Advertisement

ಆಪರೇಶನ್‌ ಕಮಲ ಖಂಡಿಸಿ ಪ್ರತಿಭಟನೆ

05:42 AM Feb 10, 2019 | Team Udayavani |

ದಾವಣಗೆರೆ: ಬಿಜೆಪಿಯ ಸಂವಿಧಾನ ವಿರೋಧಿ ನೀತಿ ಹಾಗೂ ಆಪರೇಷನ್‌ ಕಮಲ ಖಂಡಿಸಿ ನಗರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಪಿ.ಬಿ. ರಸ್ತೆಯ ಮಾರ್ಗವಾಗಿ ಮಹಾನಗರಪಾಲಿಕೆಗೆ ತೆರಳಿ, ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ರಾಜ್ಯದಲ್ಲಿ ಸುಭದ್ರವಾಗಿರುವ ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬಿ.ಎಸ್‌ ಯಡಿಯೂರಪ್ಪ ಕೂಡ ಅಧಿಕಾರ ಲಾಲಸೆಯಿಂದ ಕುದುರೆ ವ್ಯಾಪಾರ ಮಾಡಲು ಹೊರಟಿದ್ದಾರೆ. ಇದು ಖಂಡಿತ ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್‌ವೈ ನೇರವಾಗಿ ಆಪರೇಷನ್‌ ಕಮಲಕ್ಕೆ ಕೈ ಹಾಕಿರುವ ಬಗ್ಗೆ ಈಗಾಲೇ ಮುಖ್ಯಮಂತ್ರಿಗಳು ಆಡಿಯೋ ಬಿಡುಗಡೆ ಮಾಡಿದ್ದಾರೆ. ಒಬ್ಬೊಬ್ಬ ಶಾಸಕರ ಖರೀದಿಗೆ ಬಿಎಸ್‌ವೈ 40 ರಿಂದ 50 ಕೋಟಿ ರೂ. ಆಮಿಷ ಒಡ್ಡಿದ್ದಾರೆ. ಇವರಿಗೆ ಇಷ್ಟೆಲ್ಲಾ ಹಣ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಕೋಟ್ಯಾಧಿಪತಿಗಳ ಮನೆ ಮೇಲೆ ದಾಳಿ ಮಾಡುವ ಇಡಿ, ಸಿಬಿಐಗಳು ಇಂತಹ ರಾಜಕೀಯ ಭ್ರಷ್ಟರ ಮನೆಗಳ ಮೇಲೆ ದಾಳಿ ನಡೆಸದೆ ಕೈಗೊಂಬೆಯಂತಾಗಿವೆ. ಇದು ನಿಜಕ್ಕೂ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ರೈತರು, ಮಹಿಳೆಯರು, ದಲಿತರ ಪರ ಕೆಲಸ ಮಾಡಿದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ವ್ಯರ್ಥ ಪ್ರಯತ್ನ ಬಿಜೆಪಿಯವರು ಮಾಡುತ್ತಿದ್ದಾರೆ. ಜೊತೆಗೆ ನಮ್ಮ ಸರ್ಕಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅವಿಶ್ವಾಸ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಪ್ರಧಾನಿಯಾಗಿ ರಾಹುಲ್‌ ಗಾಂಧಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌ ಮಾತನಾಡಿ, ಆಪರೇಷನ್‌ ಕಮಲ ಟೇಪ್‌ನಲ್ಲಿನ ಧ್ವನಿ ಬಿಎಸ್‌ವೈ ಅವರದ್ದು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಬಿಎಸ್‌ವೈ ಅವರು ಸ್ಪೀಕರ್‌, ಕಾಂಗ್ರೆಸ್‌ ಶಾಸಕರು, ಪ್ರಧಾನಿಯವರು ಹಾಗೂ ನ್ಯಾಯಾಧೀಧಿಶರ ಉಲ್ಲೇಖ ಮಾಡಿದ್ದು, ಟೇಪ್‌ನಿಂದಾಗಿ ನೂರಾರು ಕೋಟಿ ರೂ.ಗಳ ಡೀಲ್‌ ಬಗ್ಗೆ ಮಾತನಾಡಿರುವುದು ಇದರಿಂದ ಹೊರಬಂದಿದೆ ಎಂದರು.

ಈ ಬಗ್ಗೆ ಐಟಿ, ಇಡಿ ತನಿಖೆ ನಡೆಸಬೇಕು. ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಬಿಎಸ್‌ವೈ ಅವರು ಟೇಪ್‌ನಲ್ಲಿರುವ ಧ್ವನಿ ನನ್ನದಲ್ಲ ಎಂದಿದ್ದಾರೆ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಲಿದೆ. ತಪ್ಪಿತಸ್ಥ ಎಂಬುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದು, ನಿಜಕ್ಕೂ ಬಿಎಸ್‌ವೈ ಅವರಿಗೆ ಮಾನ, ಮರ್ಯಾದೆ ಇದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎಂದು ಒತ್ತಾಯಿಸಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪಮೇಯರ್‌ ಚಮನ್‌ಸಾಬ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ, ಮಾಜಿ ನಗರಸಭಾಧ್ಯಕ್ಷ ಎ. ನಾಗರಾಜ್‌, ಕೆ.ಜಿ. ಶಿವಕುಮಾರ್‌, ಬಿ.ಎಚ್. ವೀರಭದ್ರಪ್ಪ, ಸೈಯದ್‌ ಖಾಲೀದ್‌, ನಂಜಾನಾಯ್ಕ, ಯತಿರಾಜ್‌, ರೇವಣಸಿದ್ದಪ್ಪ, ಮುದೇಗೌಡ್ರ ಗಿರೀಶ್‌, ಶ್ರೀಕಾಂತ್‌ ಬಗರೆ, ಆರೀಫ್‌, ಮುಜಾಹಿದ್‌ ಪಾಷಾ, ಕೇರಂ ಗಣೇಶ್‌, ಅಲ್ಲಾವಲ್ಲಿ ಘಾಜಿಖಾನ್‌, ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next