Advertisement

ಕಾಯಿಲೆ ಜೊತೆ ಸಮಸ್ಯೆಗಳೂ ಉಲ್ಬಣ

06:03 PM Apr 18, 2020 | Suhan S |

ಹೊನ್ನಾವರ: ಜಿಲ್ಲೆಯಲ್ಲಿ ಮಂಗನ ಕಾಯಿಲೆಯೊಂದಿಗೆ ಸಮಸ್ಯೆಗಳೂ ಉಲ್ಬಣಗೊಳ್ಳುತ್ತಿದ್ದು, ಚಿಕಿತ್ಸೆಯ ವ್ಯಥೆ ಹೆಚ್ಚುತ್ತಿದೆ. ಗುಣಮುಖರಾದ ಬಡವರು ಬಿಲ್‌ ಹಿಡಿದುಕೊಂಡು ಸರ್ಕಾರದ ನೆರವಿಗಾಗಿ ಅಲೆದಾಡುವಂತಾಗಿದೆ.

Advertisement

ಹಕೀಕತ್ತೇನು?: ವಿಧಾನಸಭೆ ಬಜೆಟ್‌ ಅಧಿವೇಶನದಲ್ಲಿ ಶಿವಮೊಗ್ಗ ಜಿಲ್ಲೆಯ ಇಬ್ಬರು ಶಾಸಕರು ಧ್ವನಿ ಎತ್ತಿದ ಕಾರಣ ಮುಖ್ಯಮಂತ್ರಿಗಳು ಮಂಗನ ಕಾಯಿಲೆಯ ರೋಗಿಗಳ ಎಲ್ಲ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ಪ್ರಕಟಿಸಿದ್ದರು. ಅಂತೆಯೇ ಶಿವಮೊಗ್ಗ ಜಿಲ್ಲೆಯಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಅಲ್ಲಿಯ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಬಿಲ್‌ ಪಾವತಿ ಮಾಡುತ್ತಿದೆ. ಆದರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಆದೇಶ ಇನ್ನೂ ಜಾರಿಗೆ ಬಂದಿಲ್ಲ. ಈಗಾಗಲೇ ಆಸ್ಪತ್ರೆಯಿಂದ ಗುಣಮುಖರಾಗಿ ಬಂದ ಜಿಲ್ಲೆಯ ಹಲವು ಮಂಗನ ಕಾಯಿಲೆ ಪೀಡಿತರು ಬಿಲ್‌ ಹಿಡಿದುಕೊಂಡು ಓಡಾಡುತ್ತಿದ್ದು ಸಾಲ ಮಾಡಿ ಮನೆ, ಬಂಗಾರ ಒತ್ತೆಯಿಟ್ಟು ಗುಣವಾಗಿ ಬಂದಿದ್ದೇವೆ. ಮುಖ್ಯಮಂತ್ರಿಗಳು ಹೇಳಿದಂತೆ ನಮ್ಮ ಆಸ್ಪತ್ರೆ ವೆಚ್ಚವನ್ನು ಮರಳಿ ಕೊಡಿಸಿ ಎಂದು ವಿನಂತಿಸುತ್ತಿದ್ದಾರೆ.

ಹಣ ಸಿಗಲಿಲ್ಲ: ಇತ್ತೀಚೆಗೆ ಆರೋಗ್ಯ ಕರ್ನಾಟಕದಲ್ಲಿ ಮಂಗನ ಕಾಯಿಲೆ ಚಿಕಿತ್ಸೆಯನ್ನು ಸೇರಿಸಲಾಗಿದೆ. ಈ ಹಿಂದೆ ಚಿಕಿತ್ಸೆ ಪಡೆದವರಿಗೆ ಇದರ ಪ್ರಯೋಜನ ಸಿಗಲಿಲ್ಲ. ಆದರೆ ಇದರಲ್ಲಿ ಮಕ್ಕಳನ್ನು ಸೇರಿಸಲಾಗಿಲ್ಲ. ಹೊನ್ನಾವರ ಸಂಶಿಯ ದೀಕ್ಷಾ ಮರಾಠಿ (4), ಮೇಘಾ ಮರಾಠಿ (9) ಎಂಬ ಇಬ್ಬರು ಮಕ್ಕಳು ಮಣಿಪಾಲದಲ್ಲಿ ಗುಣಮುಖರಾಗಿದ್ದು ಅವರಿಗೆ ಹಣ ಸಿಗಲಿಲ್ಲ. ಈ ಮಕ್ಕಳ ತಾಯಿ ಹೊನ್ನಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಖಾಸಗಿ ಆಸ್ಪತ್ರೆಯವರು ಹಣ ತುಂಬದೆ ಗುಣಮುಖರಾದವರನ್ನು ಬಿಡುತ್ತಿಲ್ಲ. ಈ ಸಮಸ್ಯೆಯನ್ನು ಮುಖ್ಯಮಂತ್ರಿಗಳು ತಕ್ಷಣ ಪರಿಹರಿಸಬೇಕಾಗಿದೆ.

ಕಾಯಿಲೆ ಎಲ್ಲಿ? ಎಷ್ಟು? :  ಹೊನ್ನಾವರ, ಸಿದ್ದಾಪುರ, ಭಟ್ಕಳ, ಕುಮಟಾ, ಅಂಕೋಲಾಗಳಲ್ಲಿ ಗುರುತಿಸಲ್ಪಟ್ಟಿರುವ ಮಂಗನ ಕಾಯಿಲೆ ಈ ವರ್ಷ 47 ಜನರನ್ನು ಕಾಡಿದೆ. ಫೆಬ್ರವರಿಯಲ್ಲಿ 1 ಸಾವು ಸಂಭವಿಸಿದೆ. 14ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹೊನ್ನಾವರ 12, ಸಿದ್ದಾಪುರ 32, ಭಟ್ಕಳ, ಕುಮಟಾ, ಅಂಕೋಲಾಗಳಲ್ಲಿ ತಲಾ ಒಬ್ಬರು ಮಂಗನ ಕಾಯಿಲೆ ಪೀಡಿತರಾಗಿದ್ದಾರೆ. 7 ಜನ ಮಣಿಪಾಲ ಆಸ್ಪತ್ರೆಯಲ್ಲಿ, 5 ಜನ ಹೊನ್ನಾವರ ಸರ್ಕಾರಿ ಆಸ್ಪತೆಯಲ್ಲಿ, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದಾಪುರದ 6 ಪ್ರಾಥಮಿಕ ಕೇಂದ್ರದ ವ್ಯಾಪ್ತಿಯಲ್ಲಿ, ಹೊನ್ನಾವರದ ಗೇರಸೊಪ್ಪಾ, ಸಂಶಿ, ಖರ್ವಾ 3 ಪ್ರಾಥಮಿಕ ಕೇಂದ್ರದ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಹರಡಿದೆ.

ಮಂಗನ ಕಾಯಿಲೆ ಮತ್ತುಆರೋಗ್ಯ ಕರ್ನಾಟಕ ವಿಷಯವಾಗಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮಣಿಪಾಲದಲ್ಲಿರುವ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ಹೇಳಿದ್ದಾರೆ. ಸುನೀಲ ನಾಯ್ಕ, ಶಾಸಕ

Advertisement

 

-ಜೀಯು ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next