Advertisement

ಸರ್ಕಾರದ ಗಡುವಿನೊಳಗೇ ಹಳಿ ಅಣಿ

11:58 AM Mar 11, 2017 | Team Udayavani |

ಬೆಂಗಳೂರು: ನಮ್ಮ ಮೆಟ್ರೋ ಉತ್ತರ-ದಕ್ಷಿಣ ಕಾರಿಡಾರ್‌ ಸಂಪೂರ್ಣ ವಾಣಿಜ್ಯ ಸಂಚಾರಕ್ಕೆ ಸರ್ಕಾರ ಏಪ್ರಿಲ್‌ 15ರ ಗಡುವು ವಿಧಿಸಿದೆ. ಈ ಅವಧಿಯೊಳಗೇ ಮಾರ್ಗ ಪೂರ್ಣಗೊಳ್ಳುವುದೇ ಎಂಬ ಪ್ರಶ್ನೆಗಳೂ ಉದ್ಭವವಾಗಿದೆ. ಆದರೆ, ಗಡುವು ಮೀರದೇ ಖಂಡಿತಾ ಮೆಟ್ರೋ ರೈಲನ್ನು ಓಡಿಸಿಯೇ ಸಿದ್ಧ ಎನ್ನುತ್ತಿದೆ ಬಿಎಂಆರ್‌ಸಿಎಲ್‌ನ ತಾಂತ್ರಿಕ ವಿಭಾಗದ ಮೂಲಗಳು. 

Advertisement

“ಈಗಾಗಲೇ ಪೂರ್ವ-ಪಶ್ಚಿಮ ಕಾರಿಡಾರ್‌ನ ಸುರಂಗ ಮಾರ್ಗದಲ್ಲಿ ಮೆಟ್ರೋ ಓಡಿಸಿದ ಅನುಭವವನ್ನೂ ಹೊಂದಿದ್ದೇವೆ. ಸದ್ಯ ಈ ಮಾರ್ಗಕ್ಕೆ ಪೂರ್ವಸಿದ್ಧತೆಗಳನ್ನೂ ಮಾಡಿಕೊಂಡಿದ್ದೇವೆ. ಇದರ ಆಧಾರದ ಮೇಲೆ ಹೇಳುವುದಾದರೆ ಏಪ್ರಿಲ್‌ ಎರಡನೇ ವಾರದೊಳಗೆ ಸಂಪಿಗೆ ರಸ್ತೆಯ  ಮಂತ್ರಿಸ್ಕ್ವೇರ್‌ನಿಂದ ಯಲಚೇನಹಳ್ಳಿ ನಡುವೆ ಪರೀಕ್ಷಾರ್ಥ ಸಂಚಾರವನ್ನು ಪೂರ್ಣಗೊಳಿಸಿ, ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿಗೆ ಮನವಿ ಮಾಡಲಾಗುವುದು. ಏಪ್ರಿಲ್‌ನಲ್ಲಿ ಈ ಮಾರ್ಗವನ್ನು ಸಾರ್ವಜನಿಕ ಸೇವೆಗೆ ಅಣಿಗೊಳಿಸಲಾಗುವುದು,” ಎಂದು ಬಿಎಂಆರ್‌ಸಿ ತಾಂತ್ರಿಕ ತಜ್ಞರು ತಿಳಿಸಿದ್ದಾರೆ. 

ಸುರಂಗ ಮಾರ್ಗದಲ್ಲಿ ತಿರುವುಗಳಲ್ಲಿ ರೈಲು ಹಳಿತಪ್ಪದಿರಲು “ಡಿರೈಲ್‌ಮೆಂಟ್‌ ಕೊ-ಎಫಿಶಿಯಂಟ್‌ ಟೆಸ್ಟ್‌’ ಅನ್ನು ಈಗಾಗಲೇ ಸುರಂಗ-2ರಲ್ಲಿ (ಎಂ.ಜಿ. ರಸ್ತೆ-ಮಾಗಡಿ ರಸ್ತೆ ನಡುವೆ) ನಡೆಸಲಾಗಿದೆ. ಹಾಗಾಗಿ, ಮತ್ತೆ ಸುರಂಗ-1 (ಮಂತ್ರಿಸ್ಕ್ವೇರ್‌-ನ್ಯಾಷನಲ್‌ ಕಾಲೇಜು ಮಧ್ಯೆ)ರಲ್ಲಿ ಪರೀಕ್ಷೆ ನಡೆಸಬೇಕಿಲ್ಲ. ಇದರಿಂದ ಕನಿಷ್ಠ ಹತ್ತು ದಿನ ಉಳಿತಾಯವಾಗುತ್ತದೆ. ಸದ್ಯ 8 ಕಿ.ಮೀ.ನ ಈ ಜೋಡಿ ಮಾರ್ಗದಲ್ಲಿ 10ರಿಂದ 12 ತಿರುವುಗಳು ಬರುತ್ತವೆ. 

