ಬಿಡಬೇಕೆಂದಿದ್ದೇನೆ
ಹೊಸ ಚಿಗುರಿಗೊಂದಿಷ್ಟು ಜಾಗ ಬೇಕಲ್ಲ!
ನನ್ನ ಮನಸಿನೊಳು ಮಳೆ ಸುರಿದು
ನೆನಪುಗಳೇ ಕೊಚ್ಚಿ ಹೋಗುವ ಮುನ್ನ
ಬಂದುಬಿಡು ಹಪ್ಪಳ ಕರಿದಿಡುತ್ತೇನೆ….!!
ಜಯಶ್ರೀ, ಇಡ್ಕಿದು ರಂಗಭೂಮಿ ಕಲಾವಿದೆ, ಮೈಸೂರು
ಮಳೆರಾಯನ ಸಡಗರದ ಮಹಾಯಾನ
ಬರಗಾಲದ ಬಿಸಿಲ ತಾಳಿ
ಧರೆಯ ಒಡತಿ ದಾಹಗೊಂಡಿಹಳು
ಒಡಲ ದಾಹವ ತಣಿಸಲು ಮಳೆರಾಯನು
ಗುಡುಗು ಮಿಂಚಿನ ಸಂದೇಶವ ಕಳಿಸುತಿರುವನು
ಬಂದನೊ ಮಳೆರಾಯ
ಪರ್ಜನ್ಯ ಗೀತೆಯ ಹಾಡುತ
ಗಿಡ ಮರಗಳ ಮೈಯನು ನೆನಸುತ
ಕಾನನದ ಯಾನ ಆರಂಭಿಸುತ್ತಿರುವ
ಜುಳು ಜುಳು ಹರಿಯುವ ಝರಿಯಲಿ ಸೇರಿದನೊ
ಧುಂಬಿಗಳ ಝೇಂಕಾರವು ಕಾಡ ತುಂಬೆಲ್ಲಾ ಪಸರಿದೆ
ಪ್ರಾಣಿ ಪಕ್ಷಿಗಳೆಲ್ಲವು ಆನಂದಿ ಕುಣಿಯುತಿವೆ
ಸರಿ ಎನ್ನಲು ಆಗದು ತಪ್ಪು ಎನ್ನಲು ಆಗದು
ನುಲಿದಾಟದ ಹಕ್ಕಿಗಳ ಚಕ್ಕಂದವ
ಕಲರವ ಮಾಡುತ ಮೂಡಣದತ್ತ ಸಾಗುತಿವೆಯೊ
ಬೆಟ್ಟ ಗುಡ್ಡಗಳ ಅಲೆಯುತ
ಊರು ಕೇರಿಗಳ ಸುತ್ತುತ ಬಂದನೊ ಮಳೆರಾಯ
ಪ್ರಾಣಿ ಪಕ್ಷಿಗಳು ನಿನ್ನ ಸ್ಪರ್ಶಕೆ ಹಿಗ್ಗುತುಂಬಿ
ಸಂತೋಷದ ಕುಹೂ ಗರಿಯಲಾರಂಭಿಸಿದವೊ
ಅಪರೂಪದ ನಿನ್ನ ಯಾನ ಸಡಗರ ಸಂಭ್ರಮಕೆ ಕಾರಣ
ಮೊಡ ಕವಿದ ವಾತಾವರಣ
ಯಾರ ಕುಂಚದಲಿ ನೀ ಅಡಗಿರುವೆಯೊ
ಕವಿಗಳ ಲೇಖನಿಯ ತುದಿಯಲಿ
ಸುವರ್ಣಾಕ್ಷರದಿ ಬಂದಿಳಿದೆಯೋ
ಕವಿ ಕಲೆಗಳಿಗಿದು ಸುವರ್ಣ ಸುಂದರ ಆವರಣ
ಜೀವ ಸಂಕುಲಗಳಿಗೆ ಮರು ಜೀವವ ತುಂಬುತಾ
ಮಕ್ಕಳ ಆಟ ಪಾಠಕೆ ಬಯಲು ಶಾಲೆಯ
ಬೀದಿಗೆ ಬಂದಿಳಿದನೊ ಮಳೆರಾಯ
ಕಾಗದದ ದೋಣಿಯಲಿ ನೆನಪುಗಳ ಬುತ್ತಿಯ
ತೆಲಿಬಿಟ್ಟಿರುವ ಬಾಲ್ಯದ ಕ್ಷಣಗಳಿಗೆ
ಮರು ಜೀವ ತುಂಬೀಸುತಾ ಯಾನ ಗೈದನೊ ಮಾಳೆರಾಯ..
-ಶಿವರಾಜ್ ಎಂ. ಕೆ . ಎಸ್ ಡಿ ಎಂ ಕಾಲೇಜು ಉಜಿರೆ ಭುವಿ ಹದವಾಗಿ ತಣಿಯುತಿದೆ
ಬೆಳ್ಕೊಡ ಕಾರ್ಮೋಡವಾಗಿ
ಕಾರ್ಮೋಡ ಮಳೆಹನಿಯಾಗಿ
ಭುವಿಗೆ ಬೀಳುತಿದೆ ಚಿಟಪಟ ಸದ್ದೊಂದಿಗೆ
ಭುವಿಯೆಲ್ಲ ಹದವಾಗಿ ತಣಿಯುತ್ತಿದೆ.
