Advertisement
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬಾಪೂಜಿ ಎಂಬಿಎ ಸಭಾಂಗಣದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಸಿದ್ಧತಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪುಲ್ವಾಮಾದ ಘಟನೆ ಕುರಿತಂತೆ ಟಿವಿ, ರೇಡಿಯೋ, ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆಯ ಚರ್ಚೆ ನಡೆಯುತ್ತಿವೆ. ಈ ಕ್ಷಣದವರೆಗೆ ಆ ಘಟನೆಗೆ ಮೂಲ ಕಾರಣರು ಯಾರು ಎಂಬುದರ ವಿಷಯವಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಯಾರೊಬ್ಬರು ಸಹ ಅಧಿಕೃತ ಹೇಳಿಕೆಯನ್ನೇ ನೀಡಿಲ್ಲ. ಯಾವುದೇ ಸಂಬಂಧವೇ ಇಲ್ಲದ ಅಮಿತ್ ಶಾ ಹೇಳಿಕೆ ಕೊಡುತ್ತಾರೆ. ಪುಲ್ವಾಮಾ ಘಟನೆಯ ಬಗ್ಗೆಹೇಳಿಕೆ ನೀಡಲು ಅವರಿಗೆ ಯಾವುದಾದರೂ ಸಂವಿಧಾನತ್ಮಕ ಜವಾಬ್ದಾರಿ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು.
ಶೂಟಿಂಗ್‌ನಲ್ಲಿ ನಿರತರಾಗಿದ್ದಂತಹ ದೇಶದ ಮಹಾನ್ ಕಾವಲುಗಾರ 4 ಗಂಟೆಗಳ ಕಾಲ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಪುಲ್ವಾಮಾದ ಘಟನೆಯಲ್ಲಿ ಹುತಾತ್ಮರ ಶವದ ಪೆಟ್ಟಿಗೆಗಳನ್ನು ಪಾಲಂ ವಿಮಾನ ನಿಲ್ದಾಣಕ್ಕೆ ತರಲಿಕ್ಕೂ ದೇಶದ ಮಹಾನ್ ಕಾವಲುಗಾರ ಒಂದು ಗಂಟೆ ಕಾಯಿಸಿದರು.
Related Articles
Advertisement
ಪುಲ್ವಾಮಾ ಮಾತ್ರವಲ್ಲ ಉರಿ, ಉದಾಂಪುರ, ಪಠಾಣ್‌ಕೋಟ್, ಡೊಕ್ಲಾಮಾ… ಘಟನೆಗಳ ಬಗ್ಗೆ ಯಾರಾದರೂ ಯಾವುದಾದರೂ ಪ್ರಶ್ನೆ ಕೇಳಿದರೆ ಅವರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತದೆ. ಯುವಕರು, ಮಹಿಳೆಯರು ಆ ಘಟನೆಗಳ ಬಗ್ಗೆ ಪ್ರಶ್ನೆ ಕೇಳಬೇಕು ಎಂದು ತಿಳಿಸಿದರು.
ಡಾ| ಶಿವಕುಮಾರ ಸ್ವಾಮಿ ಲಿಂಗೈಕ್ಯರಾದ ಸಂದರ್ಭದಲ್ಲಿ ದೆಹಲಿ ಬಿಜೆಪಿಯ ಯಾವುದೇ ಮುಖಂಡರು ಸಿದ್ಧಗಂಗೆಯತ್ತ ಸುಳಿಯಲೇ ಇಲ್ಲ. ರಾಜ್ಯ ನಾಯಕರು ಕೈ ಕಾಲು ಹಿಡಿದುಕೊಂಡಿದ್ದಕ್ಕೆ ಕೊನೆಯದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ಮುಗಿಯುವಾಗ ಬಂದರು.ಕೇಂದ್ರ ಸರ್ಕಾರ ವೀರಶೈವ, ಲಿಂಗಾಯತರನ್ನ ಯಾಕೆ ಸಚಿವರನ್ನಾಗಿ ಮಾಡಿಲ್ಲ ಎಂದು ಪ್ರಶ್ನಿಸಿದ ಒಕ್ಕಲಿಗ ಸಮುದಾಯದ ಸದಾನಂದಗೌಡರಿಂದ ರೈಲ್ವೆ ಖಾತೆಯನ್ನ ಕಿತ್ತುಕೊಂಡರು ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ರವರೇ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಅವರನ್ನ ಗೆಲ್ಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಪಿಸಿಸಿ ಕಾರ್ಯದರ್ಶಿಗಳಾದ ರಾಜು ಜಮಖಂಡಿ, ಖಾದರ್ ಮೊಹಿದ್ದೀನ್ ಶೇಖ್, ಮೇಯರ್ ಶೋಭಾ ಪಲ್ಲಾಗಟ್ಟೆ, ಮುದೇಗೌಡ್ರ ಗಿರೀಶ್, ಅಮೃತೇಶ್ವರಸ್ವಾಮಿ, ಬಿ.ಕೆ. ಪರಶುರಾಮ್, ಬಿ.ಎಸ್. ನಂಜಾನಾಯ್ಕ, ಕೆ.ಸಿ. ಲಿಂಗರಾಜ್, ಡೋಲಿ ಚಂದ್ರು, ಯತಿರಾಜ್, ಅಲಿ ರಹಮತ್, ಎ. ನಾಗರಾಜ್, ಕೆ.ಜಿ. ಶಿವಕುಮಾರ್, ಇತರರು ಇದ್ದರು. ದಿನೇಶ್ ಕೆ. ಶೆಟ್ಟಿ ಸ್ವಾಗತಿಸಿದರು.