ಇನ್ನು ಸುರಂಗ ಮಾರ್ಗ ಮಾತ್ರ ಪರೀಕ್ಷಾರ್ಥ ಸಂಚಾರ ನಡೆಸಬೇಕಾಗಿರುವುದರಿಂದ ದಿನದ 24 ಗಂಟೆ ಇಲ್ಲಿ ಪರೀಕ್ಷೆ ನಡೆಸಲು ಅವಕಾಶ ಇದೆ. ಈ ಎರಡು ಪ್ರಮುಖ ಕಾರಣಗಳಿಂದ ಅನಾಯಾಸವಾಗಿ ಗಡುವಿನೊಳಗೆ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಬಹುದು. ಈ ಅವಧಿಯಲ್ಲೇ ಬಾಕಿ ಉಳಿದ ನಿಲ್ದಾಣಗಳ ಸಿವಿಲ್‌ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಬಿಎಂಆರ್‌ಸಿ ತಾಂತ್ರಿಕ ವಿಭಾಗದ ಎಂಜಿನಿಯರೊಬ್ಬರು ಮಾಹಿತಿ ನೀಡಿದ್ದಾರೆ. 

ಸಾಮಾನ್ಯವಾಗಿ ಎತ್ತರಿಸಿದ ಮಾರ್ಗಗಳಲ್ಲಿ 45 ದಿನಗಳು ಪರೀಕ್ಷಾರ್ಥ ಸಂಚಾರ ನಡೆಯುತ್ತದೆ. ಯಾಕೆಂದರೆ, ರಾತ್ರಿ 10.30ರಿಂದ ಬೆಳಗಿನಜಾವ 6ರವರೆಗೆ ಮಾತ್ರ ಪರೀಕ್ಷಾರ್ಥ ಸಂಚಾರಕ್ಕೆ ಅವಕಾಶ ಸಿಗುತ್ತಿತ್ತು. ಉಳಿದ ಅವಧಿಯಲ್ಲಿ ವಾಣಿಜ್ಯ ಸಂಚಾರ ಸೇವೆಗೆ ಬಿಡಬೇಕಾಗುತ್ತದೆ. ಆದರೆ, ಸುರಂಗ ಮಾರ್ಗಗಳಲ್ಲಿ ಈ ಅಡತಡೆಗಳಿಲ್ಲ. ಹಾಗಾಗಿ, ನಿತ್ಯ 12ರಿಂದ 16 ತಾಸು ಪ್ರಯೋಗ ನಡೆಸಬಹುದು. ಒಟ್ಟಾರೆ ಪ್ರತಿ ಸುರಂಗ ಮಾರ್ಗದಲ್ಲಿ 150ರಿಂದ 200 ಗಂಟೆಗಳು ಪ್ರಾಯೋಗಿಕ ಸಂಚಾರ ನಡೆಸಿದರೆ ಸಾಕು ಎನ್ನುತ್ತಾರೆ ತಾಂತ್ರಿಕ ಸಿಬ್ಬಂದಿ. 

