Advertisement

ಮಳೆ ಎದುರಿಸಲು ಸಜ್ಜಾಗಿಲ್ಲ ಪಾಲಿಕೆ

12:52 PM Aug 25, 2018 | Team Udayavani |

ಬೆಂಗಳೂರು: ಈ ಹಿಂದೆ ಮಳೆಯಿಂದ ಅನಾಹುತಕ್ಕೆ ಈಡಾದ ಪ್ರದೇಶಗಳಲ್ಲಿ ಮಾತ್ರ ಸುರಕ್ಷತಾ ಕಾಮಗಾರಿಗೆ ಒತ್ತು ನೀಡಿ, ಮುಂದೆ ಮಳೆ ಅನಾಹುತಕ್ಕೆ ಒಳಗಾಗುವ ಆತಂಕ ಎದುರಿಸುತ್ತಿರುವ ಪ್ರದೇಶಗಳಲ್ಲಿ ಕಾಮಗಾರಿ ನಡೆಸಲು ಪಾಲಿಕೆ ನಿರ್ಲಕ್ಷ್ಯ ವಹಿಸಿರುವ ಕಾರಣ, ಈ ಬಾರಿ ಹಲವು ಬಡಾವಣೆಗಳು ಮತ್ತೆ ಜಲಾವೃತಬಾಗುವ ಭೀತಿ ಎದುರಿಸುತ್ತಿವೆ.

Advertisement

ಮಳೆಯಿಂದ ಅನಾಹುತ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಪಾಲಿಕೆ, ಆ ಭಾಗದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ಗಮನಹರಿಸಿದೆ. ಆದರೆ, ಸಮಗ್ರ ಬೆಂಗಳೂರಿನ ಸಮಸ್ಯೆ ಪರಿಹಾರಕ್ಕಾಗಿ ಕ್ರಿಯಾಯೋಜನೆ ರೂಪಿಸದ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಗೆ ಹೊಸ ಬಡಾವಣೆಗಳು ಸೇರ್ಪಡೆಗೊಳ್ಳುತ್ತಲೇ ಇವೆ.

ಕಳೆದ ಎರಡು ವರ್ಷಗಳಲ್ಲಿ ನಗರದಲ್ಲಿ ಸುರಿದ ದಾಖಲೆಯ ಮಳೆಗೆ ಸಾವು-ನೋವು ಸಂಭವಿಸಿದ್ದು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹಾನಿಗೀಡಾಗಿದೆ. ಅದರೂ ಈ ಬಾರಿ ಮಳೆಗಾಲಕ್ಕೆ ಬಿಬಿಎಂಪಿ ಸಂಪೂರ್ಣ ಸಜ್ಜಾಗಿಲ್ಲ. ಹೀಗಾಗಿ, ಈ ಬಾರಿಯೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸುವ ಆತಂಕ ಸೃಷ್ಟಿಯಾಗಿದೆ.

ಕಳೆದ ಮೂರು ವರ್ಷಗಳಲ್ಲಿ 365 ಪ್ರದೇಶಗಳು ಮಳೆ ಅನಾಹುತಕ್ಕೆ ಒಳಗಾಗಿದ್ದು, ಆ ಭಾಗಗಳಲ್ಲಿ ಅನಾಹುತ ಸಂಭವಿಸಿದಂತೆ ಪಾಲಿಕೆಯಿಂದ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಂಡ ಅಧಿಕಾರಿಗಳು, ಮತ್ತೆ ಅನಾಹುತವಾಗದು ಎಂದು ಭರವಸೆ ನೀಡಿದರೂ, ಪ್ರತಿ ಮಳೆಗಾಲದಲ್ಲೂ ಆ ಭಾಗಗಳಲ್ಲಿ ಸಮಸ್ಯೆ ಮರುಕಳಿಸುತ್ತಿದೆ. ಈ ನಡುವೆ ಶೇಷಾದ್ರಿಪುರ ಕಿನೋ ಚಿತ್ರಮಂದಿರದ ರೈಲ್ವೆ ಸೇತುವೆ ಕೆಳಭಾಗದಲ್ಲಿ ಮಳೆನೀರು ನಿಂತು ಬಸ್‌ಗಳು ಮುಳುಗಿದ ನಡೆದಿದ್ದ ಹಿನ್ನೆಲೆಯಲ್ಲಿ ಮಳೆ ನೀರು ಹರಿವಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. 

