Advertisement

ಭೀಮಾ ತೀರದ ಪ್ರಕಾಶಕಿಯಿಂದ ಪುಸ್ತಕ ಕ್ರಾಂತಿ

06:02 PM Aug 24, 2021 | Shreeram Nayak |

ವಿಜಯಪುರ: ಭೀಮಾ ತೀರ ಎನ್ನುತ್ತಲೇ ನೆನಪಿಗೆ ಬರುವುದು ರಕ್ತಸಿಕ್ತ ಕರಾಳ ಚರಿತೆ. ಆದರೆ ಇದೇ ನೆಲದಲ್ಲಿ ತಲೆಮಾರುಗಳಿಂದ ಸಾಧನೆ ಮಾಡಿರುವ ಭೀಮಾ ತೀರದ ಚಿಂತಕರ ಕುರಿತು ಬಹುತೇಕ ಹೊರ ಜಗತ್ತಿಗೆ ತಿಳಿದಿಲ್ಲ. ಆದರೆ ತನ್ನ ನೆಲದ ಸಾಧಕರು, ಸಾಂಸ್ಕೃತಿಕ ಹಿರಿಮೆಯ ಕುರಿತು ಏಕಕಾಲಕ್ಕೆ 28 ಕೃತಿಗಳಲ್ಲಿ ಪರಿಚಯಿಸಲು ಇದೇ ಪರಿಸರದ ಕಡಣಿ ಎಂಬ ಕುಗ್ರಾಮದ ಮಹಿಳೆಯೊಬ್ಬರು ಬೃಹತ್‌ ಮಟ್ಟದ ಸಾಹಸಕ್ಕೆ ಕೈ ಹಾಕಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಸಾಹಸ ಸಾಧನೆಯಾಗಿ ಭೀಮಾ ತೀರದಲ್ಲಿ ಚಿಂತಕರ ಚರಿತ್ರೆಯಲ್ಲಿ ದಾಖಲಾಗಲಿದೆ.

Advertisement

ವೈಚಾರಿಕ ಸಿರಿಯ ಸಾಧನೆ ಹೊಂದಿರುವ ಭೀಮಾ ತೀರ ಪ್ರಖ್ಯಾತಿ ಪಡೆಯುವ ಬದಲು, ವ್ಯಕ್ತಿಗತ ದ್ವೇಷಗಳ ರಕ್ತಸಿಕ್ತ ಬದುಕಿಗಾಗಿ ನಡೆದ ಹತ್ಯೆ-ಹಂತಕರ ಕಾರಣದಿಂದ ಭೀಮಾ ತೀರದ ಹಂತಕರು ಎಂಬ ಕುಖ್ಯಾತಿ ಪಡೆದಿದೆ. ಇದರಿಂದಾಗಿ ಈ ಪರಿಸರದ ಜನರು ಸಾರ್ವಜನಿಕವಾಗಿ ಹೊರ ಜಗತ್ತಿನಲ್ಲಿ ಮುಜುಗುರ ಅನುಭವಿಸುವಂತಾಗಿದೆ. ಆದರೆ ಭೀಮಾ ತೀರ ಹಂತಕರ ನೆಲವಲ್ಲ, ಚಿಂತಕರ ಪ್ರವಾಹವೇ ಇದೆ ಎಂಬ ಸಂದೇಶ ಸಾರುವ ಸಾಹಸವೊಂದು ನಡೆದಿದೆ. ತನ್ನ ನೆಲಕ್ಕೆ ಅಂಟಿರುವ ಕುಖ್ಯಾತಿ ಅಳಿಸುವ ಸಾಹಸಕ್ಕೆ ಇದೇ ನೆಲದಲ್ಲಿ ಸಾಮಾನ್ಯ ಮಹಿಳೆಯೊಬ್ಬಳು ದಿಟ್ಟ ಹೆಜ್ಜೆ ಇರಿಸಿದ್ದಾರೆ.

ಭೀಮಾ ತೀರದವರೇ ಆಗಿರುವ ಆಲಮೇಲ ತಾಲೂಕಿನ ಕಡಣಿ ಮೂಲದ ವಿಜಯಲಕ್ಷ್ಮೀ ಕತ್ತಿ ಕಳೆದ ಮೂರು ವರ್ಷಗಳ ಹಿಂದೆ ಬೆರಗು ಪ್ರಕಾಶನ ಸ್ಥಾಪಿಸಿದ್ದಾರೆ. ಇದರ ಮೂಲಕ ಈ ಭಾಗದ ಸಾಂಸ್ಕೃತಿಕ, ಚಿಂತನೆಗಳನ್ನು ಕೃತಿಗಳ ರೂಪದಲ್ಲಿ ಹೊರತರುವ ಕೆಲಸಕ್ಕೆ ಮಾಡುತ್ತಿದ್ದಾರೆ.  ಈಗಾಗಲೇ ಮಾಧ್ಯಮ ಲೋಕದಲ್ಲಿ ಭೀಮಾ ತೀರದ ಹಂತಕರು ಎಂಬ ರಕ್ತ ಚರಿತೆಯನ್ನು ಮಾತ್ರ ಬಲ್ಲವರಿಗೆ ಭೀಮಾ ತೀರದ ಚಿಂತಕರ ಕುರಿತು ತಿಳಿದಿಲ್ಲ. ಲೋಕಲ್ಯಾಣಕ್ಕಾಗಿ ಇದೇ ನೆಲದಲ್ಲಿ ಜನ್ಮತಳೆದು ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಂತರು, ಮಹಾತ್ಮರು, ಸಾಹಿತಿ, ಕಲಾವಿದರ ಕುರಿತು ತಿಳಿದಿಲ್ಲ. ಇದನ್ನು ತಿಳಿಸುವುದಕ್ಕಾಗಿಯೇ ಕಡಣಿ ಎಂಬ ಕುಗ್ರಾಮದಿಂದ ಕೇವಲ ಅಲ್ಪ ಅವಧಿಯಲ್ಲಿ 22 ಕೃತಿಗಳನ್ನು ಹೊರ ತಂದಿರುವ ಸಾಧಕಿ. ಇವರ ಪ್ರಕಾಶನದಿಂದ ಹೊರ ತಂದಿರುವ ರಂಗಪರಿಚಾರಕ ಗಂಗಾಧರಪ್ಪ
ಉಪ್ಪಿನ ಕೃತಿ ಎಂ.ಎ. ದ್ವಿತೀಯ ವರ್ಷದ ಪಠ್ಯವಾಗಿರುವುದು ವಿಶೇಷ.