ಸುರಿಯೆ ದಯೆತೋರಿ ಮೆಲ್ಲಗೆ
ತುಂತುರು ಹನಿಯ ಪೆನ್ನಿರೊಂದಿಗೆ
ಗುಡುಗು ಮಿಂಚೊಂದಿಗೆ ಬಂದು
ತಣಿಸು ಭುವಿಯು ನಗಲಿ ಹಸಿರೊಂದಿಗೆ.
ಬಿತ್ತಿಹರು ಬೀಜವ ನಿನ್ನ ಕರುಣೆಯಲ್ಲಿ
ನಿನ್ನ ನಂಬಿಹರು ರೈತರು ಸುರಿ ನೀನಿಲ್ಲಿ
ಜಡಿ ಮಳೆಯ ಸುರಿಯದಿರು ನೀನೆಂದು
ಜಲಪ್ರಳಯವಾದಿತು ತುಂತುರು ಸುರಿಯಿಂದು
ಬರಡು ಜೀವಕೆ ನಿನ್ನ ಒಲುಮೆ ಬೇಕು
ನಿನ್ನ ಅಮೃತದ ಹನಿಯಿಂದ ಜೀವ ತಣಿಯಬೇಕು
ಮಳೆಯೇ ನಿನ್ನನಿಯಿಂದ ಭುವಿ ಮೊಳೆಯಬೇಕು
ನಿನ್ನ ಜನನ ಜನ ಮನದಿ ಹಚ್ಚ ಅಳಿಯದಂತಿರಬೇಕು
ಮಳೆ, ನೀನು ಅಮೃತದ ಬಿಂದು
ನಿನ್ನಿಂದ ನೆನೆದು ಜೀವಿಸಲಿ ಹಸಿರಿಂದು
ನಿನ್ನೊಲವು ಬೇಕು ದಣಿದ ಧರೆಗೆ
ನಿನ್ನಿಂದ ಕಳೆ ಹೆಚ್ಚಲಿ ಹಸುರ ಬೆಳೆಗೆ
ಬಿಡದೆ ಬಿದ್ದರು ಮಳೆಯೇ ತಣಿಸು ಜಗವ
ನಿನ್ನಿಂದ ಆಗದಿರಲಿ ಅಪಾಯ ರಕ್ಷಿಸು ಜೀವವ
ಮಳೆರಾಯ ನೀನೆಂದರೆ ಜವರಾಯನಲ್ಲ
ನೀನಿಲ್ಲದೆ ಮಳೆಯೇ ಈ ಜಗದ ಜೀವವಿಲ್ಲಾ
– ಮಂಜುನಾಥ ನಾಯಕ ಎನ್.ಆರ್.ಚನ್ನಗಿರಿ ಚೆಲ್ಲಾಟ
ಪೃಥ್ವಿಗೆ ಮಳೆ ಹನಿಯು ಬೀಳಲು
ಆಕಾಶದಲ್ಲಿ ಮೋಡಗಳ ಪಯಣ
ಮೋಡ-ಮೋಡಗಳ ಘರ್ಷಣೆಗೆ
ಗುಡುಗು-ಮಿಂಚಿನ ಆಗಮನ.
ಬೀಸುವ ತಂಪಾದ ಗಾಳಿಗೆ
ಗಿಡ-ಮರಗಳ ನರ್ತನ
ಪ್ರಾಣಿ-ಪಕ್ಷಿಗಳ ನಡುವೆ
ಇಂಪಾದ ದನಿಗಳ ಚೆಲ್ಲಾಟ
ಅಂಗಳದಲ್ಲಿ ನೀರಾಗುಳ್ಳೆಗಳ
ಚೆಲ್ಲಾಟ
ಹಳ್ಳ-ಕೊಳ್ಳಗಳಿಗೆ ಸಮುದ್ರ
ಸೇರುವ ಉದ್ವೇಗ
ರೈತರ ಮುಖದಲ್ಲಿ ಮಂದಹಾಸ.
ವಿಶಾಲ ಆಕಾಶ ಪ್ರಶಾಂತವಾಗಲು
ಭೂಮಿಯಲ್ಲಿ ಹೊಸ ಚಿಗುರು
ಬೆಳೆಯಲು
ಮತ್ತೆ ಬರುವ ಮಳೆರಾಯ.
-ನಿವೇದಿತಾ, ಜಾರ್ಕಳ ಮುಂಡ್ಮಿ.
ಮಳೆ ಹನಿ
ತಿಳಿನೀಲ ಈ ಆಗಸದಲಿ,
ಕಾರ್ಮೋಡಗಳ ಸಾಲು ಏಳಲಿ,
ಪುಟ್ಟ-ಪುಟ್ಟ ಹೆಜ್ಜೆಯಿಟ್ಟು,
ಭುವಿ ಕೆನ್ನೆಗೆ ಮುತ್ತನ್ನಿಟ್ಟು,
ಗುಡುಗು ಸಿಡಿಲಿನ ನಡುವಲಿ,
ತಂಪಾದ ಗಾಳಿ ಎಲ್ಲೆಡೆ ಬೀಸಲಿ.
ಮಯೂರ ನರ್ತನದ ಜತೆಯಲಿ,
ಕೋಗಿಲೆಯ ಗಾನ ಮೊಳಗಲಿ,
ಹರಿವ ನದಿಗೆ ಶಕ್ತಿಯ ಕೊಟ್ಟು,
ಸುಡುವ ಜಗಕೆ ತಂಪನಿಟ್ಟು,
ವರ್ಷ ಧಾರೆಯು ಚುಂಬಿಸುವ ಕ್ಷಣದಲಿ ,
ರೈತರ ಮನದಲಿ ಹರ್ಷೋದ್ಘಾರ ಬೆಳಗಲಿ.
