ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಮಣ್ಣಿನ ಹಣತೆ, ದೀಪದ ಬುಟ್ಟಿಗಳು ಹಾಗೂ ಪಟಾಕಿಗಳದ್ದೇ ಸದ್ದು. ಆದರೆ, ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಪರಿಣಾದಿಂದಾಗಿ ಹಬ್ಬ, ಆಚರಣೆಗಳು ಕಳೆಗುಂದಿದ್ದವು. ಈ ಬಾರಿ ಎಲ್ಲಾ ಆಚರಣೆಗಳನ್ನು ಅದ್ಧೂರಿಯಾಗಿ ನಡೆಸುತ್ತಿದ್ದು, ಅದರಲ್ಲೂ ದೀಪಾವಳಿ ಹಬ್ಬ ಎಲ್ಲರ ಮನೆಯಲ್ಲಿ ಬೆಳಕಿನ ಸಂಭ್ರಮವನ್ನು ಹೆಚ್ಚಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಸೇರಿದಂತೆ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಹೆಚ್ಚುತ್ತಿದ್ದು, ಪಟಾಕಿಗಳನ್ನು ಹಚ್ಚುವುದು ಕಡಿಮೆಯಾಗಿರುವುದು ಮಾತ್ರವಲ್ಲದೇ, ಪಟಾಕಿಗಳ ಉತ್ಪಾದನೆಯಲ್ಲಿಯೂ ಕುಂಠಿತವಾಗುತ್ತಿದೆ. ನಗರದ ಪಟಾಕಿ ಮಾರಾಟಗಾರರು ಸಾಮಾನ್ಯವಾಗಿ ವಿಜಯಕಾಶಿ, ಹೂಸೂರು, ಚಂದಾಪುರ, ಅತ್ತಿಬೆಲೆ ಯಲ್ಲಿನ ಉತ್ಪಾದಕರ ಬಳಿ ಖರೀದಿಸಲಾಗುತ್ತಿದ್ದು, ನಗರದ ಮಲ್ಲೇಶ್ವರಂ, ರಾಜಾಜಿನಗರ, ಹಲಸೂರು ಆಟದ ಮೈದಾನಗಳಲ್ಲಿ ಪಟಾಕಿ ಮಳಿಗೆಗಳನ್ನು ಹಾಕಲಾಗಿದೆ. ರಾಜಾಜಿನಗರದ ಕೆಎಲ್‌ಇ ಕಾಲೇಜು ಮೈದಾನದಲ್ಲಿ 20ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ.
ಈ ಬಾರಿ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಗುತ್ತಿದ್ದು, ಪಟಾಕಿ ಹೊಡೆಯುವುದು ಒಂದು ಸಂಪ್ರದಾಯ ಅಥವಾ ಸಂಸ್ಕೃತಿ ಎಂದು ನಂಬಿದವರು ಬಂದು ಹಸಿರು ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. ಆದರೆ, ಈ ಸಲ ಉತ್ಪಾದನೆಯ ಮಟ್ಟ ಕಡಿಮೆಯಾಗಿದ್ದು, ಸುಮಾರು 10 ಲಕ್ಷ ರೂ. ಗಳ ಆರ್ಡರ್ ನೀಡಿದರೆ, ಉತ್ಪಾದಕರು ಕೇವಲ 4-5 ಲಕ್ಷ ರೂ.ಗಳ ಪಟಾಕಿಗಳನ್ನು ಮಾತ್ರ ನೀಡುತ್ತಿದ್ದಾರೆ. ಅಲ್ಲದೇ, ಶೇ. 20-25ರಷ್ಟು ಡೀಲರ್ ಬೆಲೆಯನ್ನು ಹೆಚ್ಚಿಸಲಾಗಿದೆ.
