Advertisement

17 ದಿನ ಜೈಲಿನಲ್ಲಿದ್ದರೂ ಸಂಬಳ ಪಡೆದಿದ್ದ ಆರೋಪಿ ಮಂಜುನಾಥ!

11:17 PM May 08, 2022 | Team Udayavani |

ಕಲಬುರಗಿ: ತೀವ್ರ ಕುತೂಹಲ ಕೆರಳಿಸಿರುವ ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ ನೀರಾವರಿ ಇಲಾಖೆ ಎಂಜಿನಿಯರ್‌ ಮಂಜುನಾಥ ಮೇಳಕುಂದಿ 2021ರಲ್ಲಿ ಜೆಇ ಪರೀಕ್ಷೆಯಲ್ಲಿ ಅಕ್ರಮ ನಡೆಸುವಾಗ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿ ಜೈಲು ಪಾಲಾಗಿದ್ದ. ಆದರೂ, ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡದೆ ವೈದ್ಯಕೀಯ ರಜೆ ಮತ್ತು ಸಂಬಳ ಪಡೆದಿರುವ ಚಾಲಾಕಿ ಎನ್ನುವುದು ಈಗ ಬಯಲಾಗಿದೆ.

Advertisement

2021ರ ಡಿಸೆಂಬರ್‌ನಲ್ಲಿ ನಡೆದಿರುವ ಲೋಕೋಪಯೋಗಿ ಇಲಾಖೆ ಎಇ ಮತ್ತು ಜೆಇ ಪರೀಕ್ಷೆಯಲ್ಲೂ ಬ್ಲೂéಟೂತ್‌ ಬಳಕೆ ಮಾಡಿ ಅಕ್ರಮ ನಡೆಸಿ ಬೆಂಗಳೂರಿನ ಪೊಲೀಸರ ತನಿಖೆಯಲ್ಲಿ ತಪ್ಪಿಸ್ಥನಾಗಿ ಸಿಕ್ಕಿಬಿದ್ದಿದ್ದ. ಈ ಕುರಿತು ಪ್ರಕರಣವೂ ದಾಖಲಾಗಿತ್ತು. ಬೆಂಗಳೂರಿನ ಪೊಲೀಸರ ಸೂಚನೆಯಂತೆ ಡಿ. 20ರಂದು ಕಲಬುರಗಿಯಲ್ಲಿ ಮೇಳಕುಂದಿಯನ್ನು ಬಂಧಿಸಲಾಗಿತ್ತು. ಈ ಕುರಿತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಿಂಚಿತ್ತು ಮಾಹಿತಿ ಸೋರಿಕೆಯಾಗದಂತೆ ನೋಡಿಕೊಂಡಿದ್ದ ಚಾಲಾಕಿ ಮೇಳಕುಂದಿ 17 ದಿನಗಳ ಕಾಲ ಜೈಲಿನಲ್ಲಿದ್ದ. ಈ ವೇಳೆ ವೈದ್ಯಕೀಯ ರಜೆ ಪಡೆದುಕೊಂಡಿದ್ದ.

ರಜೆಗೆ ಪ್ರಮಾಣ ಪತ್ರ ನೀಡಿದ್ದ ವೈದ್ಯ
ಈ ಎಲ್ಲ ಬೆಳವಣಿಗೆ ಮಾಹಿತಿ ಇಲ್ಲದ ನೀರಾವರಿ ಇಲಾಖೆ ಅಧಿಕಾರಿಗಳು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸರ್ಜನ್‌ ಆಗಿದ್ದ ವೈದ್ಯರೊಬ್ಬರಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆದಿದ್ದರು. ಇದರ ಆಧಾರದಲ್ಲಿ ಮೇಳಕುಂದಿಗೆ 15 ದಿನಗಳ ರಜೆ ನೀಡಲಾಗಿತ್ತು. ಈ ಅವಧಿಯಲ್ಲಿ ಸಂಬಳವನ್ನೂ ಪಡೆದಿರುವ ಕುರಿತು ಕರ್ನಾಟಕ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

ಜೈಲಿನಲ್ಲಿರುವ ಮೇಳಕುಂದಿಗೆ ಪ್ರಮಾಣ ಪತ್ರ ಕೊಡಿಸಿದವರು ಯಾರು? ಜೈಲಿನಲ್ಲಿದ್ದರೂ ವೈದ್ಯರು ತಪಾಸಣೆ ಹೇಗೆ ಮಾಡಿದರು? ಪ್ರಮಾಣ ಪತ್ರ ನೀಡಿದ ವೈದ್ಯರು ಎಷ್ಟು ಹಣ ಪಡೆದರು ಎನ್ನುವುದು ಈಗ ಬಯಲಾಗಬೇಕಾಗಿದೆ. ಅಲ್ಲದೇ, ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ್‌ ಮತ್ತು ಮಂಜುನಾಥ ಜೋಡಿಯ ಕಥಾನಕಗಳು ಇನ್ನೂ ಎಷ್ಟಿವೆಯೋ? ಯಾವ ಯಾವ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ್ದಾರೋ ಎನ್ನುವುದು ಸಿಐಡಿ ತನಿಖೆಯಿಂದ ಮಾತ್ರವೇ ಹೊರಬರಬೇಕಿದೆ.