ವಸುಂಧರೆಗೆ ಹೊಸತನವು ಬರಲಿ,
ನದಿ-ಸರೋವರಗಳು ಸಂತಸದಿ ಹರಿಯಲಿ,
ಅವನಿಯು ಹಸುರು ಸೀರೆಯನ್ನುಟ್ಟು,
ಉಸಿರೆಂಬ ನಗುವನು ಕೊಟ್ಟು,
ನಮ್ಮ ಮನಕೆ ಮುದ ನೀಡುತಲಿರಲಿ,
ಧರೆಯು ಹಸಿರಿನಲಿ ಎಂದೆಂದಿಗೂ ಕಂಗೊಳಿಸಲಿ…..
– ಅನುಷಾ ಎಸ್., ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಮಳೆ ಹಾಡು
ಕನಸುಗಳ ಹೊತ್ತು
ಮೋಡಗಳ ತೇರು
ಸಾಗಿ ಬಂದಿದೆ
ಬದುಕಿನಂಗಳಕೆ..
ಹೊಸ ಕನಸು,
ಹೊಸ ಹುರುಪು,
ಹೊಸ ಆಸೆಗಳ
ಹನಿಗಳೊಳಗೆ ತುಂಬಿ
ವರುಣ ಕಳುಹಿಸಿರುವ
ಮಳೆಯ ಧರೆಗೆ
ತಂಪನ್ನೀಯಲು…..
ಧರೆಗಿಳಿದ ಮಳೆಹನಿ
ಮನದಾಳಕ್ಕಿಳಿದು ಮನದ
ನೂರು-ನೋವುಗಳ,
ನೆನಪುಗಳ ತಾಪವನ್ನು
ನೀಗಬಹುದೇ…?
ಅಥವಾ ಪ್ರತಿ ಬಾರಿಯಂತೆ
ಕೇವಲ ಧರೆಗಿಳಿದು
ಭುವಿಯ ತಾಪ ನೀಗಿ
ನನ್ನ ಕಡೆಗಣಿಸುವುದೇ… !?
– ಅಂಬಿಕಾ ರಾವ್, ಸ.ಪ್ರ.ದರ್ಜೆ ಕಾಲೇಜು ಬಾರ್ಕೂರು ಬಾ ಮಳೆಯೇ ಬಾ!
ಹೊಲದ ಕಳೆಯಲ್ಲಿ, ಮುಸುಕಾದ ಬದುಕಿಗೆ
ಹಸನಾಗುವ ಹಂಬಲ ನಿನ್ನಿಂದ ಬಾ ಮಳೆಯೇ ಬಾ|
ಗಿಡ, ಮರ ಒಣಗಿ ಹೊರಗುವ ಹೊತ್ತಾಗಿದೆ
ನೀರಾಯಿಸಲು, ನಿಭಾಹಿಸಲು ಬಾ ಮಳೆಯೇ ಬಾ||
ವರ್ಷವಿಡಿ ನೆಮ್ಮದಿಯ ಹರ್ಷದ ಬಾಳಿಗೆ ನೀನು ಬರಬೇಕು
ಇನ್ನು ಸ್ಪರ್ಶವಿರಲಿ, ಭುವಿಗೆ ಬಾ ಮಳೆಯೇ ಬಾ|
ತಂಪೆರೆವ ತಂಗಾಳಿಗೆ ಇಂಪಾಗುವ ಮಣ್ಣ ಘಮ ಸವಿಯುವಾಸೆ
ಮೈಮನ ತಣಿಸುವಾಸೆ ಬಾ ಮಳೆಯೇ ಬಾ||
ನವಿಲುಗಳು ಗರಿಬಿಚ್ಚಿ ಕುಣಿಯುವಾಸೆ ನೀ ಬರುವೆಯೆಂಬ
ನಂಬಿಕೆಯಿಂದ ಕಾದು ಕುಳಿತಿವೆ ಬಾ ಮಳೆಯೇ ಬಾ|
ಮುದ್ದು ಮಕ್ಕಳು ಕಾಗದದ ದೋಣಿ ಮಾಡಿ ಕಾಯುತಿರುವ
ನಿನ್ನ ಬರುವಿಕೆಗೆ ಬಾ ಮಳೆಯೇ ಬಾ||
ಬರದ ನಾಡಲ್ಲಿ ಹಸಿರಿನ ಹೊದಿಕೆ ಹೊದಿಸಲು
ಬಾ ಮಳೆಯೇ ಬಾ
ರೈತನ ಉಸಿರಿನ ನರ್ತನ ನೀನು ಕಾಲ ಕಾಲಕ್ಕೆ ಸರಿಯಾಗಿ
ನೀನಿದ್ದರೆ ಬೇರೆ ಸ್ವರ್ಗ ಬೇಕೆನು ಬಾ ಮಳೆಯೇ ಬಾ||
ಅತಿವೃಷ್ಟಿ ಅನಾವೃಷ್ಠಿಗಳ ಗಮನದಲ್ಲಿಟ್ಟು
ನಿನ್ನ ನಂಬಿರುವ ರೈತರಿಗೆ ನಿರಾಸೆ ಮೂಡಿಸದೆ ಒಮ್ಮೆ ಬಾ ಮಳೆಯೇ ಬಾ||
– ಭವಾನಿ ಎಂ., ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರು ಸೋತಿದೆ ಮನವು ವರ್ಷಧಾರೆಗೆ!
