ಬೆಳ್ಳಾರೆ: ಆರ್ಥಿಕ ಅಸಮತೋಲನ ನಿವಾರಣೆ, ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಉದ್ದೇಶ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಹೇಳಿದರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅರಂತೋಡು ಗ್ರಾಮದ ಅಂಗಡಿಮಜಲು ಎಂಬಲ್ಲಿ ಬಲ್ನಾಡು ನದಿಗೆ ನಿರ್ಮಿಸಲಾಗುವ ನೂತನ ಸೇತುವೆ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರ ಬಡವರಿಗೆ ಹಲವು ಭಾಗ್ಯಗಳನ್ನು ಕರುಣಿಸಿ ಅಭಿವೃದ್ಧಿ ಭಾಗ್ಯವನ್ನು ನೀಡಿದೆ. ನಮ್ಮ ಸರಕಾರದ ಅವಧಿಯಲ್ಲಿ ಅಭಿವೃದ್ಧಿಗಾಗಿ ಪ್ರತಿ ಶಾಸಕನಿಗೆ ಪ್ರತಿ ವರ್ಷ 20 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
150 ಕೋಟಿ ರೂ. ಅನುದಾನ
ಅವಿಭಜಿತ ಜಿಲ್ಲೆಗೆ ರಸ್ತೆ ಅಭಿವೃದ್ಧಿಗಾಗಿ 150 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಅರಂತೋಡಿಗೆ ಸೇತುವೆ ನಿರ್ಮಾಣದ ಕನಸು ದಶಕಗಳ ಬೇಡಿಕೆಯಾಗಿದ್ದು, ಇದಕ್ಕೆ ಶಿಲಾನ್ಯಾಸ ನೆರವೇರಿದೆ. ಕಾಮಗಾರಿ ಶೀಘ್ರವಾಗಿ ಜರಗಲಿದೆ ಎಂದು ಅವರು ಶುಭ ಹಾರೈಸಿದರು.
ಕೆ.ಪಿ.ಸಿ.ಸಿ. ಸದಸ್ಯ ಡಾ| ರಘು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿದರು. ಸುಳ್ಯ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಕೆ.ಪಿ.ಸಿ.ಸಿ. ಸದಸ್ಯ ವೆಂಕಪ್ಪ ಗೌಡ, ವಕ್ಫ್ ಮಂಡಳಿ ಸದಸ್ಯ ಸಂಶುದ್ದೀನ್, ತಾ.ಪಂ. ಮಾಜಿ ಸದಸ್ಯ ಪಿ.ಸಿ. ಜಯರಾಮ, ಸಂಪಾಜೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಅರಂತೋಡು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಜನಾರ್ದನ ಅಡ್ಕಬಳೆ, ಗ್ರಾ.ಪಂ. ಸದಸ್ಯರಾದ ರವೀಂದ್ರ ಪೂಜಾರಿ, ಗಂಗಾಧರ ಬನ, ಅರಂತೋಡು ತಾ.ಪಂ. ಕ್ಷೇತ್ರದ ಉಸ್ತುವಾರಿ ಮಹಮ್ಮದ್ ಕುಂಞಿ ಗೂನಡ್ಕ, ಕಾಂಗ್ರೆಸ್ ಮುಖಂಡ ಪಿ.ಎ. ಮಹಮ್ಮದ್, ಮುರುಗನ್ ಇತರರರು ಉಪಸ್ಥಿತರಿದ್ದರು.
150 ಕೋಟಿ ರೂ. ಅನುದಾನ
ಅವಿಭಜಿತ ಜಿಲ್ಲೆಗೆ ರಸ್ತೆ ಅಭಿವೃದ್ಧಿಗಾಗಿ 150 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಅರಂತೋಡಿಗೆ ಸೇತುವೆ ನಿರ್ಮಾಣದ ಕನಸು ದಶಕಗಳ ಬೇಡಿಕೆಯಾಗಿದ್ದು, ಇದಕ್ಕೆ ಶಿಲಾನ್ಯಾಸ ನೆರವೇರಿದೆ. ಕಾಮಗಾರಿ ಶೀಘ್ರವಾಗಿ ಜರಗಲಿದೆ ಎಂದು ಸಚಿವ ಬಿ. ರಮಾನಾಥ ರೈ ಅವರು ಶುಭ ಹಾರೈಸಿದರು.