ಇದರೊಂದಿಗೆ ಎಚ್‌ಎಸ್‌ಆರ್‌ ಬಡಾವಣೆ, ಮಡಿವಾಳ, ಅರಕೆರೆ, ಅವನಿ ಶೃಂಗೇರಿ ನಗರ, ಸರಸ್ಪತಿ ನಗರ, ಕೆ.ಆರ್‌.ಪುರ, ಕುರುಬರಹಳ್ಳಿ ಸೇರಿ ಹಲವೆಡೆ ಕಾಮಗಾರಿ ನಡೆಸಿದ್ದರೂ, ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಂಡಿಲ್ಲ ಎಂಬುದು ಆಯಾ ಭಾಗದ ಪಾಲಿಕೆ ಸದಸ್ಯರ ಆರೋಪ.

Advertisement

ಹೂಳು ತೆಗೆಯುವ ಶಾಸ್ತ್ರ: ಪ್ರತಿ ವರ್ಷ ಮಳೆಗಾಲಕ್ಕೆ ಮುನ್ನ ರಾಜಕಾಲುವೆಗಳಲ್ಲಿನ ಹೂಳು ತೆಗೆಯುವ ಶಾಸ್ತ್ರ ನಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 155 ಕಿ.ಮೀ ಉದ್ದದ ಕಾಲುವೆಯಲ್ಲಿ ಹೂಳು ತೆಗೆಯಲಾಗಿದೆ. ಉಳಿದ ಕಾಲುವೆಯಲ್ಲಿ ಕಾಮಗಾರಿ ಬಾಕಿಯಿದ್ದು, ಮಳೆ ಬಂದರೆ ನೀರು ಉಕ್ಕಿ, ಅನಾಹುತ ಸಂಭವಿಸುವ ಸಾಧ್ಯತೆಯಿದೆ. ರಸ್ತೆ ಬದಿಯ ಕಿರು ಚರಂಡಿಗಳ ಸ್ವತ್ಛತೆಗೆ 63 ತಂಡಗಳನ್ನು ನಿಯೋಜಿಸಿ, ಪ್ರತಿ ತಂಡಕ್ಕೆ ಮಾಸಿಕ 1 ಲಕ್ಷ ರೂ. ಪಾವತಿಸಿದರೂ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವುದು ವಿಪರ್ಯಾಸದ ಸಂಗತಿ.

ನೀರಿನಿಂದ ಭರ್ತಿಯಾಗುವ ಅಂಡರ್‌ಪಾಸ್‌ಗಳು: ಮೆಜೆಸ್ಟಿಕ್‌ ಬಳಿಯ ಓಕಳಿಪುರ ಜಂಕ್ಷನ್‌ನ ಹೊಸ ಅಂಡರ್‌ಪಾಸ್‌ ಸೇರಿ ಹಲವು ಅಂಡರ್‌ಪಾಸ್‌ಗಳಲ್ಲಿ ಮಳೆ ವೇಳೆ ನೀರು ನಿಲ್ಲುತ್ತದೆ. ಅವೈಜ್ಞಾನಿಕ ನಿರ್ಮಾಣ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದು, ಮೇಖೀ ವೃತ್ತ, ಶೇಷಾದ್ರಿಪುರ ರೈಲ್ವೆ ಕೆಳಸೇತುವೆ, ಕಾವೇರಿ ಚಿತ್ರಮಂದಿರ, ಕೆ.ಆರ್‌.ವೃತ್ತ, ಸ್ಯಾಂಕಿ ರಸ್ತೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ. ಆದರೂ, ಶಾಶ್ವತ ಪರಿಹಾರ ಕಲ್ಪಿಸಲು ಪಾಲಿಕೆ ಮುಂದಾಗಿಲ್ಲ.