ಬಿಸಿಲ ಬೇಗೆಯಿಂದ ದಣಿದ ನಮಗೆ
ತಂಪೆರೆಯಲು ಬಂದ ವರುಣ ಧರೆಗೆ
ಸೂರ್ಯ-ಚಂದ್ರರ ಸರಿಸಿ ಮರೆಗೆ
ಎರೆಯುತಿಹನು ಪನ್ನೀರ ಭುವಿಗೆ||
ತಂದಿಹನು ನೆನಪುಗಳ ಮಳೆಯ ಜತೆಗೆ
ತೆರೆಯುತಿದೆ ಮಳೆಯು ಕನಸಿನ ಮಳಿಗೆ
ಮರಳಿ ಬರುತಿಹನು ವರುಣ ಇಳೆಗೆ
ಸೋತಿದೆ ಮನವು ಈ ವರ್ಷಧಾರೆಗೆ||
– ಭಾವನಾ ಕೆರ್ವಾಶೆ ಮೊದಲ ಮಳೆ
ಚಿಗುರೆಲೆಯ ನವಿರೋಳೆ
ಬೆಳ್ಮುಗಿಲ ಸೊಬಗಿನೋಳೆ
ಇಂಪಾದ ಧ್ವನಿಯವಳೆ
ಎಲ್ಲಿರುವೆ ಹೇಳೆ? ಕಾದಿರುವೆ ಪ್ರತಿ ನಾಳೆ
ಎಂದು
ನನ್ನಾಸೆ ಓಲೆಯ ಗೀಚುವ ವೇಳೆ
ನನ್ನನು ಬಡಿದೆಚ್ಚರಿಸಿತು ಗುಡುಗು ಹೊರಬಂದು,
ತೆರೆದು ನೋಡು ಕಣ್ಣನು
ಕೆಳಗಿಟ್ಟು ಪೆನ್ನನು, ಪರಿಚಯಿಸುವೆನು
ಹೊಸ ಅನುಭವನು
ಕೃಷ್ಣ -ಮೇಘಗಳ ಚಲನ
ಕಣಿ¾ಟುಕಿಸುವ ಸೂರ್ಯನ ನಯನ
ಅಪ್ಸರೆಗೂ ಮಿಗಿಲಾಗಿ ನರ್ತಿಸುವ ಕಾನನ,
ಎಲ್ಲವ ನೋಡುತ ನಿಂತ ನನ್ನನ!
ಚುಂಬಿಸಿತು ಮಳೆಹನಿಯ ಸಿಂಚನ
ಮರೆತೆನು ನನ್ನೇ ನಾ,
ನೆನಪಾಗುತ ಬಾಲ್ಯದ ಜೀವನ
ಮರುಕಳಿಸಿತು ಬಾಲ್ಯದ ನೆನಪು
ತರೆಯಿತು ನಿನ್ನೆಗಳ ಪುಟವು
ಇಡೀ ಊರನ್ನು ಬೆಸೆವ ಓಣಿ
ಅದರ ಮಧ್ಯದಲ್ಲೊಂದು ದಿನ್ನೆ
ಮಳೆಗಾಲದಲ್ಲದುವೇ ಕಾಲುವೆ
ಸ್ನೇಹವನ್ನೊಸೆವ ಸೇತುವೆ
ಜೋಗವನ್ನು ಕಾಣದ ನಮಗೆ
ದಿನ್ನೆಯ ಬಿರುಕುಗಳ ಮೂಲಕ ಹರಿವ ನೀರೆ ರಾಜ, ರಾಣಿ, ರೋರರ್, ರಾಕೆಟ್
ಬಿಡುವಿಲ್ಲದೆ ಸುರಿವ ಮಳೆ,
ಎದುರಾಯಿತು
ಕೈ ಹಿಡಿದು ಜೊತೆಗೇ ನುಗ್ಗುತ್ತಿದ್ದ ನಮಗೆ,
ಒಗ್ಗಟ್ಟಿನ ಪಾಠ ಕಲಿಸಿತು ನಿಧಾನಕೆ……
ಹಲವು ಮಳೆಗಾಲಗಳು ಕಳೆದವು
ಕಲಿಯಲಾಗದ ಪಾಠವ ಮರೆತೆವು
ಸಂಕುಚಿತರಾಗುತ್ತಲೇ ಹೋದೆವು
ಒಗ್ಗಟ್ಟಿನ ಕೊಂಡಿ ಜಾರುವವರೆಗೂ…
ಮತ್ತೆ ಒಗ್ಗೂಡುವ ಮುನ್ನ
ಆಗಬೇಕು ಅಂತಹದೆ ಪ್ರಯತ್ನ
ಅದಕ್ಕೆ ಮತ್ತೆ ಮಳೆಯಾಗಬೇಕಿದೆ,
ಸಂಕುಚಿತತ್ವವ ಕಾಳಜಿ
ಸಂಬಂಧಗಳ ಬೆಸೆಯಬೇಕಿದೆ.
