ಹರಿಹರ: ಸಮಾಜದ ದುರ್ಬಲರಿಗೆ, ಅಸಹಾಯಕರಿಗೆ ನೆರವಾಗುವುದೇ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ಪ್ರೊ| ರಂಗರಾಜ ವನದುರ್ಗ ಹೇಳಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಸಮಾಜದ ನೌಕರರ ಸಮ್ಮೇಳನದಲ್ಲಿ ಪರಿಶಿಷ್ಟ ಪಂಗಡದ ನೌಕರರ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ನಾವೆಲ್ಲಾ ಓದಿ, ಅಧಿಕಾರಿಗಳಾಗಲು ಸಮಾಜದ ಕೊಡುಗೆ ಕಾರಣ. ಅಸಹಾಯಕರಿಗೆ ನೆರವಾಗುವ ಮೂಲಕ ಆ ಋಣ ತೀರಿಸಬೇಕಾಗಿದೆ ಎಂದರು.
ನೌಕರನಾಗಿ ನಾನು ಸಮಾಜದಿಂದ ಯಾವ ನಿರೀಕ್ಷೆಯನ್ನಿಟ್ಟುಕೊಂಡಿದ್ದೇನೆ, ಸಮಾಜವು ನನ್ನಿಂದ ಏನು ನಿರೀಕ್ಷಿಸುತ್ತಿದೆ ಎಂಬ ಹಂಬಲದ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕು. ಇಂತಹ ಇಕ್ಕಟ್ಟಿನ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಲು ಶ್ರೀಗಳು ಈ ಜಾತ್ರೆ ನಡೆಸುತ್ತಿದ್ದಾರೆ. ನಮ್ಮ ಮನೆಗಳು ಸಂಸ್ಕೃತಿಯ ಅರಿವಿನ ಮನೆಗಳಾಗಬೇಕೆ ಹೊರತು, ಲಕ್ಷ್ಮಿಯ ಮನೆಗಳಾಗುವುದು ಬೇಡ. ಜ್ಞಾನವಿದ್ದರೆ ತಾನೆ ನಮ್ಮ ಮುಂದಿನ ಇತಿಹಾಸ ರಚಿಸಲು ಸಾಧ್ಯ ಎಂದರು. ಬೆಳಗಾವಿ ಅಬಕಾರಿ ಜಂಟಿ ಆಯುಕ್ತ ವೈ.ಡಿ. ಮಂಜುನಾಥ್, ವಾಲ್ಮೀಕಿ ವಿಜಯ ಸ್ಮರಣ ಸಂಚಿಕೆ ಬಿಡಗಡೆ ಮಾಡಿದರು. ಪ್ರಸನ್ನಾನಂದ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಜಲಮಂಡಳಿ ಪ್ರಧಾನ ಅಭಿಯಂತರ ಕೆಂಪರಾಮಯ್ಯ ಉದ್ಘಾಟಿಸಿದರು. ಪಪಂ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಲಬುರ್ಗಿ ವಿವಿ ವಿಸಿ ಡಾ| ಎಸ್.ಆರ್.ನಿರಂಜನ್, ಐಪಿಎಸ್ ಅಧಿಕಾರಿ ಬಿ.ದಯಾನಂದ್, ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಜಗದೀಶ್ವರ ಮೂರ್ತಿ ವೈ.ಪಿ., ಕರ್ನಾಟಕ ವಿವಿ ರಿಜಿಸ್ಟ್ರಾರ್ ಡಾ| ಎನ್.ಎಂ.ಸಾಲಿ, ಡಾ.ಮಂಜುನಾಥ ಬೇವಿನಕಟ್ಟಿ ಇತರರಿದ್ದರು.
ಉತ್ತರ ಪ್ರದೇಶದಲ್ಲಿ ನಾಯಕ ಸಮಾಜದ ನೌಕರರು ತಮ್ಮ ಸಂಬಳದ ಇಂತಿಷ್ಟು ಭಾಗವನ್ನು ಸಮಾಜದ ಉದ್ಧಾರಕ್ಕಾಗಿ ನೀಡುತ್ತಿದ್ದಾರೆ. ನಾವೂ ಶೇ. 10ರಷ್ಟು ಸಂಬಳವನ್ನು ಸಮಾಜದ ಅಭಿವೃದ್ಧಿಗಾಗಿ ನೀಡಬೇಕು.
•ಪ್ರೊ| ರಂಗರಾಜ ವನದುರ್ಗ