ಬಡಾವಣೆಗಳಲ್ಲಿ ಭಯದ ವಾತಾವರಣ: 2016ರಲ್ಲಿ ಮಳೆಯಿಂದ ತೀವ್ರ ಸಮಸ್ಯೆ ಅನುಭವಿಸಿದ್ದ ಅವನಿ ಶೃಂಗೇರಿನಗರ, ಡಿಯೋ ಎನ್‌ಕ್ಲೇವ್‌, ಬಿಟಿಎಂ ಬಡಾವಣೆ, ಮಡಿವಾಳ, ಬೇಗೂರಿನ ವಿಶ್ವಪ್ರಿಯ ಬಡಾವಣೆ, ಎಚ್‌ಎಸ್‌.ಆರ್‌ ಬಡಾವಣೆಗಳಲ್ಲಿ ರಾಜಕಾಲುವೆ ಕೆಲಸ ಪೂರ್ಣಗೊಳಿಸಲಾಗಿದೆ. ಆದರೆ, ಮಹಾಲಕ್ಷ್ಮೀಪುರ, ಕುರುಬರಹಳ್ಳಿ, ಕೆ.ಆರ್‌.ಪುರ, ನೇತ್ರಾವತಿ ಬಡಾವಣೆ, ಪೈ ಬಡಾವಣೆ, ಮುನೇಶ್ವರ ನಗರ, ಜೆ.ಸಿ.ರಸ್ತೆಯ ಕುಂಬಾರಗುಂಡಿ, ಕಾವೇರಿಪುರ, ಈಜಿಪುರ, ವಿವೇಕನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ  ಸಮಸ್ಯೆಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ.

ಸಮಗ್ರ ಕ್ರಿಯಾಯೋಜನೆ ರೂಪಿಸಿಲ್ಲ: ಮಳೆಗಾಲಕ್ಕೆ ಮೊದಲೇ ಮಳೆ ಅನಾಹುತ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಕೆ ಕೈಗೊಳ್ಳಬೇಕು. ಆದರೆ, ಮಳೆಯಿಂದ ಅನಾಹುತ ಸಂಭವಿಸಿದ ಬಳಿಕ ಆ ಭಾಗಗಳಲ್ಲಿ ಪಾಲಿಕೆ ಕಾಮಗಾರಿ ಆರಂಭಿಸುತ್ತಿದೆ. ಅದರಂತೆ ದಕ್ಷಿಣ ಭಾಗದಲ್ಲಿ 2016ರಲ್ಲಿ ಪ್ರವಾಹ ಉಂಟಾಗಿ ಜನರು ತೊಂದರೆ ಅನುಭವಿಸಿದಾಗ ಪರಿಹಾರ ಕ್ರಮ ಕೈಗೊಳ್ಳಲಾಗಿತ್ತು.

ನಂತರ 2017ರಲ್ಲಿ ಉತ್ತರ ಭಾಗದಲ್ಲಿ ಪ್ರವಾಹ ಉಂಟಾಗಿ 10 ಜನ ಪ್ರಾಣ ಕಳೆದುಕೊಂಡಾಗ ಆ ಭಾಗದಲ್ಲಿ ಕಾಮಗಾರಿ ಆರಂಭಿಸಿತ್ತು. ಆದರೆ, ನಗರದಲ್ಲಿ ಮಳೆಯಿಂದ ಸಮಸ್ಯೆಗೆ ಈಡಾಗುವ ಪ್ರದೇಶಗಳ ಮಾಹಿತಿಯನ್ನು ಮೊದಲೇ ಸಂಗ್ರಹಿಸಿ ಪಡೆದು ಪರಿಹಾರ ಕ್ರಮಗಳಿಗೆ ಮುಂದಾಗಿಲ್ಲ.