Advertisement

ಈ ಹಿಂದೆ ಎಂ.ಜಿ.ರಸ್ತೆ-ಮಾಗಡಿ ರಸ್ತೆ ನಡುವಿನ ಸುರಂಗ ಮಾರ್ಗಗಳಲ್ಲೂ ಕೂಡ ಇದೇ ತಂತ್ರ ಅನುಸರಿಸಲಾಗಿತ್ತು. ಆದರೆ, ಅದು ದಕ್ಷಿಣ ಭಾರತದ ಮೊದಲ ಸುರಂಗ ಮಾರ್ಗವಾಗಿದ್ದರಿಂದ ನಮಗೂ ಅದು ಹೊಸದು ಹಾಗೂ ರೈಲ್ವೆ ಸುರಕ್ಷತಾ ಆಯುಕ್ತರು ಕೂಡ ಕೂಲಂಕಷ ಪರೀಕ್ಷೆ ನಡೆಸಿದರು. ಇದರಿಂದ ಅಲ್ಲಿ ಕೊಂಚ ವಿಳಂಬವಾಗಿತ್ತು. ಈಗ ಅದು ಪುನರಾವರ್ತನೆ ಆಗದು ಎಂದು ತಜ್ಞರು ತಿಳಿಸುತ್ತಾರೆ. 

ನಾಗಸಂದ್ರ-ಮಂತ್ರಿಸ್ಕ್ವೇರ್‌ ವರೆಗೆ 10ದಿನ ಸಂಚಾರವಿಲ್ಲ: ಸಂಪಿಗೆರಸ್ತೆ ಮಂತ್ರಿಸ್ಕ್ವೇರ್‌ ನಿಲ್ದಾಣದಿಂದ ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಸಂಬಂಧ ಕೆಲವು ಸಾಂಖೀಕ ಮತ್ತು ಸಿಗ್ನಲಿಂಗ್‌ ವ್ಯವಸ್ಥೆಯ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್‌ 13ರಿಂದ 22ರವರೆಗೆ ನಾಗಸಂದ್ರ-ಮಂತ್ರಿಸ್ಕ್ವೇರ್‌ ಮಾರ್ಗದ ನಡುವಿನ ಸಂಚಾರ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.  ಮಂತ್ರಿಸ್ಕ್ವೇರ್‌, ಶ್ರೀರಾಮಪುರ, ಕುವೆಂಪು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ಇರದು. ಹತ್ತು ದಿನಗಳ ಪರೀಕ್ಷೆ ವೇಳೆ ಮೆಟ್ರೋ ಸೇವೆ ನಾಗಸಂದ್ರದಿಂದ ರಾಜಾಜಿನಗರ ಮೆಟ್ರೋ ನಿಲ್ದಾಣದವರೆಗೆ ಮಾತ್ರ ಇರಲಿದೆ. 

ಬಿಎಂಟಿಸಿ ಸಂಪರ್ಕ ಸೇವೆ: ಈ ಅವಧಿಯಲ್ಲಿ ಬಿಎಂಟಿಸಿಯು ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ಹೊಸಹಳ್ಳಿಯ ಬಾಲಗಂಗಾಧರನಾಥ ಸ್ವಾಮೀಜಿ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಬಸ್‌ ಸೇವೆ ಕಲ್ಪಿಸಲಿದೆ. ಬಸ್‌ ಮಾರ್ಗ ಸಂಖ್ಯೆ 401 ಮತ್ತು ಎಂಆರ್‌ 16 ಬಸ್‌ಗಳು ಪ್ರತಿ 5 ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆ ಮಾಡಲಿವೆ. ಎಂಆರ್‌ 16 ಬಸ್‌ ಬೆಳಿಗ್ಗೆ 8ರಿಂದ 10ರವರೆಗೆ ಪ್ರತಿ 5 ನಿಮಿಷಗಳ ಅಂತರದಲ್ಲಿ ಹಾಗೂ ಸಂಜೆ 5ರಿಂದ 7ರವರೆಗೆ 10 ನಿಮಿಷಗಳ ಅಂತರದಲ್ಲಿ ಸೇವೆ ಇರಲಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.  