ಪಾಟೀಲ್‌ನನ್ನು ಮತ್ತೆ ವಿಚಾರಣೆ ಸಾಧ್ಯತೆ?
ನಗರದ ಚೌಕ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಲು ಸಿಐಡಿ ಪೊಲೀಸರು ಪಾಟೀಲ್‌ನನ್ನು ವಶಕ್ಕೆ ಪಡೆದಿದ್ದರು. ಆದರೆ, ಸ್ಟೇಷನ್‌ ಬಜಾರದಲ್ಲೂ ಎಂ.ಎಸ್‌. ಇರಾನಿ ಕಾಲೇಜಿನಲ್ಲಿ ನಡೆದಿರುವ ಅಕ್ರಮದ ಕುರಿತು ಪ್ರಕರಣ ದಾಖಲಾಗಿದೆ. ಅದರಲ್ಲೂ ಪಾಟೀಲ್‌ ಹೆಸರು ಇರುವುದರಿಂದ ಪುನಃ ವಿಚಾರಣೆಗಾಗಿ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿವೆ.

Advertisement

ಮಂಜುನಾಥ ಅಮಾನತು
ಮಂಜುನಾಥ ಮೇಳಕುಂದಿ ಯನ್ನು ಶನಿವಾರ ನೀರಾವರಿ ಇಲಾಖೆಯ ಅಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣ ಬಯಲಾಗುತ್ತಿದ್ದಂತೆ 22 ದಿನಗಳ ಕಾಲ ತಲೆಮರೆಸಿಕೊಂಡು ಮೇ 1ರಂದು ತಾನೇ ಖುದ್ದಾಗಿ ಸಿಐಡಿ ಅಧಿಕಾರಿಗಳಿಗೆ ಶರಾಣಾಗಿದ್ದ. ಸಂಬಂಧಪಟ್ಟ ಇಲಾಖೆಯ ಅ ಧಿಕಾರಿಗಳು ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದು, ಶನಿವಾರ ಅಮಾನತು ಆದೇಶ ಹೊರಬಿದ್ದಿದೆ.

ದಿವ್ಯಾ ಮನೆ ಶೋಧ
ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ನಡೆದ ಪಿಎಸ್‌ಐ ಪರೀಕ್ಷಾ ಅಕ್ರಮದ ರೂವಾರಿ ಹಾಗೂ ಶಾಲಾ ಮುಖ್ಯಸ್ಥೆ ದಿವ್ಯಾ ಹಾಗರಗಿಯನ್ನು ಪಿ ಆ್ಯಂಡ್‌ ಟಿ ಕಾಲನಿ ಮುಂಭಾಗದಲ್ಲಿರುವ ಮನೆ ಮತ್ತು ಅಫಜಲಪುರ ರಸ್ತೆಯಲ್ಲಿರುವ ಹೊಲ ಮತ್ತು ಶಾಲೆಗೆ ರವಿವಾರ ಸಿಐಡಿ ಅಧಿಕಾರಿಗಳು ಕರೆದೊಯ್ದು ಮಹಜರು ಮಾಡಿದ್ದಾರೆ. ಮೇ 9ಕ್ಕೆ ದಿವ್ಯಾ ಹಾಗರಗಿ ಹಾಗೂ ಇತರ ನಾಲ್ವರ ಸಿಐಡಿ ಕಸ್ಟಡಿ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ವಿಚಾರಣೆ ಭಾಗವಾಗಿ ತಪಾಸಣೆ ಮಾಡಲಾಗಿದೆ. ಅಲ್ಲಿ ಕೆಲವು ಮಾಹಿತಿ ಇರುವ ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ಹೇಳಿವೆ.

ನಗುತ್ತಲೇ ಜೈಲಿಗೆ ಹೋದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ್‌
ಪಿಎಸ್‌ಐ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಎಂದೇ ಕರೆಯಲಾಗುತ್ತಿರುವ ರುದ್ರಗೌಡ ಡಿ. ಪಾಟೀಲ್‌ನನ್ನು ರವಿವಾರ ಸಿಐಡಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಅಂತಿಮವಾಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಇದರೊಂದಿಗೆ ಸಿಐಡಿ ತನಿಖೆಯ ರೋಚಕ ಕಥಾನಾಯಕನಾಗಿದ್ದ ರುದ್ರಗೌಡ ಪಾಟೀಲ ಜೈಲು ಸೇರಿದಂತಾಗಿದೆ. ಸಿಐಡಿ ಕಚೇರಿಯಿಂದ ಜೈಲಿನೆಡೆಗೆ ಹೋಗುವಾಗ ಮತ್ತೂಂದು ಬಾರಿ ಮಾಧ್ಯಮಗಳಿಗೆ ನಾನು ಒಳ್ಳೆಯದ್ದು ಮಾಡಿದ್ದೇನೆ. ಅದನ್ನು ತುಸು ಬರೆಯಿರಿ ಎಂದು ನಗುತ್ತಲೇ ಕೈಬೀಸಿ ಹೊಗಿದ್ದಾನೆ. ಹೋಗುವಾಗ ಮುಖದಲ್ಲಿ ಆತಂಕದ ಬದಲು ನಗುವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next