Advertisement
ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ದಕ್ಷಿಣಕ್ಕೆ ಕೇವಲ 22 ಕಿ.ಮೀ. ದೂರ ದಲ್ಲಿರುವ ಕಿನ್ಯ ಗ್ರಾಮ ಪಂಚಾಯತ್ ಉಳ್ಳಾಲ ತಾಲೂಕಿನ ಅತೀ ಚಿಕ್ಕ ಗ್ರಾಮ. ತಲಪಾಡಿ, ನರಿಂಗಾನ, ಕೋಟೆಕಾರು, ಮಂಜನಾಡಿಯೊಂದಿಗೆ ಗಡಿಪ್ರದೇಶವನ್ನು ಹಂಚಿಕೊಂಡಿರುವ ಈ ಗ್ರಾಮ ನೆತ್ತಿಲಪದವು ಬಳಿ ಕೇರಳ ಗಡಿಯನ್ನೂ ಹೊಂದಿದೆ.
Related Articles
Advertisement
ಮಾದವಪುರದಿಂದ ಸಾಂತ್ಯಕ್ಕೆ ಸೇತುವೆ ನಿರ್ಮಾಣವಾಗಬೇಕು ಎಂಬುದು ಕಳೆದ ಹಲವು ವರ್ಷಗಳ ಬೇಡಿಕೆ. ಸಾಂತ್ಯ ಮತ್ತು ಸುತ್ತಮುತ್ತ ಸುಮಾರು 75 ಕುಟುಂಬಗಳು ವಾಸಿಸುತ್ತಿದ್ದು, ಒಂದೆರೆಡು ಕಿ.ಮೀ. ದೂರ ದಲ್ಲಿರುವ ಮಾದವಪುರಕ್ಕೆ ತೆರಳಬೇಕಾದರೆ ಮಳೆಗಾಲದಲ್ಲಿ 8 ಕಿ.ಮೀ. ಕ್ರಮಿಸುವುದು ಇವರಿಗೆ ಅನಿವಾರ್ಯ.
ಬೇಸಗೆಯಲ್ಲಿ ಸ್ಥಳೀಯರೇ ಮಣ್ಣು, ಕಲ್ಲು ಬಳಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುತ್ತಾರೆ. ಇದು ಮಳೆಗಾಲದಲ್ಲಿ ನೀರುಪಾಲಾಗುತ್ತದೆ. ಇಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಜನಪ್ರತಿನಿ ಧಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಈಡೇರಿಲ್ಲ. ಇಲ್ಲಿ ಸೇತುವೆ ನಿರ್ಮಾಣವಾದರೆ ಸಾಂತ್ಯ ಮಾರ್ಗವಾಗಿ ಕೇರಳ ಗಡಿ ಪ್ರದೇಶವಾಗಿರುವ ನೆತ್ತಿಲಪದವು, ಕೆದುಂಬಾಡಿ, ಮಂಜೇಶ್ವರ, ಒಳರಸ್ತೆಗಳ ಮೂಲಕ ಮಿತ್ತಡ, ಕಜೆ, ಬೆಳರಿಂಗೆ ಪ್ರದೇಶವು ಹತ್ತಿರವಾಗಲಿದೆ. ಸ್ಥಳೀ ಯರು ಕೃಷಿ ಭೂಮಿಯನ್ನು ಬಿಟ್ಟುಕೊಟ್ಟಿದ್ದರಿಂದ ಕಚ್ಛಾ ರಸ್ತೆ ನಿರ್ಮಾಣವಾಗಿದೆ.
ನಾಮ ವಿಶೇಷ
ಕಿನ್ಯ ಎಂದರೆ ತುಳುವಿನಲ್ಲಿ ಸಣ್ಣದ್ದು ಎಂಬ ಅರ್ಥ. ಸುತ್ತಮುತ್ತ ದೊಡ್ಡ ಗ್ರಾಮಗಳಿದ್ದು, ಮಧ್ಯೆ ಒಂದು ಸಣ್ಣ ಗ್ರಾಮ ಇರುವುದರಿಂದ ಕಿನ್ಯ ಎಂಬ ಹೆಸರು ಬಂದಿರಬಹುದು. ಒಂದು ಗ್ರಾಮದ ಸ್ವರೂಪಕ್ಕೆ ಅನುಗುಣವಾಗಿ ಈ ಗ್ರಾಮಕ್ಕೆ ಈ ಹೆಸರು ಬಂದಿದೆ ಎನ್ನಲಾಗುತ್ತದೆ.
ಅಭಿವೃದ್ಧಿ ಕಾಮಗಾರಿಗಳು
– ಕಿನ್ಯಾ ಗ್ರಾಮದಲ್ಲಿ ಹಲವು ವರ್ಷಗಳ ಬೇಡಿಕೆಯಾಗಿರುವ ಮಿನಾದಿ- ರಹಮತ್ ನಗರ ಸಂಪರ್ಕಿಸುವ ಸೇತುವೆ ಮತ್ತು ರಸ್ತೆ ಅಭಿವೃದ್ಧಿ 1.20 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ.
– ಕುಡಿಯುವ ನೀರಿಗೆ ಜಲಜೀವನ್ ಮಿಷನ್‌ನಡಿ ಕಿನ್ಯ ಗ್ರಾಮ ಪಂಚಾಯತನ್ನು ಗುರುತಿಸಿದ್ದು, ಅನುದಾನ ಬಿಡುಗಡೆಯಾಗಿದೆ.
