ಮಂಡ್ಯ: ಪ್ರಚೋದನಕಾರಿ ಹೇಳಿಕೆ ನೀಡಿ, ನನ್ನಿಂದ ಬೇರೆಯದೇ ಮಾತುಗಳನ್ನಾಡಿಸುವ ಯತ್ನ ಸಫಲವಾಗುವುದಿಲ್ಲ. ನನ್ನ ಆತ್ಮಸ್ಥೈಯ ಕುಗ್ಗಿಸಲೂ ಆಗುವುದಿಲ್ಲ ಎಂದು ಚಿತ್ರನಟಿ ಸುಮಲತಾ ವಿರೋಧಿಗಳಿಗೆ ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲಾ ಸಾಮಾಜಿಕ ಕ್ಷೇತ್ರದಲ್ಲಿರುವವರು. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಯಾವುದು, ಸರಿ, ತಪ್ಪು ಎಂಬ ತಿಳಿವಳಿಕೆಯಿಂದ ಮಾತನಾಡಬೇಕು ಎಂದು ಸಲಹೆ ನೀಡಿದರು.
ಪ್ರಚೋದನಕಾರಿ ಹೇಳಿಕೆ: ಅಂಬರೀಶ್ ಯಾರು ಏನೇ ಮಾತನಾಡಿದರೂ, ಡೋಂಟ್ ಕೇರ್ ಎನ್ನುತ್ತಿದ್ದರು. ನಾನು ಕೂಡ ಅಂಬರೀಶ್ ಮಾರ್ಗದರ್ಶನದಲ್ಲೇ ಹೋಗುತ್ತೇನೆ. ಪ್ರಚೋದನಕಾರಿ ಹೇಳಿಕೆ ನೀಡಿ ನನ್ನಿಂದ ಬೇರೆಯದ್ದೇ ಮಾತುಗಳನ್ನಾಡಿಸಬಹುದು ಎಂಬ ಪ್ರಯತ್ನ ಯಾವುದೇ ಕಾರಣಕ್ಕೂ ಫಲ ನೀಡವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ಷುಲ್ಲಕ ಮಾತು ಬೇಡ: ಮಹಿಳೆಯರ ಬಗ್ಗೆ ಕ್ಷುಲ್ಲಕ ಮಾತುಗಳು ಆಡಬಾರದು. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯನ್ನು ಪೂಜಿಸುತ್ತಾರೆ, ಮಹಿಳೆಯರನ್ನು ಪೂಜಿಸಿದರೆ ಒಳ್ಳೆಯದಾಗುತ್ತೆ ಎನ್ನುವ ಸಂಪ್ರದಾಯ ನಮ್ಮದು. ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾವು ಏನೇ ಮಾತನಾಡಿದರೂ ಜನಕ್ಕೆ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.
ತಲೆ ಕೆಡಿಸಿಕೊಳ್ಳುವುದಿಲ್ಲ: ನಾನು ಬೇಜಾರು ಮಾಡಿಕೊಳ್ಳುವುದಿಲ್ಲ, ನಾನ್ಯಾವ ತಪ್ಪೂ ಮಾಡಿಲ್ಲ. ಯಾವತ್ತೂ ಯಾರಿಗೂ ಸವಾಲು ಹಾಕಿಲ್ಲ. ವಿರೋಧವನ್ನೂ ಮಾಡಿಲ್ಲ. ಯಾರು ಏನೇ ಮಾತನಾಡಿದರೂ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಒಳ್ಳೆಯ, ಕೆಟ್ಟ ಸಂದೇಶ ಕೊಡುವ ಜವಾಬ್ದಾರಿ ಮಾಧ್ಯಮದವರ ಮೇಲೂ ಇದೆ. ಇದನ್ನು ಪಕ್ಷದ ಪರ ವಿರೋಧ ನೋಡದೆ ಸಮಾಜಕ್ಕೆ ಸಂದೇಶ ಕೊಡುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸುದೀಪ್, ದರ್ಶನ್, ಯಶ್ ನಮ್ಮ ಕುಟುಂಬದ ಆತ್ಮೀಯರು, ನಾನು ದುಃಖದಲ್ಲಿದ್ದಾಗ ಸುದೀಪ್ ನನಗೆ ಸಾಂತ್ವನ ಹೇಳಿದ್ದಾರೆ. ನಮ್ಮ ಅವರ ಆತ್ಮೀಯತೆ ನಾನು ಪ್ರದರ್ಶನಕ್ಕಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.