ಮೆಟ್ರೋ ಸಂಚಾರ ಕೋರಿದ್ದ ಅರ್ಜಿ ವಜಾ
ಬೆಂಗಳೂರು: ಮಲ್ಲೇಶ್ವರದ ಮಂತ್ರಿಮಾಲ್‌- ಮೆಜೆಸ್ಟಿಕ್‌ ಮೆಟ್ರೋ ರೈಲು ಮಾರ್ಗದಲ್ಲಿ ಸಂಚಾರ ಆರಂಭಿಸಲು ರಾಜ್ಯ ಸರ್ಕಾರ ಮತ್ತು ನಮ್ಮ ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನಾ ವೆಚ್ಚ ಉಳಿಸುವ ಕಾರಣಕ್ಕಾಗಿ ಮಲ್ಲೇಶ್ವರದ ಮಂತ್ರಿಮಾಲ್‌-ಮೆಜೆಸ್ಟಿಕ್‌ ಮೆಟ್ರೋ ರೈಲು ಮಾರ್ಗದ ಸಂಚಾರವನ್ನು ಸರ್ಕಾರ ಹಾಗೂ ಬಿಎಂಆರ್‌ಸಿಎಲ್‌ ಆರಂಭಿಸುತ್ತಿಲ್ಲ ಎಂದು ಆರೋಪಿಸಿ ವಕೀಲ ಎ.ವಿ.ಅಮರನಾಥ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ್ದರು. 

ವಿಚಾರಣೆ ವೇಳೆ ಅರ್ಜಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಮತ್ತು ನ್ಯಾ.ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠ,  ಮೆಟ್ರೋ ರೈಲು ಸಂಚಾರ ಆರಂಭಿಸಲು ಕೆಲವೊಂದು ತಾಂತ್ರಿಕ ಅಡೆತಡೆಗಳು ಇವೆ ಎಂದಾಗ ಹೈಕೋರ್ಟ್‌ ಪ್ರಕರಣದಲ್ಲಿ ಹೇಗೆ ಮಧ್ಯಪ್ರವೇಶಿಸಲು ಸಾಧ್ಯ ಎಂದು ಅರ್ಜಿದಾರರನ್ನು ಪ್ರಶ್ನಿಸಿದರು. ಇದೇ ವೇಳೆ ಈ ಮಾರ್ಗದಲ್ಲಿ ಶೀಘ್ರವೇ ಸಂಚಾರ ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಪರ ವಕೀಲರು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು.

ಬಾಕಿ ಉಳಿದಿರೋದೇನು?
ನಿಲ್ದಾಣದ ಸಿವಿಲ್‌ ಕಾಮಗಾರಿ, ಸುರಕ್ಷತೆಗೆ ಸಂಬಂಧಿಸಿದ ಅಂತಿಮ ಸಿದ್ಧತೆಗಳು ಮಾತ್ರ ಬಾಕಿ ಇವೆ. ಸಿವಿಲ್‌ ಕಾಮಗಾರಿ ಬಾಕಿ ಇದ್ದರೂ ಸುರಂಗದಲ್ಲಿ ಮೆಟ್ರೋ ರೈಲು ಓಡಿಸಬಹುದು. ಆದರೆ, ಸುರಕ್ಷತಾ ಕ್ರಮಗಳು ಪೂರ್ಣಗೊಳ್ಳದೇ ಮುಂದು ವರಿಯುವಂತಿಲ್ಲ. ಹಾಗಾಗಿ, ಅದರ ಅನುಮತಿಗೆ ಕಾಯುತ್ತಿದ್ದೇವೆ ಎಂದು ತಾಂತ್ರಿಕ ತಜ್ಞರ ತಂಡ ತಿಳಿಸುತ್ತದೆ. 

ಏಪ್ರಿಲ್‌ ಒಳಗೆ ಮಾರ್ಗ ಸಿದ್ಧವಾಗಲಿದೆ. ಈ ನಿಟ್ಟಿನಲ್ಲಿ ಹಗಲು-ರಾತ್ರಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸುರಂಗ ಮಾರ್ಗದಲ್ಲಿ ರೈಲು ಓಡಿಸಿದ ಅನುಭವ ನಮಗಿದೆ. ಹಾಗಾಗಿ, ಸವಾಲುಗಳಿದ್ದರೂ ಕಷ್ಟವೇನಿಲ್ಲ. 
-ಪ್ರದೀಪ್‌ಸಿಂಗ್‌ ಖರೋಲಾ, ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ 

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next