ಅರುಣ್ ಕಿರಿಮಂಜೇಶ್ವರ,
ವಿವೇಕಾನಂದ ಕಾಲೇಜು, ಪುತ್ತೂರು
ಸುಂದರ, ಸುಮಧುರ
ಬರಡು ಭುವಿಯ, ದಣಿದ ಧಾತ್ರಿಯ
ತಂಪಾಗಿಸಿ ಆಲಂಗಿಸಲು
ಬರುವನು ವರುಣನು
ಸಿಡಿಲ ಝೇಂಕಾರದಿ, ಮಿಂಚಿನ ಹೊಳಪಲಿ
ನವ ಹರುಷದಿ ಕುಣಿಯುವಳು ಪ್ರಕೃತಿ
ಭೋರ್ಗರೆದು ಹರಿಯುವಳು ಕಾವೇರಿ
ಉಸಿರು ಬಿಟ್ಟು ಕೂರುವನು ರೈತ
ಮೈಮರೆತು ಆಡುವರು ಮಕ್ಕಳು
ನೆನಪಿನ ಕದ ತಟ್ಟಿ
ತಂಪಾದೆ ತಂಗಾಳಿ ಬೀಸಿ
ಹನಿಹನಿಯಲು ಕಥೆಯೊಂದು
ಗೀಚಿ ಹೋಗುವ
ಮಳೆಯೇ, ನೀ ಸುಂದರ
ಜುಳು ಜುಳು ನಾದದಿ
ನೀಹೇಳುವ ಮಾತೇ ಸುಮಧುರ…
-ಚಂದ್ರಹಾಸ ಬಳಂಜ ಬೆಳ್ತಂಗಡಿ, ದ.ಕ. ಜಿಲ್ಲೆ
ಮಂಜಿನಸೋನೆ
ಬೀಸುವ ಗಾಳಿಗೆ,
ಮಂಜಿನಸೋನೆ ಸುರಿದಿದೆ
ಮೋಡಗಳ ನಡುವೆ,
ಹೃದಯದೊಳಗೆ ಸೋನೆಗೀತೆ ಹಾಡಿದೆ
ನೇಸರನ ಬೆಳಕು
ಪ್ರೀತಿಸುವ ತಂಗಾಳಿಗೆ ಮೈಯೊಡ್ಡಿ ನಿಂತಿದೆ.
ಮೌನ ತಬ್ಬಿತು ಕವಿದ ಕಾರ್ಮೋಡಕೆ
ತಾರೆಗಳು ಸಾಲುಗಟ್ಟಿ…
ಮಿಡಿಯುತ್ತಾ ನಿಂತವು ಮಳೆಗೆ
ಬೀಸುವ ತಂಗಾಳಿಯ ಜತೆಯಲ್ಲಿ
ಒಮ್ಮೆ ಮಂಜಿನಂತೆ ಕರಗಿ ಹೋದೆ
ಸೋನೆಯ ಮಳೆಗೆ
ಭವ್ಯಾ ಬಣ್ಣದ ಭಾವ ಕಿರಣ
ಕವಿದ ಚಂದ್ರನಿಗೆ ಮೋಹದ ತೋರಣ
ಗಿಡ ಮರ ಬಳ್ಳಿಗಳ ಎಲೆಗೆ
ನೀವು ಸ್ಪರ್ಶ ಸುಖವನ್ನು ಚುಮುಕಿಸಿ
ಬಾನಂಗಳದಲ್ಲಿ ಚಿತ್ತಾರ ಬರೆಯುತ್ತಾ
ಧರೆಗೆ ಸುಂದರ ಸಾಹಿತ್ಯವ ಮೂಡಿಸಿ
ಮುಂಗಾರಿನ ಆಗಮನದ ಸಂಗಮ
ನೇಗಿಲ ಯೋಗಿಯ ಜೀವನ ಸುಗಮ
ಗುಡುಗು ಸಿಡಿಲು ಈಗೊಂದು ಮುಗಿಲು
ಪಾತರಗಿತ್ತಿಯ ಕಲರವದ ಸಾಲು.
-ಭೋವಿ ರಾಮಚಂದ್ರ, ಹರಪನಹಳ್ಳಿ ಅದೇನೋ ಗೊತ್ತಿಲ್ಲ
ಭಾವವೇ ಇಲ್ಲದೆ ಬೊಂಬೆಯಂತಿದ್ದ ಮನಸ್ಸಿಗೆ
ಮಳೆಗಾಲ ಅಂದ್ರೆ ಖುಷಿ, ಸಂಭ್ರಮ
ಅಲ್ಲ ಅದಕ್ಕೂ ಹೆಚ್ಚಿನದ್ದು.