369 ಕಿ.ಮೀ ಕಾಲುವೆ ನಿರ್ಮಾಣ: ಪಾಲಿಕೆಯ ವ್ಯಾಪಿಯಲ್ಲಿ 842 ಕಿ.ಮೀ ಉದ್ದದ ರಾಜಕಾಲುವೆ ಮಾರ್ಗವಿದ್ದು, ಆ ಪೈಕಿ 369 ಕಿ.ಮೀ ಉದ್ದದ ಕಾಲುವೆಯನ್ನು ಮಾತ್ರ ಅಭಿವೃದ್ಧಿಪಡಿಸಿ, ಕಾಂಕ್ರಿಟ್‌ ತಡೆಗೋಡೆ ನಿರ್ಮಿಸಲಾಗಿದೆ. ಇನ್ನು 473 ಕಿ.ಮೀ ರಾಜಕಾಲುವೆ ಅಭಿವೃದ್ಧಿ ಆಗಿಲ್ಲ. 2016-17 ಮತ್ತು 2017-18ರಲ್ಲಿ 1,100 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದ 192 ಕಿ.ಮೀ ಕಾಲುವೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆಗಾಲ ಆರಂಭವಾದರೂ ಪೂರ್ಣಗೊಂಡಿಲ್ಲ.

ಸಮಸ್ಯೆಗೆ ಕಾರಣವೇನು?: ವಿವಿಧ ಉದ್ದೇಶಗಳಿಗಾಗಿ ನಗರದ ಸಾವಿರಾರು ಭಾಗಗಳಲ್ಲಿ ರಾಜಕಾಲುವೆಗಳ ಪಥ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಮಳೆ ನೀರು ದಿಕ್ಕಾಪಾಲಾಗಿ ಹರಿದು ಅನಾಹುತ ಸೃಷ್ಟಿಸುತ್ತಿದೆ. 2016ರಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡು ಆರಂಭ ಶೂರತ್ವ ಮೆರೆದಿದ್ದ ಪಾಲಿಕೆ, ಪ್ರಭಾವಿಗಳ ಕಟ್ಟಡಗಳು ಒತ್ತುವರಿಸ್ಥಳದಲ್ಲಿ ನಿರ್ಮಾಣವಾಗಿರುವುದು ತಿಳಿದ ಕೂಡಲೇ ಒತ್ತುವರಿ ತೆರವು ಕಾರ್ಯಾಚರಣೆ ಕೈಬಿಟ್ಟಿತ್ತು. ಹಲವಾರು ಭಾಗಗಳಲ್ಲಿ ಒತ್ತುವರಿ ತೆರವುಗೊಳಿಸದ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿದಿಲ್ಲ.

ತುರ್ತು ಕಾಮಗಾರಿ ಎಲ್ಲಿ ಆಗಬೇಕು?: ಹೊಸಕೆರೆಹಳ್ಳಿಯ ಮುನೇಶ್ವರನಗರ, ಎಚ್‌ಎಸ್‌ಆರ್‌ ಬಡಾವಣೆಯ 4, 6 ಮತ್ತು 7ನೇ ಸೆಕ್ಟರ್‌, ಕೋರಮಂಗಲ 4ನೇ ಟಿ ಬ್ಲಾಕ್‌, ಉದಯನಗರ, ಬಾಣಸವಾಡಿ, ಕೆ.ಆರ್‌.ಪುರ, ಅಗ್ರಹಾರ ದಾಸರಹಳ್ಳಿ, ಬಿಳೇಕಹಳ್ಳಿ, ಕೆಎಸ್‌ಆರ್‌ಟಿಸಿ ಡಿಪೋ, ವಿಶ್ವಪ್ರಿಯ ಬಡಾವಣೆ, ಗಾರೆಬಾವಿಪಾಳ್ಯ, ಸರ್ವಜ್ಞನಗರ, ದೇವಸಂದ್ರ, ಬಿಟಿಎಂ ಬಡಾವಣೆ ಹೀಗೆ ನಗರದ ಹಲವಾರು ಪ್ರಮುಖ ಭಾಗಗಳಲ್ಲಿ ತುರ್ತು ಕಾಮಗಾರಿ ಆಗಬೇಕಿದೆ.

ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪ್ರವಾಹ ಸಂಭವಿಸಿದ 365 ಪ್ರದೇಶಗಳಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗಿದೆ.
-ಬೆಟ್ಟೇಗೌಡ, ಬೃಹತ್‌ ಮಳೆನೀರು ಕಾಲುವೆ ವಿಭಾಗದ ಮುಖ್ಯ ಇಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next