ಅಲ್ಲದೇ, ಇತ್ತೀಚಿನೆ ದಿನಗಳಲ್ಲಿ ಪಟಾಕಿ ಹಚ್ಚುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಮುಂದಿನ ಐದು-ಹತ್ತು ವರ್ಷಗಳಲ್ಲಿ ಪಟಾಕಿ ಹಚ್ಚುವವರ ಸಂಖ್ಯೆಯೇ ಇಲ್ಲದಂತಾಗಬಹುದು ಎಂದು ಪಟಾಕಿ ಅಂಗಡಿಯ ಮಾಲೀಕರೊಬ್ಬರು ತಿಳಿಸುತ್ತಾರೆ. ಸುಮಾರು 22 ವರ್ಷಗಳಿಂದ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಸರ್ಕಾರದ ಅದೇಶದ ನಂತರ ಸಂಪೂರ್ಣವಾಗಿ ಹಸಿರು ಪಟಾಕಿಗಳನ್ನೇ ಮಾರಾಟ ಮಾಡಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ವ್ಯಾಪಾರ ನಷ್ಟದಲ್ಲಿತ್ತು. ಆದರೆ, ಈ ಬಾರಿ ಅದ್ಧೂರಿಯಾಗಿ ದೀಪಾವಳಿಯನ್ನು ಆಚರಿಸಲಾಗುತ್ತಿ ದೆ. ರಜಾ ದಿನಗಳಾದ ಭಾನುವಾರ, ಸೋಮವಾರ ಗ್ರಾಹಕರ ಆಗಮನ ಹೆಚ್ಚಬಹುದಾಗಿದೆ. ಕೆಲವರು ಶಾಸ್ತ್ರಕ್ಕೆಂದು ಅಥವಾ ಮಕ್ಕಳ ಖುಷಿಗೆಂದು ಪಟಾಕಿ ಹೊಡೆದರೆ, ಇನ್ನೂ ಕೆಲವರು ಚಟಕ್ಕೆ ಹೊಡೆಯುತ್ತಾರೆ. ಆದರೆ, ಬಹುತೇಕರಲ್ಲಿ ಜಾಗೃತಿ ಮೂಡಿದೆ ಎಂದು ಪಟಾಕಿ ಅಂಗಡಿ ಮಾಲೀಕರಾದ ಮೀನಾ ತಿಳಿಸುತ್ತಾರೆ.
ನಗರದಲ್ಲಿ ಈಗಾಗಲೇ ಪಟಾಕಿಗಳ ಸದ್ದು ಶುರುವಾಗಿದ್ದು, ವ್ಯಾಪಾರವು ಚೆನ್ನಾಗಿ ನಡೆಯುತ್ತಿದೆ. ಕೊರೊನಾ ಸಂದರ್ಭಕ್ಕಿಂತ ಶೇ.20-30ರಷ್ಟು ಹೆಚ್ಚು ವ್ಯಾಪಾರ ಆಗಿದೆ. ಸರಣಿ ರಜಾದಿನಗಳು ಬಂದಿರುವ ಕಾರಣ ಈಗಾಗಲೇ ನಮ್ಮ ಅಂಗಡಿಯಲ್ಲಿ ಶೇ.80ರಷ್ಟು ಪಟಾಕಿ ಖರೀದಿಯಾಗಿದ್ದು, ಈ ಬಾರಿ ಶೇ.100 ರಷ್ಟು ವ್ಯಾಪಾರವಾಗಲಿದ್ದು, ಹಬ್ಬದ ದಿನಗಳಲ್ಲಿ ಪಟಾಕಿಗಳ ಕೊರತೆಯುಂಟಾಗಬಹುದು. ಗ್ರಾಹಕರು ಹೆಚ್ಚಿನ ಬೆಲೆಯನ್ನು ಲೆಕ್ಕಿಸದೇ, ಹಸಿರು ಪಟಾಕಿಗಳನ್ನು ಖರೀದಿಸುತ್ತಿದ್ದಾರೆ ಎಂದು ಪಟಾಕಿ ಅಂಗಡಿ ಮಾಲೀಕ ರಾಜ ಅವರು ತಿಳಿಸುತ್ತಾರೆ.
-ಭಾರತಿ ಸಜ್ಜನ್