– ಗ್ರಾಮ ಪಂಚಾಯತ್‌ನಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗಿದ್ದು, ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾಥಿಗಳಿಗೆ ಬೇಕಾದ ರೀತಿಯಲ್ಲಿ ಮಾಹಿತಿಗಳು, ಡಿಜಿಟಲ್ ಗ್ರಂಥಾಲಯದಲ್ಲಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.
– ಉಪ ಆರೋಗ್ಯ ಕೇಂದ್ರವೂ ಮೀನಾದಿ ಬಳಿ ಇರುವ ಪಂಚಾಯತ್ ಕಚೇರಿ ಬಳಿ ಇದೆ.
ಅಭಿವೃದ್ಧಿಗೆ ಆದ್ಯತೆ: ಕಿನ್ಯ ಗ್ರಾಮ ಶೇ. 80ರಷ್ಟು ಅಭಿವೃದ್ಧಿಯನ್ನು ಕಂಡಿದ್ದು, ಬಾಕಿ ಉಳಿದಿರುವ ಗ್ರಾಮದ ಅಭಿವೃದ್ಧಿಗೆ ಶಾಸಕರ ಮಾರ್ಗದರ್ಶನದಲ್ಲಿ ಅನುದಾನ ಬಿಡುಗಡೆ ಮಾಡಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಗ್ರಾಮದ ಸಾಂತ್ಯವನ್ನು ಸಂಪರ್ಕಿಸುವ ಹೊಳೆಗೆ ಸೇತುವೆ ನಿರ್ಮಾಣಕ್ಕೂ ಶಾಸಕರಿಗೆ ಮಾಹಿತಿ ನೀಡಲಾಗಿದೆ. ಸೇತುವೆ ಆಭಿವೃದ್ಧಿಯೊಂದಿಗೆ ಗ್ರಾಮದ ಇತರ ಸಮಸ್ಯೆಗಳನ್ನೂ ಪರಿಹರಿಸಲಾಗುವುದು. – ಲಕ್ಷ್ಮೀ, ಅಧ್ಯಕ್ಷರು, ಗ್ರಾಮ ಪಂಚಾಯತ್ ಕಿನ್ಯ
ಬೇಡಿಕೆ ಹಲವು ಇಲ್ಲಿ ಕೇವಲ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾತ್ರವಲ್ಲ. ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳಿಗಾಗಿ ಸ್ಥಳೀಯರು ಎದುರು ನೋಡುತ್ತಿದ್ದಾರೆ.
-ಗ್ರಾಮದ ಮುಖ್ಯ ರಸ್ತೆಗಳು ಅಭಿವೃದ್ಧಿಯಾಗಿದ್ದು, ಒಳ ರಸ್ತೆಗಳ ಅಭಿವೃದ್ಧಿಯಾಗಬೇಕಿದೆ.
-ಮಳೆಗಾಲದಲ್ಲಿ ಕೃತಕ ನೆರೆಯನ್ನು ತಪ್ಪಿಸಲು ರಸ್ತೆಯೊಂದಿಗೆ ಚರಂಡಿ ವ್ಯವಸ್ಥೆ ನಿರ್ಮಾಣವಾಗಬೇಕು.
-ಕೃಷಿ ಭೂಮಿ ಮುಳುಗಡೆಯಾಗುವುದನ್ನು ತಪ್ಪಿಸಲು ಸಾಂತ್ಯ, ಕನಕಮುಗೇರು, ನಡುಹಿತ್ಲು, ಕುತುಬಿನಗರ, ಕುರಿಯ ಪ್ರದೇಶವಾಗಿ ತಲಪಾಡಿ ಗ್ರಾಮಕ್ಕೆ ಹರಿಯುವ ಹೊಳೆಗೆ ತಡೆಗೋಡೆ ನಿರ್ಮಾಣವಾಗಬೇಕು.
-ಪುಳಿತ್ತಡಿ ಬಳಿ ಮೆಸ್ಕಾಂ ಇಲಾಖೆ ಅಳವಡಿಸಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲ್ದರ್ಜಗೇರಿಸಬೇಕಾಗಿದೆ. ವಿದ್ಯುತ್ ತಂತಿಗಳು ತೋಟದೊಳಗೆ ಹಾದುಹೋಗಿರುವುದರಿಂದ ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಾಗಿರುತ್ತದೆ. ಶಾಸಕರ ಆದರ್ಶ ಗ್ರಾಮದಲ್ಲಿ ಈ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದರೂ ಗುತ್ತಿಗೆದಾರ ಕಾಮಗಾರಿಯನ್ನು ಪ್ರಾರಂಭಿಸಿಲ್ಲ.
-ಖಾಸಗಿ ಬಸ್‌ನೊಂದಿಗೆ ಮೂರು ಸರಕಾರಿ ಬಸ್‌ಗಳಲ್ಲಿ ಎರಡು ಮಾತ್ರ ಗ್ರಾಮದಲ್ಲಿ ಸಂಚರಿಸುತ್ತಿದ್ದು, ಈ ಬಸ್‌ಗಳು ಖಾಸಗಿ ಬಸ್‌ನ ಹಿಂದೆಯೇ ಏಕಕಾಲಕ್ಕೆ ಬರುವು ದರಿಂದ ಇದ್ದೂ ಉಪಯೋಗಕ್ಕಿಲ್ಲದಂತಾಗಿದೆ.
-ನಾಲ್ಕು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನ್ನು ಪ್ರೌಢಶಾಲೆಯನ್ನಾಗಿಸಬೇಕು, ಗ್ರಾಮ ದಲ್ಲೊಂದು ವಸತಿ ಶಾಲೆ ಹಾಗೂ ಮೈದಾನವಾಗಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ.
-ವಸಂತ ಎನ್. ಕೊಣಾಜೆ