ಚಳಿಯ ರಂಪಾಟ ಮುಗಿಸಿ ಸೆಕೆಯೊಳಗೆ ಹೈರಾಣಾಗಿ
ಮಳೆಗೆ ಎದುರುನೋಟ ಬೀರುತ್ತಾ ಕುಳಿತ
ಕಂಗಳಲ್ಲಿ ಕಾಣುವುದು ತೃಪ್ತಿಯ ಮಿಳಿತ
ಮೂಲೆಗೊರಗಿಸಿಟ್ಟ ಛತ್ರಿ ಬಹು ಆಪೆ¤ ಈಗ
ಗಾಡಿಯಿದ್ದರೆ ಸುರಕ್ಷತೆಗೆ ರೈನ್ ಕೋಟು
ನೆನಪಿಸುವ ಸರದಿ ಅಮ್ಮನದು
ಟಾರ್ಪಲ್ ಕಟ್ಟುವ ಅಪ್ಪಯ್ಯನಿಗೆ ಮಾತ್ರ
ಹೊಯ್ಯುವ ನೀರಿನ ಉಸಾಬರಿ
ಸಂಜೆಯಾದರೆ ಸಾಕು ಒರಲುತ್ತದೆ ಹೊಟ್ಟೆ
ಹಸಿವೆಯೆಂದೂ ಅನುಭವಿಸದ ಹಾಗೆ
ಯಾವಾಗಲೂ ಒಗ್ಗರಿಸಿದ ಅವಲಕ್ಕಿ
ಬೇಡವೆಂದರೆ, ಖಾರ ಮುಂಡಕ್ಕಿ
ಅಪರೂಪಕ್ಕೆ ಬೋಂಡಾ, ಬಜ್ಜಿ
ಒರೆದ ಹಪ್ಪಳ, ಸಂಡಿಗೆಗೀಗ ನೈಜ ಅಸ್ತಿತ್ವ
ಬಿಸಿಲಿಗೆ ಕರಟ ಗಿಡಗಳೆಲ್ಲ ಹಸಿರ ಹೊದ್ದು ನಿಂತಿವೆ
ಮರದ ಕಟ್ಟೆಯೊಳಗೆ ನೀರು ಸುತ್ತುವರಿದಿದೆ
ಏಳುವ ಎಳೆಯ ಹುಲ್ಲು
ಬಟ್ಟೆ ಕಾಣದ ನೆಲೆ, ಒದ್ದೆ ಚಪ್ಪಲಿ
ಅಂಗಳದಿ ಬಿದ್ದು ಒಡೆಯುತ್ತಿವೆ
ನೂರು ನೂರಾರು ಮುತ್ತುಗಳು
ಗೊತ್ತಿಲ್ಲ ಮಳೆಗಾಲ ಅಂದ್ರೇನೆ ಖುಷಿ
– ಕೀರ್ತಿ ಎಸ್. ಉಪ್ಪುಂದ , ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಮೊದಲ್ಮಳೆಯ ತವಕ
ಬಿರುಬಿಸಿಲು ಉಂಡು
ಎದೆ ಬಿರಿದುಕೊಂಡು..
ಬಿಸಿಯುಸಿರ ಉಸಿರೋ ನೆಲಕ
ಕರಿಮೋಡ ಕಂಡು
ಬಲು ಮೋಹಗೊಂಡು
ಮೊದಲ್ಮಳೆಗೆ ನೆನೆವ ತವಕ!
ಹಾರಿ ಹೋಗಿ ಜೊಳ್ಳು
ಜಾರಿ ಬಿದ್ದ ಕಾಳು..
ಮಳೆಹನಿಗೆ ತೋಯೋ ಪುಳಕ
ಚಿಗುರೊಡೆದು ಸೆಳೆದು
ಕವಲೊಡೆದು ಬೆಳೆದು
ಹಸಿರುಡುಗೆ ತೊಡುವ ತವಕ!
ಜನ-ಜಾನುವಾರು
ಗಿಡ-ಮರದ ಬೇರು
ನಿನ್ನ ನಾಮ ಜಪಿಸುತಿಹರು
ಶಿವಮುಡಿಯ ತಾರೆ
ಧರೆಗಿಳಿದು ಬಾರೆ
ಕೃಪೆತೋರಿ ತೃಷೆಯ ತೀರು!
ಅವ ನಮ್ಮ ರೈತ, ಜಗದನ್ನದಾತ
ನಿನ್ನೇ ಕಾಯುತಿರುವ ಇಳಿಯೆ
ರಪರಪನೆ ಸುರಿದು
ಸರಸರನೆ ಹರಿದು
ಅವನಾಸೆ ತಣಿಸೆ ಮಳೆಯೆ!!
– ಅಶೋಕ ವಿ. ಬಳ್ಳಾ, ಹುನಗುಂದ, ಬಾಗಲಕೋಟ ವರ್ಷಿಣೀಯ ಆಗಮನ
ಮೇಘ ಬಂದಳು ಧರೆಗೆ,
ವರ್ಷದ ಮೊದಲ ಮಳೆಯಾಗಿ,
ರೈತರ ಪಾಲಿನ ದೇವತೆಯಾಗಿ,
ಕೊರೊನಾ ಹೋಗಲಾಡಿಸುವ ದೈವವಾಗಿ,
ಭತ್ತ‰ ಅಕ್ಕಿ ಬೆಳೆಯುವ ವರವಾಗಿ,
ಮಲೆನಾಡಿನ ಜನತೆಗೆ ಖುಷಿಯಾಗಿ,
ಕಾಫಿ, ತೋಟಗಳ ಝರಿಯಲ್ಲಿ ಬರುವ
ಗಂಗೆಯಾಗಿ ಮಲೆನಾಡಿಗೆ ಬಾ.
