ಸೇಡಂ: ಇಲ್ಲಿ ಪುರಸಭೆ ಇದೆ, ಪ್ರತಿನಿತ್ಯ 60 ಜನ ಪೌರ ಕಾರ್ಮಿಕರು ಕೆಲಸ ಮಾಡುತ್ತಾರೆ. ಆದರೂ ಚರಂಡಿಗಳನ್ನು ಸಾರ್ವಜನಿಕರೇ ಸ್ವಚ್ಛಗೊಳಿಸಬೇಕು. ಯಾಕೆ ಹೀಗೆ ಅಂತೀರಾ? ಇರುವ 60 ಪೌರ ಕಾರ್ಮಿಕರಲ್ಲಿ 43 ಜನರನ್ನು ರಸ್ತೆ ಗುಡಿಸಲು ಮತ್ತು ಚರಂಡಿ ಸ್ವಚ್ಛ ಮಾಡಲು ಬಳಕೆ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಹೇಳುತ್ತಾರೆ.
ಪಟ್ಟಣದಲ್ಲಿರುವ ಬಡಾವಣೆಗಳಲ್ಲಿನ ಚರಂಡಿಗಳು ತುಂಬಿ ಹರಿಯುತ್ತವೆ. ಅನೇಕ ಕಡೆಗಳಲ್ಲಿ ಚರಂಡಿಯಲ್ಲಿ ಗೊಜ್ಜು ಜಮಾವಣೆಯಾಗಿ, ನೀರು ಸರಾಗವಾಗಿ ಸಾಗದೇ ರಸ್ತೆ ಮತ್ತು ಮನೆಗಳಿಗೆ ನುಗ್ಗಿದ ಉದಾಹರಣೆಗಳಿವೆ. ಪಟ್ಟಣದ ವಿದ್ಯಾನಗರದಲ್ಲಿನ ಚರಂಡಿಗಳು ತುಂಬಿ ತುಳುಕುತ್ತಿವೆ. ದೊಡ್ಡ ಅಗಸಿ, ವೆಂಕಟೇಶ ನಗರ, ಊಡಗಿ ರಸ್ತೆ, ಮಿಸ್ಕಿನಪುರ ಬಡಾವಣೆಗಳಲ್ಲೂ ಚರಂಡಿಗಳ ಸ್ಥಿತಿ ಬಿಗಡಾಯಿಸಿದ್ದು, ಖುದ್ದು ಸ್ಥಳೀಯರೇ ಸ್ವಚ್ಛತೆಗೆ ಮುಂದಾಗುತ್ತಿದ್ದಾರೆ. ತುಂಬಿ ಹರಿಯುವ ಚರಂಡಿಗಳ ದುರ್ವಾಸನೆ ಸಾಮಾನ್ಯವಾಗಿದೆ. ಜೊತೆಗೆ ಸೊಳ್ಳೆಗಳ ಕಾಟವೂ ಜಾಸ್ತಿಯಾಗಿದ್ದು, ಜನ ಪ್ರತಿನಿತ್ಯ ನರಕದ ಅನುಭವ ಎದುರಿಸುತ್ತಿದ್ದಾರೆ.
ಪೌರ ಕಾರ್ಮಿಕರೆಲ್ಲಿ: 43 ಪೌರ ಕಾರ್ಮಿಕರನ್ನು ಸ್ವಚ್ಛತೆಗೆ ಬಳಸಿ ಕೊಳ್ಳುತ್ತಿರುವುದಾಗಿ ಪುರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಚರಂಡಿಗಳೇಕೆ ಸ್ವತ್ಛವಾಗುತ್ತಿಲ್ಲ ಎಂಬುದು ಬಡಾವಣೆಯಲ್ಲಿ ವಾಸಿಸುವ ಜನರ ಪ್ರಶ್ನೆಯಾಗಿದೆ.
ಇದು ಇಂದು-ನಿನ್ನೆ ಕಥೆಯಲ್ಲ. ವರ್ಷಗಳೇ ಕಳೆಯುತ್ತಿವೆ. ಚರಂಡಿ ಸ್ವಚ್ಛ ಮಾಡದೆ ಹಾಗೆಯೇ ಬಿಡಲಾಗುತ್ತಿದೆ. ಇದರಿಂದ ದುರ್ವಾಸನೆ ಬರುತ್ತಿದೆ. ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಇಷ್ಟಾದರೂ ಅಧಿಕಾರಿಗಳು ಗಮನಹರಿಸಿಲ್ಲ. –
ವಿಶ್ವನಾಥ ಡೊಳ್ಳಾ, ನಿವಾಸಿ
ಚರಂಡಿಗಳ ಸ್ವಚ್ಛತೆಯನ್ನು ಹಂತ-ಹಂತವಾಗಿ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಾಧ್ಯವಾದಷ್ಟು ಶೀಘ್ರವೇ ಜನರ ಸಮಸ್ಯೆ ಪರಿಹರಿಸಲಾಗುವುದು. –
ಸತೀಶ ಗುಡ್ಡೆ, ಮುಖ್ಯಾಧಿಕಾರಿ, ಪುರಸಭೆ
–ಶಿವಕುಮಾರ ಬಿ. ನಿಡಗುಂದಾ