ಇದನ್ನೂ ಓದಿ:ಆನಂದ ಸಿಂಗ್ ಒಳ್ಳೆಯ ಮುಹೂರ್ತಕ್ಕೆ ಕಾಯುತ್ತಿದ್ದರು: ಕಂದಾಯ ಸಚಿವ ಆರ್ ಅಶೋಕ

ಸ್ವಾತಂತ್ರ್ಯಸಂಗ್ರಾಮದಲ್ಲಿ ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ರಮಾನಂದ ತೀರ್ಥರು, ಕನ್ನಡದ ಜಗದ್ಗುರು ಗದಗ ತೋಂಟದ
ಡಾ| ಸಿದ್ಧಲಿಂಗ ಶ್ರೀಗಳು, ಸಾತ್ವಿಕ ರಾಜಕೀಯ ಮುತ್ಸದ್ಧಿ ಎಂ.ಸಿ. ಮನಗೂಳಿ, ವೈಚಾರಿಕ ಚಿಂತಕ- ಪ್ರಖ್ಯಾತ ಸಂಶೋಧಕ ಡಾ| ಎಂ.ಎಂ.ಕಲಬುರ್ಗಿ, ಹಿರಿಯ ಪತ್ರಕರ್ತ ರೇ.ಚ. ರೇವಡಿಗಾರ, ಮಕ್ಕಳ ಸಾಹಿತಿ ಹ.ಮ. ಪೂಜಾರ, ಕಥೆಗಾರ್ತಿ ಭಾರತಿ ಪಾಟೀಲ ಹೀಗೆ ವಿವಿಧ
ಸಾಧಕರಿಂದಾಗಿಯೇ ಭೀಮಾ ತೀರ ಚಿಂತಕರ ಕಣಜವಾಗಿದೆ. ತಮ್ಮ ನೆಲದ ಈ ಚಿಂತಕರ ಕುರಿತಾದ ಕೃತಿಗಳನ್ನು ಹೊರ ತಂದು ನಾಡಿಗೆ ಹೊಸ ಸಂದೇಶ ಸಾರುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದಾರೆ. 2017ರಲ್ಲಿ ಆರಂಭವಾದ ಬೆರಗು ಪ್ರಕಾಶನ ಮೊದಲ ವರ್ಷ 2 ಕೃತಿ ಹೊರ ತಂದಿದ್ದು, 2018ರಲ್ಲಿ 10, 2019ರಲ್ಲಿ 10 ಪುಸ್ತಕ ಸೇರಿದಂತೆ 22 ಕೃತಿ ಹೊರ ಬಂದಿವೆ. ಕಳೆದ ವರ್ಷ ಕೋವಿಡ್‌ ಕಾರಣಕ್ಕೆ 10 ಕೃತಿ ಮುದ್ರಣ ಮುಂದಕ್ಕೆ ಹೋಗಿದ್ದರೂ, ಈ ವರ್ಷ ಏಕಕಾಲಕ್ಕೆ 28 ಪುಸ್ತಕ ಹೊರತರುವ ಸಾಹಸ ಯೋಜನೆ ಕೈಗೂಡಲು ಕೆಲವೇ ದಿನಗಳು ಬಾಕಿ ಇವೆ.

Advertisement

ಯಾರ್ಯಾರ ಕೃತಿಗಳು?: 28 ಕೃತಿಗಳಲ್ಲಿ ಅಖಂಡ ಸಿಂದಗಿ ತಾಲೂಕ ಪರಿಸರಕ್ಕೆ ಸೇರಿದ 11 ಸಾಧಕರ ಕುರಿತು ನಾವು ನಮ್ಮ ಸಾಧಕರು ಮಾಲಿಕೆಯಲ್ಲಿ ತಲಾ 56-60 ಪುಟಗಳ ಕೃತಿಗಳು ಬೆಳಕು ಕಾಣಲಿವೆ. ಸಿದ್ದರಾಮ ಉಪ್ಪಿನ ಅವರ ಎರಡು ಕೃತಿಗಳು ಮರು ಮುದ್ರಣ, 310 ಪುಟಗಳ ಆಲಮೇಲ ನೂತನ ತಾಲೂಕು ದರ್ಶನ ಕೃತಿ ಬಾಕ್ಸ್‌ ಬೈಂಡಿಂಗ್‌ ರೂಪದಲ್ಲಿ ಹೊರ ಬರುತ್ತಿದೆ. ಇದಲ್ಲದೇ ತಮ್ಮ ಪತಿ ಡಾ| ರಮೇಶ ಕತ್ತಿ ಬರೆದ 5 ಕೃತಿಗಳು, ಹೂಲಿ ಶೇಖರ, ಕೆಎಎಸ್‌ ಅ ಧಿಕಾರಿ ಸಂಗಮೇಶ ಉಪಾಸೆ, ಶಂಕರ ಬೈಚಬಾಳ, ಬಸವರಾಜ ಕುಂಬಾರ, ಎಸ್‌.ಕೆ. ಗುಗ್ಗರಿ, ಶುಭಮಂಗಳ ಜೋಗೂರ ಅವರ ತಲಾ ಒಂದೊಂದು ಕೃತಿಗಳು ಮುದ್ರಣ ಕಾಣುತ್ತಿವೆ. ದಲಿತ ಕವಿ ಸಿದ್ಧಲಿಂಗಯ್ಯ ಕುರಿತು ರಾಜಕುಮಾರ ಬಡಿಗೇರ-ರಮೇಶ ಕತ್ತಿ ಅವರು ಬರೆದಿರುವ ಕೃತಿಯೂ ಸೇರಿರುವುದು ಸಾಂದರ್ಭಿಕ.

