ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಅವರು ಶಾಸಕ, ಸಚಿವನಾದ ಅನಂತರ ಉಡುಪಿಯಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಕೆಲಸ ನಡೆಯುತ್ತಿವೆ. ಆದರೆ ವಿರೋಧಿಗಳು ಇವರ ವಿರುದ್ಧ ಅನಗತ್ಯ ಪ್ರಚಾರ ಮಾಡುತ್ತಿದ್ದಾರೆ.
ಮಾಜಿ ಶಾಸಕ ಕೆ.ರಘುಪತಿ ಭಟ್ ಅವರು “ಪ್ರಮೋದ್ ಸಚಿವರಾದ ಅನಂತರ ಚತುಷ್ಪಥ ರಸ್ತೆಗಳಾಗಿಲ್ಲ’ ಎಂದು ಟೀಕಿಸಿದ್ದು ಆದರೆ ಚತುಷ್ಪಥ ರಸ್ತೆಯೊಂದೇ ಅಭಿವೃದ್ಧಿಯ ಮಾನದಂಡವಲ್ಲ ಎಂದು ಅಖೀಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯ, ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಮೃತ್ ಶೆಣೈ ಹೇಳಿದ್ದಾರೆ.
ಮಾ.24ರಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಬಿಜೆಪಿ ಆಡಳಿತಾವಧಿಯಲ್ಲಿ ಜನರಿಗೆ ನೀರು, ಒಳಚರಂಡಿ, ವಿದ್ಯುತ್ ಮೊದಲಾದ ಮೂಲಸೌಕರ್ಯ ಒದಗಿಸಿ ಕೊಡುವಲ್ಲಿ ರಘುಪತಿ ಭಟ್ ಅವರು ವಿಫಲರಾಗಿದ್ದರು. ಆಗ ಪ್ರಮೋದ್ ಅವರು ಶಾಸಕನಾಗದೆ ಇದ್ದರೂ ಕೂಡ ಮನೆ ಮನೆಗೆ ನೀರು ಕೊಟಿದ್ದರು. ಒಂದು ವೇಳೆ ಬಿಜೆಪಿಯವರು ಜನಪರ ಕೆಲಸ ಮಾಡಿದ್ದರೆ 2013ರಲ್ಲಿ ಹೀನಾಯವಾಗಿ ಸೋಲುತ್ತಿರಲಿಲ್ಲ’ ಎಂದರು.
ಕ್ಷೇತ್ರದ ವಿವಿಧೆಡೆ ಉತ್ತಮವಾದ ದ್ವಿಪಥ ರಸ್ತೆಗಳು, ಫೇವರ್ ಫಿನಿಶ್ ಕಾಮಗಾರಿಗಳಾಗಿವೆ. ಸ್ವಿಮ್ಮಿಂಗ್ ಫೂಲ್, ಉತ್ತಮ ಸ್ಟೇಡಿಯಂ, ಜಿಮ್ಮೇಶಿಯಂಗ ಳಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ರೇಷನ್ ಕಾರ್ಡ್ ವಿತರಿಸಲಾಗಿದೆ. ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಶೆಣೈ ಹೇಳಿದರು.
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮೃತ್ ಶೆಣೈ ಅವರು, “ಮಹಿಳಾ, ಮಕ್ಕಳ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಿರುವುದರಿಂದ ಬಡವರಿಗೂ ಉತ್ತಮ ವೈದ್ಯಕೀಯ ಸೇವೆ ದೊರೆಯುವಂತಾಗಿದೆ. ಇದು ಪ್ರಮೋದ್ ಅವರ ಸಾಧನೆ. ಇದು ಸಂಪೂರ್ಣ ಖಾಸಗೀಕರಣವಲ್ಲ. ಡಾ| ಬಿ.ಆರ್.ಶೆಟ್ಟಿ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಇತರರ ಪ್ರಸ್ತಾವನೆಗಿಂತ ಅವರದ್ದು ಉತ್ತಮವಾಗಿದ್ದ ಕಾರಣ ಅವರಿಗೆ ಅವಕಾಶ ನೀಡಲಾಗಿದೆ. ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಬೇಕಾದರೆ ಅದಕ್ಕೆ ಇಂತಿಷ್ಟೇ ಸಂಖ್ಯೆಯ ಒಳರೋಗಿಗಳು ಇರಬೇಕು ಎಂಬ ನಿಯಮವಿದೆ. ಈ ಕುರಿತು ತಾನು ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರೊಂದಿಗೆ ಚರ್ಚಿ ಸಿದ್ದೆ. ಇಷ್ಟಕ್ಕೂ ರಘುಪತಿ ಭಟ್ ಅವರು ಶಾಸಕರಾಗಿದ್ದಾಗ ಜಿಲ್ಲಾಸ್ಪತ್ರೆಯನ್ನು ಎಷ್ಟು ಉದ್ದಾರ ಮಾಡಿದ್ದರು?’ ಎಂದು ಪ್ರಶ್ನಿಸಿದರು.
ಪಕ್ಷದ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ವಿಶ್ವಾಸ್ ಅಮೀನ್, ನೀರಜ್ ಪಾಟೀಲ್, ವಿಘ್ನೇಶ್ ಕಿಣಿ ಮೊದಲದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹೆಮ್ಮೆಯಿಂದ ಮತಯಾಚನೆ
ಈ ಬಾರಿ ಕಾಯಕರ್ತರು ಪ್ರಮೋದ್ ಅವರಿಗಾಗಿ ಮತದಾರರ ಮನೆ ಬಾಗಿಲಿಗೆ ಹೆಮ್ಮೆಯಿಂದ ತೆರಳಿ ಮತಯಾಚನೆ ಮಾಡುತ್ತೇವೆ. ಜಿಲ್ಲೆಯ ಎಲ್ಲ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಪಣ ತೊಟ್ಟಿದ್ದೇವೆ. ಕಾಂಗ್ರೆಸ್ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ’ ಎಂದು ಅಮೃತ್‌ಶೆಣೈ ಹೇಳಿದರು.