ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪೆ¤ ಶಶಿಕಲಾ ನಟರಾಜನ್‌ಗೆ ವಿಶೇಷ ಸೌಲಭ್ಯ ನೀಡಲು 2 ಕೋಟಿ ರೂ. ಲಂಚ ನೀಡಿದ ಪ್ರಕರಣ ಸಂಬಂಧ ಎಐಎಡಿಎಂಕೆ ರಾಜ್ಯ ಮುಖಂಡ ಪುಗಳೇಂದಿ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ವಿಚಾರಣೆಗೆ ಹಾಜರಾದರು.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಎಸಿಬಿ ಕಚೇರಿಗೆ ಆಗಮಿಸಿದ ಪುಗಳೇಂದಿ ಅವರನ್ನು ಮಧ್ಯಾಹ್ನ 2 ಗಂಟೆವರೆಗೆ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಕೆಲ ಮಹತ್ವದ ಮಾಹಿತಿ ಸಂಗ್ರಹಿಸಿದರು.
ಬಳಿಕ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪುಗಳೇಂದಿ, ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ಒದಗಿಸಲು ನಾನು ಯಾರಿಗೂ ಮನವಿ ಮಾಡಿಲ್ಲ. ಅವರು ಜೈಲು ಸೇರಿದ ಆರಂಭದಲ್ಲಿ 15 ದಿನಗಳಿಗೊಮ್ಮೆ ಭೇಟಿಯಾಗುತ್ತಿದ್ದೆ. ಕಾರಾಗೃಹದ ತಿಂಗಳಿಗೊಮ್ಮೆ ಬರುವಂತೆ ಸೂಚಿಸಿದ್ದರು.
ಕಳೆದ ಐದು ತಿಂಗಳಿನಿಂದ ಭೇಟಿಯಾಗಿಲ್ಲ. ಪ್ರಕರಣದ ಬಗ್ಗೆ ನನಗೆ ತಿಳಿದ ಮಾಹಿತಿಯನ್ನು ಎಸಿಬಿ ಅಧಿಕಾರಿಗಳ ಎದುರು ಹೇಳಿದ್ದೇನೆ. ಮತ್ತೆ ವಿಚಾರಣೆಗೆ ಕರೆದಾಗ ಬರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಖಂಡಿತ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಜೂ.29ರಂದೇ ವಿಚಾರಣೆಗೆ ಹಾಜರಾಗುವಂತೆ ಪುಗಳೇಂದಿಗೆ ಎಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ, ಎರಡು ದಿನ ತಡವಾಗಿ ವಿಚಾರಣೆಗೆ ಹಾಜರಾಗಲು ಅವಕಾಶ ಕಲ್ಪಿಸುವಂತೆ ಎಸಿಬಿ ಅಧಿಕಾರಿಗಳಿಗೆ ಪುಗಳೇಂದಿ ಮನವಿ ಮಾಡಿದ್ದರು.