Advertisement

ರೈಲ್ವೆ ಗೇಟ್‌ ಸಮಸ್ಯೆ ಪರಿಹಾರಕ್ಕೆ ಪರದಾಟ

09:45 AM Jun 22, 2018 | |

ದಾವಣಗೆರೆ: ನಗರದ ಅಶೋಕ ರಸ್ತೆಯ ರೈಲ್ವೆ ಗೇಟ್‌ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳುವುದು ಒಂದು ಯಕ್ಷ ಪ್ರಶ್ನೆ ಎಂಬಂತೆ ಇಂಜಿನಿಯರ್‌ ಗಳು, ಅಧಿಕಾರಿಗಳು ಧೋರಣೆ ಹೊಂದಿದ್ದಾರೆ.

Advertisement

ಗುರುವಾರ, ರೈಲ್ವೆ ಗೇಟ್‌ನಿಂದ ಸಾರ್ವಜನಿಕರಿಗೆ ಪ್ರತಿದಿನ ಉಂಟಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಬ್ರಿಡ್ಜ್ ನಿರ್ಮಾಣ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದಾಗ, ರೈಲು ಮಾರ್ಗಕ್ಕೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸುವ ಅಥವಾ ರೈಲು ಮಾರ್ಗದ ಇಕ್ಕೆಲಗಳಲ್ಲಿ ಸಮನಾಂತರ ರಸ್ತೆ ನಿರ್ಮಾಣ ಮಾಡಿ ವಾಹನ ಸಂಚಾರದ ದಿಕ್ಕು ಬದಲಿಸುವ ಕುರಿತು ಸುದೀರ್ಘ‌ ಸಮಯ ಚರ್ಚೆ ನಡೆದರೂ ಸದ್ಯಕ್ಕೆ ಯಾವುದೇ ಪರಿಹಾರ ಸಿಕ್ಕಲ್ಲ ಎಂಬ ಸ್ಥಿತಿಗೆ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಎಸ್‌.ಎ. ರವೀಂದ್ರನಾಥ್‌, ಇಂದು ತಂತ್ರಜ್ಞಾನ ಅತಿ ವೇಗವಾಗಿ ಬೆಳೆಯುತ್ತಿದ್ದರೂ ಒಂದು ಬ್ರಿಡ್ಜ್ ನಿರ್ಮಾಣ ಮಾಡುವುದು ಕ್ಲಿಷ್ಟ ಎಂಬಂತೆ ಅಧಿಕಾರಿಗಳು ವರ್ತಿಸುವುದರ ಕುರಿತು ಬೇಸರ ವ್ಯಕ್ತಪಡಿಸಿ, ಮೌನಕ್ಕೆ ಶರಣಾದರು. ಸಭೆ ಆರಂಭದಲ್ಲಿ ಬ್ರಿಡ್ಜ್ ನಿರ್ಮಾಣದ ನೀಲ ನಕಾಶೆ ಕುರಿತು ಚರ್ಚಿಸಲಾಯಿತು.

ರೈಲ್ವೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು, ಜಿಲ್ಲಾಧಿಕಾರಿ, ಈ ನಕಾಶೆ ಆಧಾರದಲ್ಲಿ ಬ್ರಿಡ್ಜ್ ನಿರ್ಮಿಸಿದರೆ ಎಪಿಎಂಸಿಗೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆ ವಾಹನ ಸಂಚಾರ ಬಂದ್‌ ಆಗಲಿದೆ. ಜೊತೆಗೆ ಹಳಿ ಆ ಕಡೆ, ಈ ಕಡೆ ಇರುವ ಅಂಗಡಿಗಳಿಗೆ ಮಾರ್ಗ ಇಲ್ಲವಾಗುತ್ತದೆ. ಹಾಲಿ ಇರುವ ರಸ್ತೆ ಕಿರಿದಾಗಿದ್ದು, ಇದರ ಆಧಾರದಲ್ಲಿಯೇ ಬ್ರಿಡ್ಜ್ ನಿರ್ಮಾಣ ಮಾಡುವುದು ಅಸಾಧ್ಯ ಎಂದರು.

Advertisement

ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ರವೀಂದ್ರನಾಥ್‌, ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಬ್ರಿಡ್ಜ್ ನಿರ್ಮಾಣ ಮಾಡಿದ್ದಾರೆ.
ನೀವು ಮಾತ್ರ ಆಗಲ್ಲ ಎಂದು ಹೇಳಿದರೆ ಹೇಗೆ ಎಂದರು. ಇದಕ್ಕೆ ದನಿಗೂಡಿಸಿದ ಸಂಸದ ಸಿದ್ದೇಶ್ವರ್‌, ಇವರು ಹೊಸ ತಂತ್ರಜ್ಞಾನ ಕುರಿತು ಮಾತನಾಡುವುದಿಲ್ಲ. ಇರುವ ಒಂದೇ ನಕಾಶೆ ಹಿಡಿದು ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೊತೆಗೆ ಈ ಬ್ರಿಡ್ಜ್ ನಿರ್ಮಾಣ ಇಂದಿನದಲ್ಲ. ಈ ಹಿಂದೆ ಶಾಮನೂರು ಶಿವಶಂಕರಪ್ಪನವರು ಸಂಸದರಾಗಿದ್ದಾಗಲೇ ಯೋಜನೆ ರೂಪುಗೊಂಡಿದ್ದು, ಬ್ರಿಡ್ಜ್ ನಿರ್ಮಾಣಕ್ಕೆ ಚೇಂಬರ್‌ ಆಫ್‌ ಕಾಮರ್ 23 ಲಕ್ಷ ಹಣ ಸಹ ನೀಡಿತ್ತು. ಆದರೆ, ಆಗ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ನೀಡದೇ ಇದ್ದುದಕ್ಕೆ ಬ್ರಿಡ್ಜ್ ನಿರ್ಮಾಣ ಆಗಲಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ರಮೇಶ್‌, ಈಗ ಬ್ರಿಡ್ಜ್ ನಿರ್ಮಾಣ ಮಾಡಲು ಬರಲ್ಲ ಎಂದಲ್ಲ. ಆದರೆ, ಈಗಿರುವ ನಕಾಶೆ ಪ್ರಕಾರ ಮಾಡುವುದಾದರೆ ಸರ್ವೀಸ್‌ ರಸ್ತೆ ಕೊಡಲಾಗುವುದಿಲ್ಲ. ಒಂದು ವೇಳೆ ಸರ್ವೀಸ್‌ ರಸ್ತೆ ಬೇಕಾದಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಆಗ ರವೀಂದ್ರನಾಥ, ಅನೇಕರು ಯಾವುದೇ ಸೆಟ್‌ ಬ್ಯಾಕ್‌ ಬಿಡದೆ ಕಟ್ಟಡ ಕಟ್ಟಿಕೊಂಡಿದ್ದಾರೆ. ಈ ಕುರಿತು ಪರಿಶೀಲಿಸಿ, ಒಂದು ವೇಳೆ ಜಾಗ ಸಿಗುತ್ತೆ ಎಂದಾದರೆ ಹಾಲಿ ಇರುವ
ನಕಾಶೆಯಂತೆ ಬ್ರಿಡ್ಜ್ ನಿರ್ಮಿಸಿ ಎಂದರು. ಇದಕ್ಕೆ ಜಿಲ್ಲಾಧಿಕಾರಿ ಸಮ್ಮತಿಸಿದರು.

ಮಾಯಕೊಂಡ ಶಾಸಕ ಪ್ರೊ| ಎನ್‌. ಲಿಂಗಣ್ಣ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಇತರೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next