ಮಳೆ ಬಂತೆಂದರೆ ಅದೆಷ್ಟೋ ಪ್ರೇಮಿಗಳೊ ಪಾಲಿನ ವಿರಹ ವೇದನೆಯನ್ನು ಹೋಗಲಾಡಿಸಿ,
ಕೆರೆ ಕಟ್ಟೆಗಳನ್ನು ತುಂಬಿಸಿ ಗೌರಿ ಹಬ್ಬದ ಹೊತ್ತಿಗೆ ಮುತ್ತೈದೆಯರ ಕೈಯಲ್ಲಿ ಬಾಗಿಣ ಬಿಡಿಸಿಕೊಂಡು ನೀನು ಸಮೃದ್ಧಿಯಾಗಿ ಜನರನ್ನು ಹರಸು
ಮಂಜುನಾಥ್ ದೇವಾಂಗ ಶೆಟ್ಟಿ , ಸಂತ ಫಿಲೋಮಿನಾ ಕಾಲೇಜು ಮೈಸೂರು ಮಳೆರಾಯ
ಬಾನಿನಂಚಿನಲಿ ಕವಿಯಿತು ಮೋಡ
ನೀ ಬಂದು ಇದನ್ನು ನೋಡ
ಅದೆಲ್ಲಿ ನೋಡಿದರೂ ಕಗ್ಗತ್ತಲು
ಅಷ್ಟರಲ್ಲಿ ಧರೆಗೆ ಇಳಿದನು ವರುಣ…
ಮೋಡ ಮೋಡಗಳ ಗುಡು ಗುಡು ಸದ್ದು
ಅದರ ಹಿಂದೆ ಬರುವುದು
ಮೈ ಜುಂ ಎನಿಸುವ ಮಿಂಚಿನ ಬೆಳಕು…
ಬಾ ಮಳೆಯೇ ಬಾ, ಹನಿ ಹನಿಯಾಗಿ ಬಾ
ಬಿಸಿಲ ಬೇಗೆ ಯಲಿ ಬೆಂದ
ಭೂಮಿ ತಾಯಿ ಮೇಲೆ ನೀ
ವರ್ಷಧಾರೆ ಎರೆಯು ಬಾ…
ಭೂಮಿಯ ಹಚ್ಚ ಹಸುರಾಗಿಸು ಬಾ
ಬೆಳೆಗಳ ತಂಪಾಗಿಸು ನೀ ಬಾ
ರೈತನ ಖುಷಿಯ ಇಮ್ಮಡಿಯಾಗಿಸು ಬಾ
ವರುಷದ ಮೊದಲ ಮಳೆಯೇ
ನೀನೆಂದರೆ ಎಲ್ಲರಿಗೂ ಖುಷಿಯೇ
-ಶುಭಾ ಶರತ್, ಉರ್ವ ಸ್ಟೋರ್ ಮಂಗಳೂರು ಜೋರು ಮುಂಗಾರು
ಬಿಸಿಲಿನ ಬೇಗೆಗೆ ಬಳಲಿದ
ಪೃಥ್ವಿಗೆ ನಿನ್ನ ಅಪ್ಪುಗೆ, ಹರುಷ ತಂದಿದೆ…
ರವಿಯ ತಾಪಕ್ಕೆ ಒಣಗಿದ
ನಿಸರ್ಗಕ್ಕೆ ನಿನ್ನ ತಂಪು, ಗಾಳಿ ಬಿಸಿದೆ…
ಕುಡಿಯದೆ, ಮಿಂದದೆ ಎಲ್ಲ
ಜೀವ ರಾಶಿಗಳಿಗೆ ನಿನ್ನ ಕಂಡು
ಗೆಲುವಿನಿಂದ ಕೂಗಿವೆ…
ನೀನಿಲ್ಲದೆ ಒಡಲು ಬತ್ತಿ, ಸಣ್ಣ ನದಿಗಳು ನಿನ್ನ ಸೇರುತ ಮೃದುಂಬಿ ಹರಿದಿವೆ
ರೈತನಿಗೆ ನಿನ್ನ ಆಗಮನವು
ತುಂಬು ಫಸಲು ತಂದಿದೆ
ಅತೀ ಕೋಪದ ಆರ್ಭಟಕ್ಕೆ
ಭೂಮಂಡಲ ನಿನ್ನ ಕಂಡು
ತತ್ತರಿಸಿ ನಲುಗಿದೆ
– ಸುಮಂಗಲಾ.ಮ. ಹೊಸಳ್ಳಿ , ರಾಣೆಬೆನ್ನೂರು, ಹಾವೇರಿ ವರ್ಷ ವಿಜೃಂಭಣೆ
ಹಸಿರ ತೇರಿನ ಮೇಲೆ ತೇಲುವ
ಬೆಳ್ಳಿ ಮೋಡಗಳ ಓಟ
ಪನ್ನಿರ ಹನಿಯ ಮಂಜಿನ
ಆಲಾಪ.. ಸದ್ದು ಮಾಡುವ
ಗುಡುಗು ಮಿಂಚಿನ ಮೇಳ
ತರುಲತೆಗಳೆಲ್ಲ ನಗುಬೀರಲು
ಸಡಗರದಿ ಗಾಳಿ ಸುಯ್ಯಿಗುಟ್ಟಿ
ಓಡಾಡುತ್ತಿರಲು ಆಹ್ಲಾದಕರ
ಹಬ್ಬ ಶುರುವಾದಂತೆ… ಸಂಭ್ರಮ
ಅಗೋ ದೂರದಿಂದಲೇ ಓಡೋಡಿ
ಬರಲು ಮಳೆರಾಯ ಭೋರ್ಗರೆದು
ಒಮ್ಮೊಮ್ಮೆ ಜೋರಾಗಿ ಮೇಳೈಸಿ
ಒಮ್ಮೊಮ್ಮೆ ಸಾವಧಾನದಿ ಸುರಿಯೇ
ಲಯಬದ್ಧವಾಗಿ ನರ್ತಿಸಿದನು
ಸುರಿಸಿದ ವರ್ಷ ಧಾರೆಯ…
ಬುಗುರಿ ಗುಳ್ಳೆಯ ನೀರ ಸ್ನಾನದಿ
ಇಳೆ ತಂಪಾದಳು ಕಂಗೊಳಿಸುತ್ತಾ
ಪುಳಕಿತಳಾಗುವಳು ಆಗಾಗ….
