“ನನ್ನ ಉದ್ದೇಶ ಈಡೇರಿದೆ …’
ತುಂಬಾ ವಿಶ್ವಾಸದಿಂದ ಹೀಗೆ ಹೇಳಿದರು ರಿಷಬ್ ಶೆಟ್ಟಿ. ಅವರ ವಿಶ್ವಾಸಕ್ಕೆ ಕಾರಣ ಜನ “ಸರ್ಕಾರಿ ಶಾಲೆ’ಗೆ ನುಗ್ಗಿ ಬರುತ್ತಿರೋದು. ಕಳೆದ ವಾರ ತೆರೆಕಂಡ ರಿಷಭ್ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಹಿಟ್‌ಲಿಸ್ಟ್ ಸೇರುವತ್ತ ದಾಪುಗಾಲು ಹಾಕುತ್ತಿದೆ. ಆರಂಭದಿಂದಲೂ ಇದು ಮಕ್ಕಳ ಸಿನಿಮಾ ಎಂದು ಬಿಂಬಿತವಾದ ಚಿತ್ರ. ಸಾಮಾನ್ಯವಾಗಿ ಮಕ್ಕಳ ಸಿನಿಮಾ ಎಂದರೆ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲ್ಲ ಮತ್ತು ಬಿಡುಗಡೆಯಾದರೂ ಪ್ರೇಕ್ಷಕರ ಕೊರತೆ ಕಾಡುತ್ತದೆ ಎಂಬ ಮಾತಿದೆ. ಆದರೆ, “ಸರ್ಕಾರಿ ಶಾಲೆ’ ಮಾತ್ರ ಆ ಮಾತನ್ನು ಸುಳ್ಳು ಮಾಡಿದೆ. ಜನ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಹೌಸ್‌ಫುಲ್ ಪ್ರದರ್ಶನಗಳು ನಡೆದಿವೆ. ಚಿತ್ರಮಂದಿರಗಳ ಸಂಖ್ಯೆಯೂ ಏರಿಕೆಯಾಗಿವೆ.
ಈ ಖುಷಿಯಲ್ಲಿ ನಿರ್ದೇಶಕ ರಿಷಭ್ ಇದ್ದಾರೆ. ಏನಂದುಕೊಂಡು ಸಿನಿಮಾ ಮಾಡಿದ್ದರೋ ಅದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯಂತೆ. “ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಥಿಯೇಟರ್‌ನವರಿಂದಲೂ ಬೇಡಿಕೆ ಬರುವ ಜೊತೆಗೆ ಸಿನಿಮಾ ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಮುಖ್ಯವಾಗಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಮಕ್ಕಳು ಸ್ವಲ್ಪ ಹೆಚ್ಚೇ ಇಷ್ಟಪಟ್ಟ ಸಿನಿಮಾವಿದು. ಇತ್ತೀಚೆಗೆ ನಾನು ಥಿಯೇಟರ್‌ಗೆ ಭೇಟಿ ನೀಡಿದಾಗ ಜನರ ಪ್ರತಿಕ್ರಿಯೆ ನೋಡಿ ಸಿನಿಮಾದ ಉದ್ದೇಶ, ಆಶಯ ಈಡೇರಿದ ಖುಷಿ ಸಿಕ್ಕಿತು’ ಎನ್ನುತ್ತಾರೆ ರಿಷಭ್.
ಒಂದು ಸಿನಿಮಾ ಅಂದಮೇಲೆ ಅದನ್ನು ಎಲ್ಲರೂ ಇಷ್ಟಪಡಬೇಕು, ಒಕ್ಕೊರಲಿನ ಬೆಂಬಲ ಸಿಗಬೇಕು ಎಂಬ ಯಾವ ನಿಯಮವೂ ಇಲ್ಲ. ಟೀಕೆಗಳು, ಮಿಶ್ರ ಪ್ರತಿಕ್ರಿಯೆಗಳು ಸಹಜ. ಆ ತರಹದ ಮಿಶ್ರ ಪ್ರತಿಕ್ರಿಯೆ, ಟೀಕೆಗಳಿಂದ “ಸರ್ಕಾರಿ ಶಾಲೆ’ ಕೂಡಾ ಮುಕ್ತವಾಗಿಲ್ಲ. ಆದರೆ, ಈ ಬಗ್ಗೆ ರಿಷಭ್‌ಗೆ ಯಾವುದೇ ಬೇಸರವಿಲ್ಲ. “ನಾನು ಮಾಡುತ್ತಿರುವ ಸಿನಿಮಾ ಬಗ್ಗೆ ನನಗೆ ಕ್ಲಾéರಿಟಿ ಇತ್ತು. ಏನು ಹೇಳಬೇಕಿತ್ತೋ, ಅದನ್ನು ಹೇಳಿದ್ದೇನೆ. ಒಂದಷ್ಟು ಮಂದಿ ಕಾಸರಗೋಡಿನ ಬಗ್ಗೆ ಹೇಳಲಿಲ್ಲ, ಶಾಲೆ ಬಗ್ಗೆ ಹೇಳಿದ್ದಾರೆ ಎನ್ನುತ್ತಿದ್ದಾರೆ. ನಾನು ಆರಂಭದಿಂದಲೂ ಒಂದು ಮಾತು ಹೇಳುತ್ತಲೇ ಬಂದಿದ್ದೆ, ನಮ್ಮ ಸಿನಿಮಾದ ಉದ್ದೇಶ ಸರ್ಕಾರಿ ಶಾಲೆಯ ಉಳಿವಿನ ಬಗ್ಗೆ, ಮಾತೃಭಾಷೆಯಲ್ಲಿ ಶಿಕ್ಷಣ ಸಿಗಬೇಕು ಎಂಬ ಹೋರಾಟದ ಬಗ್ಗೆ. ಕಾಸರಗೋಡನ್ನು ನಾನು ಕಥೆಯ ಹಿನ್ನೆಲೆಯಲ್ಲಿ ಇಟ್ಟಿದ್ದೇನೆಯೇ ಹೊರತು, ಅದು ನನ್ನ ಸಿನಿಮಾದ ಉದ್ದೇಶವಲ್ಲ. ನನ್ನ ಮುಖ್ಯಕಥೆಯ ಜೊತೆಗೆ ಕಾಸರಗೋಡಿನ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲಬೇಕಿತ್ತು. ಕಾಸರಗೋಡನ್ನು ವೈಭವೀಕರಿಸುವ ಉದ್ದೇಶ ನನ್ನದಾಗಿರಲಿಲ್ಲ. ಮಂಗಳೂರಿನಲ್ಲಿದ್ದ ಎಷ್ಟೋ ಮಂದಿಗೆ ಕಾಸರಗೋಡಿನ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಈಗ ಎಲ್ಲರೂ ಆ ಬಗ್ಗೆ ಮಾತನಾಡುತ್ತಾರೆ. ಅದು ಈ ಸಿನಿಮಾಕ್ಕೆ ಸಿಕ್ಕ ಜಯ ಎನ್ನಬಹುದು. ನಮ್ಮ ಸಿನಿಮಾದ ಮುಖ್ಯ ಉದ್ದೇಶ ಅರ್ಥಮಾಡಿಕೊಳ್ಳದವರು ಆ ಬಗ್ಗೆ ಮಾತನಾಡುತ್ತಾರೆ. ನನಗೆ ಬೇಸರವಿಲ್ಲ, ಏಕೆಂದರೆ, ಅವರವರ ಅಭಿಪ್ರಾಯ ಅವರವರಿಗೆ. ನನಗೆ ಜನರ ಪ್ರತಿಕ್ರಿಯೆ ಮುಖ್ಯ. ಅದು ನಮಗೆ ಪ್ರಶಸ್ತಿಗಿಂತಲೂ ದೊಡ್ಡದು. ಅದೊಂಥರ ಗಣಿ ಸಿಕ್ಕಂತೆ’ ಎಂದು ಸಿನಿಮಾ ಬಗ್ಗೆ ಮಾತನಾಡುತ್ತಾರೆ ರಿಷಭ್.
ಕಳೆದೊಂದು ವಾರದಿಂದ ಚಿತ್ರಮಂದಿರಗಳಿಗೆ ಭೇಟಿಕೊಟ್ಟು ಜನರ ಪ್ರತಿಕ್ರಿಯೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ ರಿಷಭ್. ಇತ್ತೀಚೆಗೆ ಜನ ಖುಷಿಯಿಂದ ಕೇಕೆ ಹಾಕುವುದನ್ನು ರೆಕಾರ್ಡ್ ಮಾಡಿ ಅನಂತ್‌ನಾಗ್ ಅವರಿಗೆ ಕಳುಹಿಸಿದರಂತೆ. ಜೊತೆಗೆ, “ಈ ಖುಷಿಯನ್ನು ನೀವು ಥಿಯೇಟರ್‌ಗೆ ಬಂದು ನೋಡಿದರೆ ಚೆಂದ’ ಎಂದು ಕೇಳಿಕೊಂಡರಂತೆ. ಅದರಂತೆ ಕೆ.ಜಿ. ರಸ್ತೆಯ ಸಂತೋಷ್ ಚಿತ್ರಮಂದಿರಕ್ಕೆ ಅನಂತ್‌ನಾಗ್ ಭೇಟಿಕೊಟ್ಟಿದ್ದಾರೆ. ಒಳಗಡೆ ಹೌಸ್‌ಫುಲ್ ಪ್ರದರ್ಶನ. ಹೊರಗಡೆಯೂ ಹೌಸ್‌ಫುಲ್ ಆಗುವಷ್ಟು ಜನ. ಎಲ್ಲರನ್ನು ನೋಡಿ ಅನಂತ್‌ನಾಗ್ ಖುಷಿಯಾದರಂತೆ.
ಮರಾಠಿಯಿಂದಲೂ “ಸರ್ಕಾರಿ ಶಾಲೆ’ಗೆ ಬೇಡಿಕೆ ಬರುತ್ತಿದೆ. ಜೊತೆಗೆ ಟಿವಿ ರೈಟ್ಸ್ ಕೂಡಾ ಮಾತುಕತೆ ನಡೆಯುತ್ತಿದೆ. ರಿಷಭ್ ಶೆಟ್ಟಿ ಮಾತ್ರ ಥಿಯೇಟರ್‌ನಿಂದ ಥಿಯೇಟರ್‌ಗೆ ಓಡಾಡುತ್ತಾ ಜನರ ಪ್ರತಿಕ್ರಿಯೆಯನ್ನು ಕಣ್ಣಾರೆ ಕಾಣುವ ಉತ್ಸಾಹದಲ್ಲಿದ್ದಾರೆ.
ರವಿ ಪ್ರಕಾಶ್ ರೈ