ಬೆಳ್ತಂಗಡಿ: ನಾನು ರಾಗಿ ಕಳ್ಳ ಅಂದಿದ್ದರು, ನಾನು ಏನೂ ಕದ್ದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಮುಂದೆ ಅಣೆ ಪ್ರಮಾಣ ಮಾಡಿದ್ದೇನೆ ಎಂದು ದೇವರ ದರ್ಶನದ ಬಳಿಕ ಅರಸೀಕರರೆ ಜೆ.ಡಿ.ಎಸ್. ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ನನಗೆ ಈ ಆರೋಪ ಯಾಕೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ರೈತರಿಗೆ ರಾಗಿ ಕೊಡಿಸಲು ಸಾಕಷ್ಟು ಹೋರಾಟ ಮಾಡಿದ್ದೇನೆ. ಆದರೆ ನನಗೆ ಈ ಆರೋಪ ಯಾಕೆ ಮಾಡಿದ್ದಾರೆ ಅಂತ ಅವರನ್ನೇ ಕೇಳಬೇಕು.
ಬಿಜೆಪಿಯ ರವಿಕುಮಾರ್ ಈ ಆರೋಪ ಮಾಡಿದ್ದಾರೆ, ಅವರನ್ನು ಕರೆದಿದ್ದೆ. ಹಾಗಾಗಿ ನಾನೇ ಬಂದು ಆಣೆ ಮಾಡಿದ್ದೇನೆ, ಅವರು ಬೇಕಾದ್ರೆ ಬರಲಿ, ಹೆಗ್ಗಡೆಯವರ ಜತೆ ಈ ಬಗ್ಗೆ ಚರ್ಚೆ ಮಾಡಿಲ್ಲ, ಭೇಟಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ 15 ವರ್ಷ ನೆಮ್ಮದಿ ಇತ್ತು, ಆದರೆ ಈಗ ಎಲ್ಲವೂ ಆರಂಭವಾಗಿದೆ. ನಾನು ಜೆಡಿಎಸ್ ಜೊತೆ ಕಳೆದ ಐದಾರು ತಿಂಗಳಿನಿಂದ ಅಂತರ ಕಾಯ್ದುಕೊಂಡಿದ್ದೇನೆ. ಅದಕ್ಕೆ ಕಾರಣ ಇದೆ, ವರಿಷ್ಟರ ಅಸಮಾಧಾನದ ಹಿನ್ನೆಲೆ ಸ್ವಲ್ಪ ಅಂತರ ಇದೆ.
ನಾನು ಇಲ್ಲಿಗೆ ಬಂದಿರೋ ವಿಚಾರ ವರಿಷ್ಠರು ಯಾರ ಗಮನಕ್ಕೂ ತರಲಿಲ್ಲ. ಆದರೆ ಸ್ಥಳೀಯ ಮುಖಂಡರ ಜತೆ ಚರ್ಚೆ ಮಾಡಿ ಇಲ್ಲಿಗೆ ಬಂದಿದ್ದೇನೆ. ಮಂಜುನಾಥನ ಮೇಲೆ ಆಣೆ ಲೋಕರೂಢಿ ಮಾತು. ಯಾರು ಬೇಕಾದರೂ ಸಾಕ್ಷಿ ಆಧಾರ ಇಲ್ಲದ ಆರೋಪ ಮಾಡಿದಾಗ ಆಣೆಗೆ ಬರೋದು ಲೋಕಾರೂಢಿ. ಇದರಲ್ಲಿ ಮಂಜುನಾಥ ಸ್ವಾಮಿ ಎಳೆದು ತರೋ ಮಾತು ಇಲ್ಲ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.