ಸುಮಾರು 5 ಲಕ್ಷ ರೂ. ಬೃಹತ್‌ ವೆಚ್ಚದಲ್ಲಿ 25 ಕೃತಿಗಳಲ್ಲಿ ಧಾರವಾಡ ನಗರದಲ್ಲಿ 2, ಬೆಂಗಳೂರಿನ ಸಾಧನಾ ಪ್ರಕಾಶನದಲ್ಲಿ 12, ಗದಗ ಕ್ಯಾಪಿಟಲ್‌ ಪ್ರಿಂಟ್ಸ್‌ನಲ್ಲಿ 11 ಕೃತಿಗಳು ಮುದ್ರಣದ ಅಂತಿಮ ಹಂತದಲ್ಲಿವೆ. ಸಂಶೋಧಕ ಡಾ| ಎಂ.ಎಂ. ಕಲಬುರಗಿ ಅವರ ಸ್ಮರಣಾ ದಿನವಾದ ಆ.30ರಂದು ಲೋಕಾರ್ಪಣೆಗೊಳ್ಳಲಿವೆ.

ಕಾಂತಾವರದ ನಾ.ಮೊಗಸಾಲೆ ಅವರ ನಾಡಿಗೆ ನಮನ ಮಾಲಿಕೆಯಲ್ಲಿ ನಾಡಿನ ಸಾಧಕರ ಕುರಿತು 600 ಕೃತಿಗಳು ಹೊರ ಬಂದಿದ್ದನ್ನು ವಿಜಯಲಕ್ಷ್ಮೀ ಗಮನಕ್ಕೆ ತಂದೆ. ಈ ವರ್ಷ 10 ಕೃತಿಗಳ ಬದಲಾಗಿ ನಮ್ಮ ಭಾಗದ 11 ಸಾಧಕರ ಕುರಿತೂ 11 ಪುಸ್ತಕ ಬರೆಸಿ, ಏಕಕಾಲಕ್ಕೆ 28 ಕೃತಿ ಹೊರ ತರಲು ಮುಂದಾಗಿದ್ದಾರೆ. ಕಡಣಿ ಎಂಬ ಕುಗ್ರಾಮದಲ್ಲಿ ಸಾಧಕರ ನೆಲದಲ್ಲೇ ಮಹಿಳೆಯೊಬ್ಬರು ಇಂತಹ ಸಾಹಸಕ್ಕೆ ಮುಂದಾಗಿರುವುದು ಚರಿತ್ರೆಯಾಗಲಿದೆ.
-ಸಿದ್ಧರಾಮಪ್ಪ ಉಪ್ಪಿನ, ಹಿರಿಯ ಸಾಹಿತಿ, ಕಡಣಿ

ಪುಸ್ತಕದ ಲೇಖಕರು, ಸಾಂಸ್ಕೃತಿಕ ಸಹೃದಯಿ ದಾನಿಗಳ ನೆರವಿನಿಂದಾಗಿ ಸಣ್ಣ ಗ್ರಾಮದಲ್ಲಿದ್ದರೂ ಸಾಹಿತ್ಯದ ಸೇವೆ ಮಾಡಲು ಸಾಧ್ಯವಾಗಿದೆ. ನಮ್ಮ ನೆಲದವರೇ ಆಗಿರುವ ಎಂ.ಎಂ. ಕಲಬುರ್ಗಿ ಅವರ ಸ್ಮರಣ ದಿನವಾದ ಆ. 30ರಂದು ಸಿಂದಗಿ ಪಟ್ಟಣದಲ್ಲಿ 28 ಕೃತಿಗಳು ಏಕಕಾಲಕ್ಕೆ ಲೋಕಾರ್ಪಣೆಗೊಳ್ಳಲಿವೆ.
-ವಿಜಯಲಕ್ಷ್ಮೀ ಕಟ್ಟಿ, ಪ್ರಕಾಶಕಿ, ಬೆರಗು ಪ್ರಕಾಶನ, ಕಡಣಿ

-ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next