ಬೆಂಗಳೂರು: ಭಾರತೀಯ ಸೈನಿಕರು ರೇಡಿಯೋ ಮೂಲಕ ನಡೆಸುವ ಸಂವಹನವನ್ನು ಶತ್ರುಗಳು ಹ್ಯಾಕ್ ಮಾಡಲು ಸಾಧ್ಯವಾಗದಂತಹ ಅತ್ಯಾಧುನಿಕ ರೇಡಿಯೋವನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅಭಿವೃದ್ಧಿ ಪಡಿಸಿದೆ.
“ಸ್ಟಾರ್-ವಿ-ಎಮ್ ಕೆ-3 ರೇಡಿಯೋ’ವನ್ನು ಸದ್ಯದಲ್ಲೇ ಭಾರತೀಯ ಸೇನೆಗೆ ಹಸ್ತಾಂತರಿಸಲು ಬಿಇಎಲ್ ಸಿದ್ಧತೆ ನಡೆಸಿದೆ. ಅನಾಲಾಗ್ ಮಾದರಿಯಲ್ಲಿದ್ದ ರೇಡಿಯೋವನ್ನು ಡಿಜಿಟಲ್ ಮಾದರಿಗೆ ಉನ್ನತೀಕರಿಸಲಾಗಿದೆ. ಬಿಇಎಲ್ ಅಂತಾರಾಷ್ಟ್ರೀಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕಿರಣ್.ವಿ., ಏರ್ ಇಂಡಿಯಾ ಪ್ರದರ್ಶನದಲ್ಲಿ ಗುರುವಾರ ಇದನ್ನು ಅನಾವರಣಗೊಳಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಗಡಿಯಲ್ಲಿ ಕಾರ್ಯ ನಿರ್ವಹಿಸುವ ಸೈನಿಕರ ಸಂವಹನದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಬೇಕಾಗುತ್ತದೆ. ಪ್ರಸ್ತುತ ಇರುವ ರೇಡಿಯೋ ಮೂಲಕ ನಡೆಸುವ ಸಂವಹನವನ್ನು ಶತ್ರುಗಳು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಶತ್ರುಗಳು ಹ್ಯಾಕ್ ಮಾಡುವುದನ್ನು ತಡೆಯುವ ದೃಷ್ಟಿಯಿಂದ ಹೊಸ ರೇಡಿಯೋವನ್ನು ಆವಿಷ್ಕರಿಸಲಾಗಿದೆ ಎಂದು ಹೇಳಿದರು.
ಈಗಿರುವ ರೇಡಿಯೋದಿಂದ 7-8 ಕಿ.ಮೀ.ನಷ್ಟು ದೂರ ಮಾತ್ರ ಸಂವಹನ ನಡೆಸಬಹುದಾಗಿದ್ದು, ಹೊಸದಾಗಿ ಸಿದ್ಧಪಡಿಸಿರುವ ರೇಡಿಯೋದಿಂದ 15 ಕಿ.ಮೀ.ಅಂತರದವರೆಗೆ ಸಂಪರ್ಕಿಸಬಹುದು. ಈ ತಂತ್ರಜ್ಞಾನವು ದೇಶದ ಸೈನಿಕ ವಲಯಕ್ಕೆ ಸಹಕಾರಿಯಾಗುತ್ತದೆ. ಇದು ಡಿಜಿಟಲ್ ತಂತ್ರಜಾnನವನ್ನು ಒಳಗೊಂಡಿದೆ. ಇದರ ಆವಿಷ್ಕಾರಕ್ಕೆ ಬಿಇಎಲ್ ಸಂಸ್ಥೆಯ ಸಿಬ್ಬಂದಿ 18 ತಿಂಗಳು ದುಡಿದಿದ್ದಾರೆ ಎಂದು ತಿಳಿಸಿದರು.
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಮಾದರಿಯ ರೇಡಿಯೋವನ್ನು ಅಭಿವೃದ್ಧಿಪಡಿಸಲಾಗಿದೆ. ವಿದೇಶಗಳಲ್ಲಿರುವ ರೇಡಿಯೋಗಳಿಗೆ ಸರಿಸಾಟಿಯಾಗಿ ಇದು ನಿಲ್ಲಲಿದೆ. ಹೊಸ ಮಾದರಿಯ ರೇಡಿಯೋಗೆ ಶ್ರೀಲಂಕಾ, ಆಫ್ರಿಕಾ, ವಿಯೆಟ್ನಾಂ, ಥಾಯ್ಲೆಂಡ್, ಚೀನಾ, ನೈಜೀರಿಯಾ, ದಕ್ಷಿಣ ಆಫ್ರಿಕಾ, ಗಲ್ಫ್ ರಾಷ್ಟ್ರಗಳಿಂದ ಬೇಡಿಕೆ ಬಂದಿದೆ. ಭಾರತೀಯ ಸೇನೆಗೆ ಸರಬರಾಜು ಮಾಡುವುದರ ಜತೆಗೆ ಮುಂದಿನ ದಿನದಲ್ಲಿ ವಿದೇಶಗಳಿಗೆ ರಫ್ತು ಮಾಡುವ ಉದ್ದೇಶವಿದೆ ಎಂದು ಹೇಳಿದರು.