ಮಳೆರಾಯ ವಿಜೃಂಭಿಸುವನು..
ವಸುಧೆ -ವರ್ಷರ ಮಿಲನ..
ಶುರುವಾಗಿದೆ ಸುಂದರ ಮಳೆಗಾಲ.
– ಶರಣ್ಯಾ ಕೋಲ್ಚಾರ್, ಮಂಗಳಗಂಗೋತ್ರಿ ವಿ.ವಿ.ಕೊಣಾಜೆ ಜತೆಯಾದ ಕಾಗದದ ದೋಣಿ
ನೀಲ ಗಗನದಿ ಕಾರ್ಮೋಡಗಳ ಚಿತ್ತಾರ
ಪೃಥ್ವಿಯೊಡಲಿಗೆ ತಂಗಾಳಿಯ ಮಮಕಾರ
ತಾಳಮೇಳದಂತಿಹ ಗುಡುಗು ಮಿಂಚಿನ ಅಬ್ಬರ
ಮುಂಗಾರ ಮಳೆಗಿದೋ ಮುನ್ನುಡಿಯ ಝೇಂಕಾರ
ಮುತ್ತಿನ ಮಣಿಯಂತೆ ಜಿನುಗಿತು ಮಳೆಹನಿ
ಪುಳಕಿತಗೊಂಡಿತು ಸಕಲ ಜೀವಸಂದಣಿ
ಮೊದಲ ಮಳೆಗೆ ಜತೆಯಾದ ಕಾಗದದ ದೋಣಿ
ಕರ್ಣಗಳಿಗಿಂಪ ನೀಡಿತು ಪುಟ್ಟ ಹಕ್ಕಿಗಳ ಇನಿದನಿ
ಬಿರುಸಾದ ಮಳೆಯು ಭುವಿ ಸ್ಪರ್ಶಿಸಲು
ತುಂಬಿ ತುಳುಕಿತು ಜಲಮೂಲಗಳೊಡಲು
ಸುಡು ಬಿಸಿಲಲಿ ಬೆಂದ ಪ್ರಕೃತಿಯ ಮಡಿಲು
ತಣ್ಣಗಾಯಿತು ವರ್ಷಧಾರೆಯು ತಂಪೆರೆಯಲು
ಮಳೆಗದೋ ಸೋರುವ ಮನೆಗಳು
ಮಾರುತಕೆ ಶರಣಾಗುವ ಗಿಡ ಮರ ಬೆಟ್ಟಗಳು
ಶಾಂತ ಸಾಗರದಿ ರುದ್ರನರ್ತನವಾಡುವ ಅಲೆಗಳು
ಕೊಂಚ ಗಾಬರಿಯಾಗಿಹುದು ಮನದಂಚಿನೊಳು
ಕಾರ್ಮೋಡದ ಪರದೆಯು ದೂರ ಸರಿಯಿತು
ಹೊಂಬಿಸಿಲು ತುಸು ಮಂದಹಾಸವ ಬೀರಿತು
ಪುಣ್ಯ ಜಲವದು ಈಗ ಅದೃಶ್ಯವಾಯಿತು
ಸೃಷ್ಟಿಯು ಮರು ಜೀವಕಳೆ ಪಡೆಯಿತು.
-ಜ್ಯೋತಿ ಕೆ. ಕುಂಬ್ರ ಮಳೆಹನಿಗಳು ಮೇಳೈಸಿದಾಗ
ಜೀವನದ ಹೊಸ ಕನಸುಗಳ ಜತೆ
ಹಸುರ ಜೀವ ಚಿಗುರೊಡೆಯೋ ಸಮಯ
ಮಡಚಿಟ್ಟ ಕೊಡೆಯ ಜತೆಗೇ
ಸವಿ ನೆನಪೂ ಹೊರಬಂತು ಸನಿಹ
ಬಿಸಿಯೂಟದ ಎಂಜಲು ಬಟ್ಟಲಿಗೆ
ಮಳೆರಾಯನ ಪನ್ನೀರ ಸ್ನಾನ
ಬಿರು ಬೇಸಗೆಯಲಿ ಬೆಂದ ಹಪ್ಪಳ
ಎಣ್ಣೆಯಲಿ ಮಿಂದೇಳ್ಳೋ ಸಮಯ
ಕೆಸರ ಹಾದೀಲಿ ನಡೆವುದೇ ಸಂಭ್ರಮ
ಚಿಣ್ಣರ ದೋಣಿಗಳ ಸಂಗಮ
ಗುಡುಗು, ಮಿಂಚು, ಗಾಳಿಯ ಅಬ್ಬರ
ತುಸು ಭಯದಲೂ ನಾ ಕಂಡೆ ಸುಂದರ ನೇಸರ
ಧರೆಯ ದಾರಿದ್ರ್ಯವನು ಕಳೆವ
ಕೊಳೆಯನು ತೊಳೆವ
ಹಸುರ ಚಿತ್ರಣ ಚಿತ್ರಿಸೋ ಕಲೆಗಾರ
ನೀ, ನೋಯಿಸದಿರು ಕಾಯಿಸದಿರು
-ರಾಮ್ ಮೋಹನ್ ಭಟ್, ವಿವೇಕಾನಂದ ಕಾಲೇಜು, ಪುತ್ತೂರು