ಮೈಸೂರು: ತಾಲೂಕಿನ ವರುಣಾ ಹೋಬಳಿಯ ಕುಪ್ಪೇಗಾಲ ಗ್ರಾಮದಲ್ಲಿ 2018-19ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಕಟಾವು ಕಾರ್ಯಕ್ರಮ ನಡೆಯಿತು.
ಸೋಮವಾರ, ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಅಧ್ಯಕ್ಷತೆಯಲ್ಲಿ ಕುಪ್ಪೇಗಾಲ ಗ್ರಾಮದ ಮಹದೇವಪ್ಪ ಅವರ ಜಮೀನಿನಲ್ಲಿ ರಾಗಿ ಬೆಳೆಯನ್ನು ಕಟಾವು ಮಾಡಿ 5180 ಗ್ರಾಂ ಇಳುವರಿ ಹಾಗೂ ಹುಲ್ಲು ದಂಟಿನ ತೂಕ 10,500 ಗ್ರಾಂ ದಾಖಲಾಯಿತು.
ಬೆಳೆ ಕಟಾವು ಪ್ರಯೋಗದ ಮೇಲ್ವಿಚಾರಣೆ ವಹಿಸಿ ಖುದ್ದು ಕಟಾವು ಕಾರ್ಯ ನಡೆಸಿರುವುದು ಜಿಲ್ಲೆಯಲ್ಲಿ ಪ್ರಥಮವಾಗಿದ್ದು , ರೈತರಿಗೆ ಬೆಳೆ ಕಟಾವು ಪ್ರಯೋಗಗಳಿಂದ ಆಗುವ ಪ್ರಯೋಜನ ಗಳನ್ನು ತಿಳಿದುಕೊಳ್ಳುವ ಆಸಕ್ತಿ ಪ್ರಶಂಸ ನೀಯವಾಗಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ತಿಳಿಸಿದರು.
ಬೆಳೆ ಕಟಾವು ಪ್ರಯೋಗಗಳಿಗೆ ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ನೆರವಾಗುವ ರೀತಿ ಕರ್ತವ್ಯ ನಿರ್ವಹಿಸಿ ಅವರಿಗೆ ಹತ್ತಿರವಾಗಬೇಕು. ಜಿಲ್ಲೆಗೆ 2016-17 ನೇ ಸಾಲಿನಲ್ಲಿ 11590 ರೈತರಿಗೆ 776.76 ಲಕ್ಷ ರೂ. ವಿಮಾ ಪರಿಹಾರ ದೊರೆತಿರುವುದು ಸಂತಸದ ಸಂಗತಿ ಎಂದು ಜಿಪಂ ಅಧ್ಯಕ್ಷ ಸಾ.ರಾ ನಂದೀಶ್ ಹೇಳಿದರು.
ಈ ಸಂದರ್ಭದಲ್ಲಿ ಮೈಸೂರಿನ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಮ್ಮ, ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ, ತೋಟ ಗಾರಿಕಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ತಹಶೀಲ್ದಾರ್ ರಮೇಶ್ ಬಾಬು ಮತ್ತಿತರರು ಹಾಜರಿದ್ದರು.