Advertisement

ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ಲೋಕೋಪಯೋಗಿ ಹಗರಣ

02:40 PM Jun 25, 2017 | Team Udayavani |

ಕಲಬುರಗಿ: ಲೋಕೋಪಯೋಗಿ ಇಲಾಖೆಯಲ್ಲಿ ಮ್ಯಾನುವಲ್‌ ಟೆಂಡರ್‌ ಕರೆದಿರುವುದು, ಬೋಗಸ್‌ ಬಿಲ್‌ ಸೃಷ್ಟಿ, ಒಂದೊಂದು ಕಾಮಗಾರಿಗೆ ಎರಡು ಸಲ ಬಿಲ್‌ ಪಾವತಿ ಮಾಡಿರುವ ಹಗರಣ ಶನಿವಾರ ಮುಂದುವರೆದ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆದು ಯಾವುದೇ ಕ್ರಮ ಜರುಗದೇ ಇರುವ ಅಂಶ ಬಯಲಿಗೆ ಬಂತು. 

Advertisement

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಮುಂದುವರಿದ ಎರಡನೇ ದಿನದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪರಿಶೀಲನಾ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಜು ಡಾಂಗೆ ಇಲಾಖೆಯ ಕಾಮಗಾರಿಗಳ ಕುರಿತು ವಿವರಣೆ ನೀಡಿದರು. 

ಲೋಕೋಪಯೋಗಿ ಇಲಾಖೆಯಲ್ಲಿ ಉಪ ಗುತ್ತಿಗೆ ದಂಧೆಯೇ ಜೋರಾಗಿದೆ. ಇದರಲ್ಲಿ ಇಲಾಖಾಧಿಕಾರಿಗಳೆ ಭಾಗಿಯಾಗಿದ್ದನ್ನು ಕೇಳಿದ್ದೇವೆ. ಇನ್ಮುಂದೆ ಇದು ನಿಲ್ಲಬೇಕು. ಇಇ-ಎಇಇ ಅಧಿಕಾರಿಗಳು ಕಾಮಗಾರಿಗಳ ಸ್ಥಳಕ್ಕೆ ಕಡ್ಡಾಯವಾಗಿ ಹೋಗಬೇಕು. ಕುಳಿತಲ್ಲೇ ಕಥೆ ಹೇಳಬೇಡಿ ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರಲ್ಲದೇ ಜಿಲ್ಲಾಧಿಕಾರಿಗಳು ಆಕಸ್ಮಿಕ ಭೇಟಿಗಳನ್ನು ನೀಡಬೇಕೆಂದು ಸೂಚಿಸಿದರು. 

ಮ್ಯಾನುವೆಲ್‌ ಟೆಂಡರ್‌ ಕರೆಯಬಾರದು ಎನ್ನುವ ನಿಯಮವಿದ್ದರೂ ಹಲವು ಕಾಮಗಾರಿಗಳನ್ನು ಮ್ಯಾನುವೆಲ್‌ ಆಗಿ ಕರೆಯಲಾಗಿದೆ. ಬೋಗಸ್‌ ಬಿಲ್‌ ಎತ್ತಿ ಹಾಕಲಾಗಿದೆಯಲ್ಲದೇ ಎರಡೆರಡು ಬಿಲ್‌ ಎತ್ತಿ ಹಾಕಿರುವ ಕುರಿತಾದ ತನಿಖೆ ಏನಾಯಿತು? ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಪಿಡ್ಲುಡಿ ಇಲಾಖೆಯ ಇಇ ಅವರನ್ನು ಸಚಿವರು ಪ್ರಶ್ನಿಸಿದರು. 

ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಆದರೆ ಇನ್ನೂ ಯಾವುದೇ ಕ್ರಮ ಜರುಗಿಲ್ಲ ಎಂದು ಇಇ ತಿಳಿಸಿದರು. ಇದಕ್ಕೆ ಸಚಿವ ಡಾ| ಶರಣಪ್ರಕಾಶ ಪಾಟೀಲ, ತನಿಖಾ ಕ್ರಮದ ವರದಿ ತಮ್ಮ ಕೈಗೆ ನೀಡಿ, ಏನಾಗುತ್ತೇ ನೋಡೋಣ ಎಂದು ಹೇಳಿದರು.

Advertisement

ಜಿಲ್ಲೆಯಲ್ಲಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕಲ್ಲದೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಸೂಚನೆ ನೀಡಿದರು. ಕಲಬುರಗಿ ಜಿಲ್ಲೆಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಬದಲಾಗಿ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕುಗಳಲ್ಲಿ ಠೇವಣಿ ಇಡುವ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಲೈಗೊಳ್ಳಬೇಕು.

ಸಾರಿಗೆ ಇಲಾಖೆಯಿಂದ ಸಿಂದಗಿ ಗ್ರಾಮದಲ್ಲಿ ಚಾಲನಾ ತರಬೇತಿ ಕೇಂದ್ರ ನಡೆಸಲಾಗುತ್ತಿದ್ದು, ಈ ಕೇಂದ್ರಕ್ಕೆ ಅಪೊಚ್‌ ರಸ್ತೆ ನಿರ್ಮಾಣದ ಪ್ರಸ್ತಾವನೆ ನೀಡಬೇಕೆಂದರು. ಜಿಪಂ ಅಧ್ಯಕ್ಷೆ ಸುವರ್ಣಾ ಎಚ್‌. ಮಲಾಜಿ, ಉಪಾಧ್ಯಕ್ಷೆ ಶೋಭಾ ಎಸ್‌. ಸಿರಸಗಿ, ಆಳಂದ ಶಾಸಕ ಬಿ.ಆರ್‌.ಪಾಟೀಲ, ಜಿಲ್ಲಾ ಧಿಕಾರಿ ಉಜ್ವಲಕುಮಾರ ಘೋಷ್‌, ಹೆಪ್ಸಿಬಾರಾಣಿ ಕೊರ್ಲಪಾಟಿ, ಶಿವಶಂಕರ, ಕೆ.ಡಿ.ಪಿ. ಸದಸ್ಯರಾದ ಮಲ್ಲಿಕಾರ್ಜುನ ಸಾಗರ, ಶರಣರೆಡ್ಡಿ, ಪ್ರವೀಣ ಪ್ರಿಯಾ ಡೇವಿಡ್‌ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next